ಭೂತದ ಬಾಯಲ್ಲಿ ಭಗವದ್ಗೀತೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.28
ಕರ್ನಾಟಕದ ಭ್ರಷ್ಟಾಚಾರದ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿ ಕೇಳಿ ಬಂದಂತಾಗುತ್ತದೆ ಎಂದು ಬಿಜೆಪಿ ಕೇಂದ್ರ ನಾಯಕಿ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಗುಲ್ಬರ್ಗ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಮುರಿದಿದೆ ಎಂದು ಹಾವೇರಿಯಲ್ಲಿ ನಡೆದ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿ ಅವರು ವಾಗ್ದಾಳಿ ನಡೆಸಿದರು. ಕೇಂದ್ರ ಯುಪಿಎ ಸರ್ಕಾರ ಆಕಾಶ, ಭೂಮಿ ಹಾಗೂ ಭೂಮಿಯ ಕೆಳಗೂ(ಪಾತಾಳ) ಭ್ರಷ್ಟಾಚಾರ ನಡೆಸಿರುವುದು ರಾಹುಲ್‌ಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ದಾಖಲೆ ಮುರಿದದ್ದು ಕಾಂಗ್ರೆಸ್ ಸರ್ಕಾರ: ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆ 70 ಸಾವಿರ ಕೋಟಿ ಮೊತ್ತದ ಹಗರಣ ನಡೆದಿದ್ದು, 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ಮೊತ್ತದ ಅವ್ಯವಹಾರ ನಡೆಸಿದೆ. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ 1.86 ಲಕ್ಷ ಕೋಟಿ ಮೊತ್ತದ ಹಗರಣ ನಡೆಸಿದೆ. ಹೀಗೆ ಹಗರಣಗಳ ಮೊತ್ತವನ್ನು ತಾನೇ ಮುರಿದು ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿದೆ ಎಂದು ಲೇವಡಿ ಮಾಡಿದರು.
ರಾಹುಲ್‌ಜೀ ಗಾಜಿನ ಮನೆಯಲ್ಲಿದ್ದುಕೊಂಡು ಬೇರೆಯವರ ಕಡೆ ಕಲ್ಲು ಎಸೆಯಬೇಡಿ, ಭ್ರಷ್ಟಾಚಾರದ ಮನೆಯಲ್ಲಿಯೇ ಇದ್ದುಕೊಂಡು ನಿಮ್ಮದೇ ದಾಖಲೆ ನೀವೇ ಮುರಿಯುವ ಪ್ರಯತ್ನ ನಡೆಸಿದ್ದೀರಿ ಎಂಬುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.
ಜನರ ಜೇಬಿಗೆ 'ಕೈ': ಕಾಂಗ್ರೆಸ್‌ನ ಹಸ್ತ ಸದಾ ಸಾಮಾನ್ಯ ಜನರೊಟ್ಟಿಗೆ ಎಂಬ ಘೋಷಣೆ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆಗಳ ಬೆಲೆ ಏರಿಕೆಯಿಂದ ಮಾಡಿ ಜನರ ಜೇಬಿಗೆ ಹಾಕಿದೆ ಎಂದು ಆರೋಪಿಸಿದರು. ಗುಲ್ಬರ್ಗ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ರಾಜಗೋಪಾಲ ರೆಡ್ಡಿ ಮತ್ತು ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ತಮ್ಮ ಮತ ನೀಡಿ ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡಿದರು.
ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ: ಸಣ್ಣಪುಟ್ಟ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದಾಖಲೆ ನಿರ್ಮಿಸಿದೆ. ಜನತೆ ಈ ಎಲ್ಲ ಅಂಶಗಳನ್ನು ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.