ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಈ ಕುಸ್ತಿಯೊಳ್ಗ ಪೈಲ್ವಾನ್ ರೇವುನನ್ನ ಚಿತ್ ಮಾಡ್ರಿ...

Lingaraj Badiger
Updated On : 29 Apr 2013, 11:03 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ಅದ್ಯಾಕೋ ಏನೋ, ಮಾಜಿ ಸಿಎಂ ಯಡಿಯೂರಪ್ಪನವರಿಗೆ ಬಿಜೆಪಿ ಪಶುಸಂಗೋಪನಾ ಸಚಿವ, ಆ ಪಕ್ಷದ ಗುಲ್ಬರ್ಗ ಗ್ರಾಮೀಣ ಹುರಿಯಾಳು ರೇವು ನಾಯಕ ಅಂದರೇನೆ ಸಿಟ್ಟು ಹೆಚ್ಚಾಗುತ್ತಿದೆ. ಈ ಮಾತಿಗೆ ಪುರಾವೆ ಎಂಬಂತೆ ಭಾನುವಾರ ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿ ಬಾಬೂರಾವ್ ಚವ್ಹಾಣ್ ಪರ ಪ್ರಚಾರಕ್ಕೆ ಆಗಮಿಸಿದ್ದ ಯಡಿಯೂರಪ್ಪ ರೇವುನಾಯಕ ಹೆಸರು ಹೇಳುತ್ತ ಕೋಪ ಹೊರಹಾಕಿದರು.
ಕುಸ್ತಿಪಟು ರೇವು ನಾಯಕನನ್ನು ಈ ಮಟ್ಟಕ್ಕೆ ಬೆಳೆಸಿ ದೊಡ್ಡ ತಪ್ಪು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಿ ಎಂದು ಮತದಾರರನ್ನು ಕೇಳಿಕೊಂಡರಲ್ಲದೆ ಈ ಬಾರಿಯ ಕುಸ್ತಿಯಲ್ಲಿ ಪೈಲ್ವಾನ್‌ಗೆ ಚಿತ್ ಮಾಡುವಂತೆ ಕೋರಿಕೊಂಡರು. ಬಾಬೂರಾವ್ ಚವ್ಹಾಣ್ ನಿಮ್ಮ ಸೇವಕನಂತೆ ಕೆಲಸ ಮಾಡುತ್ತಾನೆ. ಆ ಬಗ್ಗೆ ತಾವೇ ಭರವಸೆ ನೀಡುವುದಾಗಿ ಹೇಳುತ್ತ ಚವ್ಹಾಣ್ ಗೆಲ್ಲಿಸಲು ಮನವಿ ಮಾಡಿದರು.
ನಾಲ್ಕು ತಲೆಮಾರು ಕುಳಿತು ಉಣ್ಣುವಷ್ಟು ಗಳಿಕೆ ರೇವು ನಾಯಕ ಮಾಡಿಕೊಂಡಿದ್ದಾರೆ. ನಿಮ್ಮ ಬಗ್ಗೆ ಅವರಿಗೆ ಚಿಂತೆ ಯಾಕಿರಬೇಕು ಹೇಳಿ. ಮಂತ್ರಿಗಿರಿ ಕೊಟ್ಟರೂ, ಅದನ್ನು ಜನಪರವಾಗಿ ಬಳಸದೆ ತಾವೇ ಬಳಸಿಕೊಂಡರು ಎಂದು ರೇವುನಾಯಕ ವಿರುದ್ಧ ಯಡಿಯೂರಪ್ಪ ಕಿಡಿಕಾರಿದರು.
ಮಹಾಗಾಂವ್ ತಾಲೂಕು ಭರವಸೆ: ತಾವು ಸಿಎಂ ಆಗಿದ್ದಾಗ ಮಹಾಗಾಂವ್ ತಾಲೂಕು ಕೇಂದ್ರ ವಿಚಾರವಾಗಿ ಸ್ವಲ್ಪ ಹೇಳಿದ್ದರೂ ಸಾಕಾಗಿತ್ತು. ತಾವು ಆ ಕೆಲಸ ಮಾಡುತ್ತಿದ್ದುದಾಗಿ ಹೇಳಿದ ಯಡಿಯೂರಪ್ಪ ರೇವು ನಾಯಕರಿಗೆ ಈ ಕೆಲಸ ಬೇಕಾಗಿರಲಿಲ್ಲವೇನೋ, ಅದಕ್ಕೇ ಹೇಳಲಿಲ್ಲ. ನಿಮ್ಮೆಲ್ಲರ ಆಶಿರ್ವಾದ ನನಗೆ ದೊರಕಿದಲ್ಲಿ ಬರುವ ದಿನಗಳಲ್ಲಿ ಮಹಾಗಾಂವ್ ತಾಲೂಕು ಕೇಂದ್ರವಾಗಿಸುವೆ ಎಂದು ಜನತೆಗೆ ಭರವಸೆ ನೀಡಿದರು.
ಖರ್ಗೆ- ಧರಂ ಏನ್ಮಾಡಾರ್ರಿ: ಕೆಜೆಪಿ ಮುಖಂಡ ಬಿಆರ್ ಪಾಟೀಲ್ ಮಾತನಾಡುತ್ತ ಧರಂಸಿಂಗ್, ಮಲ್ಲಿಕಾರ್ಜು ಖರ್ಗೆ ಹತ್ತಾರುಸಲ ಆರಿಸಿ ಬಂದರೂ ಈ ಭಾಗದ ಪ್ರಗತಿ ಮಾಡಿಲ್ಲ. ಜನ ಇದನ್ನು ಅರಿತು ತಮ್ಮ ರಾಜಕೀಯ ನಿಲವು ಗಟ್ಟಿ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಕರೆ ನೀಡಿದರು.

ಕೆಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಅಸಾಧ್ಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ ಬರದಂತೆ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ, ಅಧ್ಯಕ್ಷ ಯಡಿಯೂರಪ್ಪ ಹೇಳಿದರು.
ನಗರದ ಸೂಪರ್ ಮಾರ್ಕೆಟ್‌ನಲ್ಲಿ ಭಾನುವಾರ ಕೆಜೆಪಿ ಅಭ್ಯರ್ಥಿಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕೆಜೆಪಿ ಪರ ಗಾಳಿ ಬಿಸುತ್ತಿದ್ದು, ಈ ಚುನಾವಣೆಯಲ್ಲಿ ಕೆಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
40 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ರೈತ, ಬಡವರ ವಿರೋಧಿ ಧೋರಣೆ ಅನುಸರಿಸಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿ ಜನತೆ ತೊಂದರೆ ಪಡುವಂತೆ ಮಾಡಿದೆ. ಕೀಳು ರಾಜಕೀಯ ಮಾಡಿ ತಮಗೆ ಅಧಿಕಾರದಿಂದ ಕೆಳಗಿಳಿಸಿದ ಜಗದೀಶ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ರೈತರಿಗೆ ಹೊಸ ಕೊಡುಗೆ ಭರವಸೆ: ಕೆಜೆಪಿ ಅಧಿಕಾರಕ್ಕೆ ಬಂದರೆ 65 ವರ್ಷ ವಯೋವುತಿ ಹೊಂದಿರುವ ಪಿಂಚಣಿ ಯೋಜನೆಯನ್ನು ಎಲ್ಲ ರೈತರಿಗೂ ವಿಸ್ತರಿಸಿ ತಲಾ 500 ಪಿಂಚಣಿ ನೀಡುವ ಮೂಲಕ ರೈತರಿಗೆ ಹೊಸ ಕೊಡುಗೆ ನೀಡುವುದಾಗಿ ಹೇಳಿದರು.
ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಕೆ. ಕಾಂತಾ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರದ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸಿ ಎಂದರು.
ಸಭೆಯಲ್ಲಿ ಎಸ್.ಕೆ. ಕಾಂತಾ, ಸುಭಾಷ ಬಿರಾದಾರ, ಉಮಾಕಾಂತ ನಿಗ್ಗುಡಗಿ, ಬಸವರಾಜ ಇಂಗಿನ್ ಸೇರದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement