ನಿಸ್ವಾರ್ಥ ಸೇವೆಯಲ್ಲಿ ಅಂಚೆ ನೌಕರರು
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.28
ದೇಶದಲ್ಲಿ ಯಾರಾದರೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರೆ ಅದು ಅಂಚೆ ನೌಕರರು ಮಾತ್ರ ಎಂದು ನವದೆಹಲಿಯ ಅಖಿಲ ಭಾರತ ಅಂಚೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹಾದೇವಯ್ಯ ಅಭಿಪ್ರಾಯಪಟ್ಟರು.
ಇಲ್ಲಿಯ ಚರ್ಚ್ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ಸಂಚೆ ನೌಕರರ ಸಂಘ, ಎಂಟಿಎಸ್ ಮತ್ತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದ್ವೈವಾರ್ಷಿಕ ಅಧಿವೇಶನ ಮತ್ತು ಜಂಟಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಹೀನಾಯ ಸ್ಥಿತಿ: ಗ್ರಾಮೀಣ ಭಾಗದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕಕರನ್ನು ಸರ್ಕಾರ ಸರಿಯಾಗಿ ಪರಿಗಣಿಸುತ್ತಿಲ್ಲ. ಕಳೆದ 40-45 ವರ್ಷಗಳ ಕಾಲ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರನ್ನು ಇಂದಿನ ಸರ್ಕಾರಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿಕೊಂಡು ಆಯ್ಕೆಯಾಗುವ ಶಾಸಕರು, ಸಂಸದರಿಗೆ ನಮ್ಮ ಸರ್ಕಾರ ಪಿಂಚಣಿ ನೀಡುತ್ತಿದೆ. ಆದರೆ ಅಂಚೆ ನೌಕರರಿಗೆ ಈ ಸೌಲಭ್ಯವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಸೌಲಭ್ಯಗಳಿಗೆ ಆಗ್ರಹ: ಇಂದಿನ ಅಂಚೆ ನೌಕರರು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಅಂಚೆ ಇಲಾಖೆಗೆ ಉತ್ತಮ ಹೆಸರು ಬರುತ್ತಿದೆ. ಅದೇ ರೀತಿ ಸರ್ಕಾರ ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ಮುಂದಾಗಬೇಕಿದೆ. ಅಂಚೆ ನೌಕರರಿಗೆ ವೈದ್ಯಕೀಯ ಭತ್ಯೆ ಅಥವಾ ಹೆಚ್ಚಿನ ವೇತನ ಇತ್ಯಾದಿ ಸೌಲಭ್ಯ ನೀಡಬೇಕು. ಆದರೆ ಕೆಲಸ ಮಾತ್ರ ಹೆಚ್ಚು, ಸೌಲಭ್ಯ ಕಡಿಮೆ ಎಂಬಂತಾಗಿದ್ದು, ಇದ್ಯಾವ ನ್ಯಾಯ ಎಂದು ಖಾರವಾಗಿ ಪ್ರಶ್ನಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಲಯ ಕಾರ್ಯದರ್ಶಿ ಎಸ್.ಮಂಜುನಾಥ ಮಾತನಾಡಿ, ಜಾಗತೀಕರಣದ ದಿನಗಳಲ್ಲಿ ಅಂಚೆ ಇಲಾಖೆ ಜನತೆಯ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸುತ್ತಿದೆ. ಇದು ಅಂಚೆ ನೌಕರರು ತಮ್ಮ ವೃತ್ತಿಯ ಮೇಲಿಟ್ಟ ಪ್ರಾಮಾಣಿಕತೆಯನ್ನು ಎತ್ತಿ ತೋರುತ್ತದೆ.
ನೌಕಕರಿಗೆ ಯಾವುದೇ ರೀತಿಯಿಂದ ಅನ್ಯಾಯವಾದಾಗ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು. ನಿವೃತ್ತಿಯಾದ ಅಂಚೆ ನೌಕರರಿಗೆ ಮತ್ತು ಯುವ ಸಾಹಿತಿ ಡಾ. ಗಾಳೆಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಯಾದಗಿರಿ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ.ಮಹಾದೇವಪ್ಪ, ರಾಯಪ್ಪ, ಪಿ.ಮಲ್ಲಿಕಾರ್ಜುನ, ಕೆ.ಸಿ.ಅಣ್ಣಪ್ಪ, ದಿಗಂಬರ ಸಜ್ಜನ್, ಪಿ.ವಿ ಪತಂಗೆ ಇತರರು ಇದ್ದರು.