ನಮೋಶಿ ಪರ ಪುತ್ರ ಪ್ರಫುಲ್ ಪ್ರಚಾರ
ಗುಲ್ಬರ್ಗ: ನಗರದ ದಕ್ಷಿಣ ಮತಕ್ಷೇತ್ರದ ವಾರ್ಡ್ 34ರ ವ್ಯಾಪ್ತಿಯ ಬ್ರಹ್ಮಪುರ, ಕುಂಬಾರಗಲ್ಲಿ, ರಾಯರ ಮಠದ ಸುತ್ತಮುತ್ತ ಜೆಡಿಎಸ್ ಅಭ್ಯರ್ಥಿ ಶಶೀಲ್ ನಮೋಶಿ ಅವರ ಪರ ಪುತ್ರ ಪ್ರಫುಲ್ ನಮೋಶಿ ಪಾದಯಾತ್ರೆ ಮಾಡಿ ಮತಯಾಚಿಸಿದರು.
ನಮೋಶಿಯವರು ಎಂಎಲ್ಸಿಯಾಗಿ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಸತತ ಮೂರು ಬಾರಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಮತ್ತು 3 ಬಾರಿ ಹೈ-ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗುವ ಮೂಲಕ ಈ ಭಾಗದಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಅಭಿವೃದ್ಧಿಗೆ ನೀಡಿದ ಕೊಡುಗೆ ನೋಡಿ ಮತ ನೀಡಿ ಎಂದು ವಿನಂತಿಸಿದರು.
ಕಳೆದ ಉಪಚುನಾವಣೆಯಲ್ಲಿ ಸೋತಾಗ ಧೈರ್ಯಗೆಡದೆ ದಕ್ಷಿಣ ಮತಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿದ ತಮ್ಮ ತಂದೆಯವರು ಸಮರ್ಪಕ ಅನುದಾನ ತಂದು ಕುಡಿವ ನೀರು, ರಸ್ತೆ, ಒಳಚರಂಡಿ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಮತದಾರರು ತಮ್ಮ ತಂದೆಯವರನ್ನು ನಿಮ್ಮ ಮತ ನೀಡಿ ಬೆಂಬಲಿಸಿದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುತ್ತಾರೆ ಎಂದರು.
ಮಹಾನಗರ ಪಾಲಿಕೆ ಸದಸ್ಯೆ ರಾಜೇಶ್ವರಿ ಜಾಧವ, ಸಮೀರ್ ಬಾಗಬಾನ್, ಇಂದಿರಾ ಬನಶೆಟ್ಟಿ, ಜ್ಯೋತಿಬಾ ಜಾಧವ, ಮಹಾಂತೇಶ ಪಾಟೀಲ್ ವಾಗ್ದರ್ಗಿ, ಉಮೇಶ ಪಾಟೀಲ್ ಭಾಗವಹಿಸಿದ್ದರು.
ಕಾಂಗ್ರೆಸ್ನಿಂದ ಮಾತ್ರ ರಾಜ್ಯದ ಅಭಿವೃದ್ಧಿ
ಚಿತ್ತಾಪುರ: ಸಮಗ್ರ ರಾಜ್ಯ ಅಭಿವೃದ್ಧಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದು ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಹಾಗೂ ತೆಂಗಳಿ ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.
ತಾಲೂಕಿನ ಇಂಗನಕಲ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ನಿಂದ ಜನತೆ ಬೇಸರಗೊಂಡಿದ್ದಾರೆ. ಕೆಜೆಪಿ ಪ್ರಾದೇಶಿಕ ಪಕ್ಷ ಲೆಕ್ಕಕಿಲ್ಲ ಎಂದರು.
ಬಿಜೆಪಿ ಕೇವಲ ಭ್ರಷ್ಟಾಚಾರ ಹಾಗೂ ಜೈಲಿಗೆ ಹೋಗಿಬರುವುದರಲ್ಲಿ ಕಾಲಹರಣ ಮಾಡಿದ್ದಾರೆ. ಇದರಿಂದಾಗಿ ಜನತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಯಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸುವ ಜತೆಗೆ ರಾಜ್ಯದಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಉದ್ದಿಮೆದಾರ ಶರಣಪ್ಪ ವಾಡಿ, ಎಂ.ಡಿ. ಪಾಟೀಲ್, ನ್ಯಾಯವಾದಿ ಎನ್.ಎಚ್. ಪಾಟೀಲ್, ಎಪಿಎಂಸಿ ಸದಸ್ಯ ಶಿವರಾಜ ಪಾಟೀಲ್, ಬಸವರಾಜ ಹಾಲಕಾಯಿ, ಪರಮೇಶ್ವರ ಬೆನಕಿನಪಳ್ಳಿ, ರೇವಣಸಿದ್ದಪ್ಪ ಹಡಪದ ಇದ್ದರು.