ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎದ್ದು ನಿಂತ ತೆನೆ ಹೊತ್ತ ಮಹಿಳೆ

Lingaraj Badiger
Updated On : 29 Apr 2013, 11:06 am

ಕ.ಪ್ರ. ವಾರ್ತೆ, ಯಾದಗಿರಿ, ಏ.28
ಚುನಾವಣಾ ದೃಷ್ಟಿಯಿಂದ ಜಿಲ್ಲೆಯ ಯಾವ ಪಕ್ಷಗಳೂ ಗಂಭೀರವಾಗಿ ಪರಿಗಣಿಸದ ಜೆಡಿಎಸ್ ಮತದಾನದ ದಿನಕ್ಕೆ ವಾರ ಬಾಕಿಯಿರುವಾಗ ಹಠಾತ್ ಎದ್ದು ಕುಳಿತಿದೆ. ಜೆಡಿಎಸ್‌ನ ಅಭ್ಯರ್ಥಿಗಳು ಪರಸ್ಪರರಿಗೆ ಸಹಕಾರ ನೀಡುತ್ತ ಎಲ್ಲ ನಾಲ್ಕೂ ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುತ್ತಿರುವುದು ಇತರ ಅಭ್ಯರ್ಥಿಗಳು ನಿದ್ದೆಗೆಡುವಂತೆ ಮಾಡಿದೆ.
  - ಇದು ಮತದಾನದ ದಿನಕ್ಕೆ ಒಂದೇ ವಾರ ಬಾಕಿಯಿರುವಾಗಿನ ಜಿಲ್ಲೆಯ ಚುನಾವಣಾ ಚಿತ್ರಣ.
  ಜಿಲ್ಲೆಯಲ್ಲಿ ಜೆಡಿಎಸ್ ಹೇಳಿಕೊಳ್ಳುವಂಥ ಭದ್ರಬುನಾದಿಯೇನೂ ಹೊಂದಿರಲಿಲ್ಲ. ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಹಾಗೂ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪುರ ಅವರನ್ನು ಬಿಟ್ಟಿರೆ ಪಕ್ಷ ಸಂಘಟನೆ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ದರಿಂದ ಇತರ ಪಕ್ಷಗಳು ಜೆಡಿಎಸ್‌ಅನ್ನು ಪ್ರತಿಸ್ಪರ್ಧಿ ಎಂದು ಅಂದುಕೊಂಡಿರಲಿಲ್ಲ. ಆದರೆ ಯಾವಾಗ ಟಿಕೆಟ್ ಘೋಷಣೆಯಾಯಿತೋ ಆಗ ಜೆಡಿಎಸ್ ಜಿಲ್ಲೆಯಲ್ಲಿ ಸಂಚಲನ ಉಂಟುಮಾಡುವ ಶಕ್ತಿಯಾಗಿ ಹೊರಹೊಮ್ಮಿತು.
  ಅತ್ತ ಸುರಪುರದಲ್ಲಿ ಮಾಜಿ ಸಚಿವ ರಾಜುಗೌಡ ಟಿಕೆಟ್ ತಂದಿದ್ದೇ ತಡ, ಕಾಂಗ್ರೆಸ್‌ಗೆ ಅಲ್ಲಿ ಜೆಡಿಎಸ್ ನೇರ ಪೈಪೋಟಿ ಎಂಬಂತಾಯಿತು. ಏನೂ ಇಲ್ಲದ ಜೆಡಿಎಸ್‌ಗೆ ಎಲ್ಲಿಲ್ಲದ ಶಕ್ತಿ ಬಂತು. ಆದ್ದರಿಂದ ಸುರಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ಸೇ ಪ್ರತಿಸ್ಪರ್ಧಿ ಎನ್ನುವಂತಾಗಿದೆ.
ಕಂದಕೂರ ಸ್ಟ್ರಾಂಗ್: ಪಕ್ಷದ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಅವರಿಗೆ ಗುರುಮಠಕಲ್ ಕ್ಷೇತ್ರದ ಟಿಕೆಟ್ ಕಾಯಂ ಎಂಬುದು ಮೊದಲೇ ನಿಕ್ಕಿಯಾಗಿತ್ತು. ಆದ್ದರಿಂದ ಅವರು ತಮ್ಮ ಕ್ಷೇತ್ರದಲ್ಲಿ ತಳ ಮಟ್ಟದಿಂದ ಸಂಘಟನೆ ಬಲಪಡಿಸಿಕೊಳ್ಳುತ್ತ ನಡೆದಿದ್ದರು. ಇದು ಅವರಿಗೆ ವರದಾನವೂ ಆದಂತೆ ಕಾಣುತ್ತಿದೆ. ಸದ್ಯದ ಗುರುಮಠಕಲ್ ಕ್ಷೇತ್ರದ ಚಿತ್ರಣ ಗಮನಿಸಿದರೆ ಜೆಡಿಎಸ್ ಇತರ ಪಕ್ಷಗಳಿಗಿಂತ ಪ್ರಚಾರದಲ್ಲಿ ತುಸು ಮುಂದಿದೆ ಎಂದು ಹೇಳಲಾಗುತ್ತಿದೆ.
  ಕೆಜೆಪಿಯಿಂದ ವೆಂಕಟರೆಡ್ಡಿ ಮುದ್ನಾಳ, ಬಿಜೆಪಿಯಿಂದ ಗಿರೀಶ ಮಟ್ಟಣ್ಣವರ ತೀವ್ರ ಕಸರತ್ತು ನಡೆಸಿದ್ದರೂ ಕಾಂಗ್ರೆಸ್‌ನ ಚಿಂಚನಸೂರಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುತ್ತಿದೆ. ಚಿಂಚನಸೂರ ವಿರೋಧಿ ಅಲೆಯನ್ನು ಕಂದಕೂರ ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಚುರುಕಿನ ಪ್ರಚಾರ: ಯಾದಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಕೊನೆ ಗಳಿಗೆಯಲ್ಲಿ ಅಂತಿಮಗೊಂಡು, ಅದು ಎ.ಸಿ. ಕಾಡ್ಲೂರ ಪಾಲಾಯಿತು. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಅವು ಕಾಡ್ಲೂರ ಪರ ಚಲಾವಣೆಯಾದರೆ ಎಂಬ ಭೀತಿ ಇತರ ಪಕ್ಷಗಳ ಅಭ್ಯರ್ಥಿಗಳನ್ನು ಕಾಡುತ್ತಿದೆ. ಅಲ್ಲದೆ ಕ್ಷೇತ್ರದ ಎಲ್ಲ ಗ್ರಾಮಗಳಲ್ಲೂ ಜೆಡಿಎಸ್ ಅಭ್ಯರ್ಥಿ ಚುರುಕಿನ ಪ್ರಚಾರ ನಡೆಸಿದ್ದಾರೆ.
  ಶಹಾಪುರದಲ್ಲಿ ಕುರುಬ ಸಮುದಾಯದ ಶರಣಪ್ಪ ಸಲಾದಪುರ ಸ್ಪರ್ಧಿಸಿದ್ದು, ತಮ್ಮ ಸಮುದಾಯದ ಮತಗಳು ಹಂಚಿಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಕೇವಲ ತಮ್ಮ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ ಯುವಕರು ಹಾಗೂ ರೈತರನ್ನು ಆಕರ್ಷಿಸುತ್ತಿದ್ದಾರೆ. ಆದ್ದರಿಂದ ನಾಮಪತ್ರ ಸಲ್ಲಿಕೆಯಾದ 10 ದಿನಗಳಲ್ಲೇ ಜೆಡಿಎಸ್ ಜಿಲ್ಲೆಯಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಇದರಲ್ಲಿ ವೈಯಕ್ತಿಕ ವರ್ಚಸ್ಸು ಕೆಲಸ ಮಾಡುತ್ತಿದ್ದರೂ, ಇದು ಪಕ್ಷಕ್ಕಂತೂ ಲಾಭವೇ ಆಗಿದೆ.
ಪರಸ್ಪರರಿಗೆ ಸಹಕಾರ: ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಅಭ್ಯರ್ಥಿಗಳು ಪರಸ್ಪರರಿಗೆ ಸಹಕಾರ ನೀಡುತ್ತ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಯಾದಗಿರಿ ಅಭ್ಯರ್ಥಿ ಎ.ಸಿ. ಕಾಡ್ಲೂರ ಪಕ್ಕದ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಹೆಚ್ಚಿರುವ ಕಡೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಶಹಾಪುರದ ಶರಣಪ್ಪ ಸಲಾದಪುರ ಅವರು ಯಾದಗಿರಿ ಕ್ಷೇತ್ರದಲ್ಲಿ ಕುರುಬ ಸಮಾಜದ ಮತ ಹೆಚ್ಚಿರುವ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಅದೇ ರೀತಿ ಕಾಡ್ಲೂರ ಗುರುಮಠಕಲ್ ಕ್ಷೇತ್ರದಲ್ಲಿ, ನಾಗನಗೌಡ ಕಂದಕೂರ ಅವರು ಯಾದಗಿರಿ ಕ್ಷೇತ್ರದಲ್ಲಿ ಹೀಗೆ ಪರಸ್ಪರ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಇದು ಆ ಪಕ್ಷಕ್ಕೆ ಪ್ಲಸ್ ಆಗುವ ಸಾಧ್ಯತೆಯಿದೆ.
  ಆದ್ದರಿಂದ 4 ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ನೇರ ಪೈಪೋಟಿ ಎದುರಾಗುತ್ತಿದ್ದು, ಇತರ ಪಕ್ಷಗಳ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಮತದಾನಕ್ಕೆ ಒಂದು ವಾರ ಬಾಕಿಯಿದ್ದು, ಆ ವೇಳೆಗೆ ಚಿತ್ರಣ ಬದಲಾದರೂ ಆಶ್ಚರ್ಯವಿಲ್ಲ.
-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement