ಸೇಡಂನಲ್ಲಿ ಪ್ರಚಾರ ನಡೆಸುವ ನೈತಿಕತೆ ಆಡ್ವಾಣಿಗಿದೆಯೇ?: ವೈಜನಾಥ
ಸೇಡಂ: ರೈತರ ಹೆಸರಲ್ಲಿ ಹಣ ದುರುಪಯೋಗಪಡಿಸಿಕೊಂಡ ಬಗ್ಗೆ ಸಿಬಿಐದಿಂದ ಆರೋಪ ಹೊತ್ತಿರುವ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೇಲ್ಕೂರ್ ಪರ ಪ್ರಚಾರ ಮಾಡುವ ನೈತಿಕತೆ ಭ್ರಷ್ಟಾಚಾರ ವಿರೋಧಿ ಹೇಳಿಕೆ ನೀಡುವ ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಅವರಿಗಿದೆಯೇ? ಇದು ಎಷ್ಟು ಔಚಿತ್ಯಪೂರ್ಣ ಎಂದು ಸೇಡಂ ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ್ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಆರೋಪಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪನವರ ಬಗ್ಗೆ ಮಾತನಾಡುವ ಆಡ್ವಾಣಿಯವರಿಗೆ ಇಲ್ಲಿನ ಅಭ್ಯರ್ಥಿಯ ಮೇಲಿರುವ ಆರೋಪದ ಅರಿವಿಲ್ಲವೇ ಎಂದು ಸಂಶಯ ವ್ಯಕ್ತಪಡಿಸಿದರು.
ಭರವಸೆ: ಸೇಡಂ ಮತಕ್ಷೇತ್ರದ ಜನ ಆಶೀರ್ವದಿಸಿದರೆ ತಾವು ಇಲ್ಲಿನ ಸಿಮೆಂಟ್ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ನಿಯಮಾವಳಿ ರೂಪಿಸುವುದಾಗಿ, ಅದೇ ರೀತಿ ಸೇಡಂ ಪಟ್ಟಣದ ಮಧ್ಯದಲ್ಲಿ ಹಾದು ಹೋಗುವ ಸಿಮೆಂಟ್ ಕಾರ್ಖಾನೆಯ ರೇಲ್ವೆ ಹಳಿ ತೆಗೆಸುವುದು ಮತ್ತು ಪ್ರಮುಖವಾಗಿ ಸೇಡಂ ಅನ್ನು ಜಿಲ್ಲಾ ಕೇಂದ್ರವಾಗಿಸುವ ಆಶ್ವಾಸನೆ ನೀಡಿದರು. ಈ ವೇಳೆ ಮಾಜಿ ಸಭಾಪತಿ ಚಂದ್ರಶೇಖರರೆಡ್ಡಿ ಮದನಾ, ಮುಖಂಡ ನರೇಶ ಮಲ್ಕೂಡ, ಡಾ. ವೆಂಕಟರೆಡ್ಡಿ ಕೋಲ್ಕುಂದಾ, ಟಿಎಪಿಸಿಎಂ ನಿರ್ದೇಶಕ ರವೀಂದ್ರ ಇಂಜಳ್ಳಿಕರ್ ಇದ್ದರು. ಹಲವಾರು ಜನ ವಿವಿಧ ಪಕ್ಷ ತೊರೆದು ಕೆಜೆಪಿಗೆ ಸೇರ್ಪಡೆಯಾದರು.