12ನೇ ಶತಮಾನದ ಕನ್ನಡ ಶಿಲಾ ಶಾಸನ ಪತ್ತೆ
ಕನ್ನಡಪ್ರಭ ವಾರ್ತೆ, ಶಹಾಪುರ, ಏ.28
ಇತ್ತೀಜೆಗೆ ಸಗರವಾಡಿನ ಜೇವರ್ಗಿ ತಾಲೂಕಿನ ಕೇಶಿರಾಜ ಕೊಂಡನಗುಳಿಯಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ 12ನೇ ಶತಮಾನದ ಕನ್ನಡ ಶಿಲಾಶಾಸನ ಪತ್ತೆಯಾಗಿದೆ. ಈ ಶಿಲಾಶಾಸನವನ್ನು ಸಂಶೋಧಕರಾದ ಡಾ.ಎಂ.ಎಸ್. ಶಿರವಾಳ ಮತ್ತು ಎ.ಎಂ.ಸೈದಾಪುರ ಅವರು ಪತ್ತೆ ಹಚ್ಚಿದ್ದಾರೆ.
ಶಿಲಾಶಾಸನವು ಜೇವರ್ಗಿಯ ಕೊಂಡಗುಳಿ ಗ್ರಾಮದ ಹನುಮಂತ ದೇವರ ಗುಡಿಯ ಮುಂಭಾಗದಲ್ಲಿ ನೆಡಲಾಗಿದೆ. ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಈ ಶಾಸನವನ್ನು ಕೊರೆಯಲಾಗಿದೆ. ಈ ಶಾಸನವು 3 ಅಡಿ ಎತ್ತರ, ಒಂದೂವರೆ ಅಡಿ ಅಗಲ ಹಾಗೂ 1 ಅಡಿ ದಪ್ಪವಿದೆ. ಶಾಸನದಲ್ಲಿ ಬಳಸಿರುವ ಭಾಷೆ ಮತ್ತು ಲಿಪಿಗಳೆರಡೂ ಕಲ್ಯಾಣ ಚಾಲುಕ್ಯರ ಕಾಲದ ಹಳೆಗನ್ನಡದಲ್ಲಿವೆ ಎಂದು ಡಾ. ಎಂ.ಎಸ್. ಶಿರವಾಳರು ತಿಳಿಸಿದ್ದಾರೆ. ಈ ಶಾಸನದಲ್ಲಿ ಕಾಲವನ್ನು ಸೂಚಿಸುವ ತೇದಿಯನ್ನು ಎಲ್ಲಿಯೂ ದಾಖಲಿಸಿಲ್ಲ. ಹೀಗಾಗಿ ಲಿಪಿ ಶಾಸ್ತ್ರ ಮತ್ತು ಈ ಹಿಂದೆ ಸ್ಥಳೀಯವಾಗಿ ಲಭಿಸಿರುವ ಬೇರೆ ಶಾಸನದ ಆಧಾರದ ಮೇಲೆ ಈ ಕನ್ನಡ ಶಿಲಾಶಾಸನವು ಕ್ರಿಶ ಸುಮಾರು 12ನೇ ಶತಮಾನಕ್ಕೆ ಸೇರುತ್ತದೆ ಎಂದು ಎ.ಎಂ. ಸೈದಾಪುರ ಅಭಿಪ್ರಾಯಪಟ್ಟಿದ್ದಾರೆ.
ಶಾಸನದ ಪಠ್ಯ: ಸ್ವಸ್ತಿ ಶ್ರೀಮತು ಮಲ್ಲಿಕಾರ್ಜುನ ದೇವರಿಗೆ ಮೊರಠ್ಠನ ಮತ್ತರು ನಾಲುಕು ಎಂದಿದೆ. ಕಠಿಣವಾಗಿರುವ ಕಲ್ಲಿನ ಮೇಲೆ ಅಷ್ಟೇನೂ ಸುಂದರವಲ್ಲದ ಹಳಗನ್ನಡ ಲಿಪಿಯ ನಾಲ್ಕು ಸಾಲುಗಳಲ್ಲಿ ಈ ಶಾಸನವನ್ನು ಕೊರೆಯಲಾಗಿದೆ. ಈ ಶಿಲಾಶಾಸನದ ಮೊದಲ ಭಾಗದಲ್ಲಿ ಸೂರ್ಯ, ಚಂದ್ರ ಮತ್ತು ಶಿವಲಿಂಗಗಳಿವೆ. 2ನೇ ಭಾಗದಲ್ಲಿ ಖಡ್ಗ, ಆಕಳು ಮತ್ತು ಕರುಗಳ ಚಿತ್ರಗಳಿವೆ. ಸೂರ್ಯ ಚಂದ್ರರ ಚಿತ್ರಗಳು ಶಾಸನ ಮತ್ತು ಅದರಲ್ಲಿನ ದತ್ತಿಯು ಸೂರ್ಯ ಚಂದ್ರರಿರುವ ತನಕವೂ ಶಾಶ್ವತವಾಗಿರಲಿ ಎಂಬುದನ್ನು ಸಂಕೇತಿಸಿದರೆ, ಶಿವಲಿಂಗವು ಇದೊಂದು ಶೈವ ಶಾಸನ ಎಂಬುದನ್ನು ಸಂಕೇತಿಸುತ್ತದೆ. ಹಾಗೆಯೇ ಖಡ್ಗ, ಆಕಳು ಮತ್ತು ಕರುಗಳ ಚಿತ್ರಗಳು ಸತ್ಯ, ನ್ಯಾಯಗಳನ್ನು ಹಾಗೂ ಶಾಸನ ಹಾಕಿಸಿದವರಿಗೆ ಲಭಿಸುವ ಪುಣ್ಯವನ್ನು ಪ್ರತಿಪಾದಿಸುತ್ತವೆ ಎಂದು ಶಿಲಾಶಾಸನ ತಜ್ಞ ಡಾ.ಶಿರವಾಳರು ವಿವರಿಸಿದ್ದಾರೆ.