'ನಿಮ್ಮ ಮನೆ ಆಳಾಗಿ ದುಡಿಯುತ್ತೇನೆ'
ಸುರಪುರ: ನಾನು 2004ರಿಂದ ಇಲ್ಲಿಯವರೆಗೆ ನಿಮ್ಮ ಮನೆಯ ಮಗನಾಗಿ, ಮನೆಯ ಆಳಾಗಿ ಕ್ಷೇತ್ರದಲ್ಲಿ ದುಡಿದಿದ್ದೇನೆ. ಈ ಬಾರಿ ನನ್ನನ್ನು ಆಯ್ಕೆ ಮಾಡಿದಲ್ಲಿ ಮತ್ತೆ ಆಳಾಗಿಯೇ ದುಡಿಯುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು.
ಅವರು ದೇವತ್ಕಲ್, ಶಾಂತಪುರ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದರು. ನಾನು ಶಾಸಕನಾಗುವ ಮೊದಲು ತಾಲೂಕಿನಲ್ಲಿ ಭಯದ ವಾತಾವರಣವಿತ್ತು. ಮತದಾರರು ಮತದಾನ ಮಾಡಲು ಕೂಡ ಹಿಂಜರಿಯುತ್ತಿದ್ದರು. ಇಂಥ ಪರಿಸ್ಥಿಯಲ್ಲಿ ಅಂಜದೇ ಸುರಪುರ ಕ್ಷೇತ್ರಕ್ಕೆ ನೈಜ ಸ್ವಾತಂತ್ರ್ಯ ಬರಬೇಕು ಎಂಬ ಉದ್ದೇಶದಿಂದ 2004ರಲ್ಲಿ ಬದಲಾವಣೆ ಮಾಡಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿರುವುದು ನನ್ನ ಜೀವನದಲ್ಲಿ ಅವಿಸ್ಮರಣೀಯ ಎಂದರು.
ಸರ್ವರಿಗೂ ಸಮಪಾಲು: ಈಗ ನಿರ್ಭಯವಾಗಿ ಮತ್ತು ಮುಕ್ತವಾಗಿ ತಾಲೂಕಿನ ಜನರು ಜೀವನ ಸಾಗಿಸುತ್ತಿರುವುದು ನನಗೆ ತೃಪ್ತಿ ತಂದಿದೆ. ನನ್ನ ಅಧಿಕಾರವಧಿಯಲ್ಲಿ ಎಲ್ಲ ಜಾತಿ ಜನಾಂಗದವರಿಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳ್ವೆ ಎಂಬ ತತ್ವದಡಿಯಲ್ಲಿ ಅಧಿಕಾರ ನೀಡಿದ್ದೇನೆ. ವಿಶೇಷವಾಗಿ ಹಿಂದುಳಿದ ಕುರುಬ ಜನಾಂಗಕ್ಕೆ ಪ್ರಥಮವಾಗಿ ಗ್ರಾಪಂ, ಜಿಪಂ, ತಾಪಂಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಒದಗಿಸಿಕೊಟ್ಟಿದ್ದೇನೆ. ನಾನು ಆಯ್ಕೆಯಾದ ಮೇಲೆ ಸುರಪುರದಲ್ಲಿ ಬಸ್‌ಘಟಕ, ಅಗ್ನಿಶಾಮಕ ಠಾಣೆ, 3 ಆಹಾರ ಉಗ್ರಾಣ ನಿಗಮ, ಮಿನಿ ವಿಧಾನಸೌಧ ಹಾಗೂ ರೈತರ ಜೀವನಾಡಿಯಾದ ಬೋನಾಳ, ರಾಜನಕೋಳೂರು ಏತನೀರಾವರಿ ಯೋಜನೆಗಳ ಮೂಲಕ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದೇನೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಾಲಿಟೆಕ್ನಿಕ್ ಕಾಲೇಜು, ಸರ್ಕಾರಿ ಪಿಯು ಕಾಲೇಜುಗಳನ್ನು ಮಂಜೂರು ಮಾಡಿಸಿ, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದಾಗಿ ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ರಾಜಾ ಹನುಮಪ್ಪ ನಾಯಕ, ಯಲ್ಲಪ್ಪ ಕುರುಕುಂದಿ, ಗದ್ದೆಪ್ಪ ಪೂಜಾರಿ, ನಿಂಗಣ್ಣ ಬಾದ್ಯಾಪೂರ, ಚಂದ್ರಶೇಖರ ದಂಡಿನ್ ಇದ್ದರು.
ಕೆಲಸ ನೋಡಿ ಮತ ನೀಡಿ
ಕನ್ನಡಪ್ರಭ ವಾರ್ತೆ, ಹುಣಸಗಿ, ಏ.28
ನಾನು ಶಾಸಕನಾದ ನಂತರ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ತಂದಿದ್ದೇನೆ. ಸಾವಿರಾರು ಎಕರೆಗೆ ನೀರಾವರಿ ಕಲ್ಪಿಸುವ ಮೂಲಕ ರೈತರು ನೆಮ್ಮದಿಯ ಜೀವನ ನಡೆಸಲು ಶ್ರಮಿಸಿದ ತೃಪ್ತಿಯಿದೆ. ಆದ್ದರಿಂದ ನಾನು ಮಾಡಿದ ಕೆಲಸ ನೋಡಿ ಮತ ನೀಡಿ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು.
ದೇವತ್ಕಲ್ ಜಿಪಂ ವ್ಯಾಪ್ತಿಯ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವತಕಲ್ ಸಮೀಪದ ಗ್ರಾಮಗಳಾದ ಹಾಲಭಾವಿ, ಹಂದ್ರಾಳ, ಕೋನಾಳ, ನಾಗಾರಾಳ, ದೇವಾಪುರದ ಅಂದಾಜು 5 ಸಾವಿರ ಎಕರೆ ಪ್ರದೇಶದ ರೈತರು ನೀರಾವರಿ ಇಲ್ಲದೆ ಕಂಗಾಲಾಗಿದ್ದರು. 23 ಕೋಟಿ ಅನುದಾನ ಹಂಚಿಕೆ ಮತ್ತು ಅನುಮತಿ ನೀಡಲು ತಾಂತ್ರಿಕ ಸಲಹಾ ಸಮಿತಿಯು ಈಗಾಗಲೇ ಎರಡು ಬಾರಿ ಸಭೆ ಕರೆದು ಚರ್ಚಿಸಿದೆ. ಚುನಾವಣೆ ನಂತರ ಟೆಂಡರ್ ಪ್ರಕ್ರಿಯೆ ನಡೆಯಬಹುದು ಎಂದು ಹೇಳಿದರು.
--