2 ಕಡೆ ಮತ ಚಲಾವಣೆ ಶಿಕ್ಷಾರ್ಹ ಅಪರಾಧ
ಗುಲ್ಬರ್ಗ: ಚುನಾವಣೆಯಲ್ಲಿ ಒಬ್ಬ ವ್ಯಕ್ತಿಯು ಎರಡು ಕಡೆಗೆ ಮತ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ವ್ಯಕ್ತಿಗಳು ಬಂಧನಕ್ಕೆ ಒಳಪಡುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಜಿ. ಜಗದೀಶ ಹೇಳಿದರು.
ಗುಲ್ಬರ್ಗ ಆಕಾಶವಾಣಿ ಕೇಂದ್ರದಲ್ಲಿ ಮತದಾರರ ಜಾಗೃತಿ ಅಭಿಯಾನ ಕುರಿತು ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಎರಡೆರಡು ಕಡೆ ಹೆಸರಿರುವ ಮತದಾರರ ಹೆಸರನ್ನು ಒಂದು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆದಾಗ್ಯೂ ಎರಡು ಕಡೆ ಹೆಸರಿರುವ ಮತದಾರರು ಒಂದೇ ಕಡೆ ಮತ ಚಲಾಯಿಸಬೇಕು. ಈ ಕುರಿತು ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ವ್ಯವಸ್ಥಿತ ಕ್ರಮ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 1200 ಪೊಲೀಸ್, 258 ಬಸ್ ಚಾಲಕರು, 8,275 ಚುನಾವಣಾ ಸಿಬ್ಬಂದಿ ಹಾಗೂ 508 “t’ ಗ್ರೂಪ್ ನೌಕರರು ಸೇರಿದಂತೆ ಕರ್ತವ್ಯನಿರತ 10,338 ಅಧಿಕಾರಿ ಹಾಗೂ ನೌಕರರು ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥಿತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ.56.09ರಷ್ಟು ಮತದಾನವಾಗಿದ್ದು, ಈ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಿಸಲು ಸ್ವೀಪ್ ಯೋಜನೆಯಡಿ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮತದಾರರಿಗೆ ವೋಟರ್ ಸ್ಲಿಪ್: ಇದಲ್ಲದೆ ಮತದಾರರ ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಗುವುದು, ಆಯೋಗದ ನಿರ್ದೇಶನದಂತೆ ಮೇ ಒಂದರಿಂದ ಜಿಲ್ಲೆಯ ಎಲ್ಲ ಮತದಾರರಿಗೆ ವೋಟರ್ ಸ್ಲಿಪ್ ನೀಡಲಾಗುವುದು ಎಂದರು.
ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಸಂವಿಧಾನಾತ್ಮಕ ಹಕ್ಕು. ಬೇರೆ ಬೇರೆ ಕಡೆಗೆ ವಲಸೆ ಹೋಗಿರುವವರು ಸ್ವಯಂ ಪ್ರೇರಣೆಯಿಂದ ಮತ ಚಲಾಯಿಸಬೇಕು. ತಮ್ಮ ಸಂಬಂಧಿಕರ ಮದುವೆಗೆ ಸ್ವಂತ ಖರ್ಚಿನಲ್ಲಿಯೇ ಬರುವಂತೆ ಮತದಾನ ಮಾಡಲೂ ಸ್ವಂತ ಖರ್ಚಿನಲ್ಲೇ ಬರಬೇಕು. ಬಂದೂಕಿನ ಗುಂಡಿಗಿಂತ ಮತಪತ್ರ ಹೆಚ್ಚು ಬಲಶಾಲಿಯಾಗಿದ್ದು, ಒಂದು ದಿನದ ಕೆಲಸ ತಪ್ಪಿದರೂ ಚಿಂತಿಸದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಮತದಾರರಿಗೆ ಸಕಲ ವ್ಯವಸ್ಥೆ: ಮತದಾರರಿಗಾಗಿ ನೆರಳಿನ, ಕುಡಿವ ನೀರಿನ ಹಾಗೂ ಮಹಿಳಾ ಮತದಾರರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ವೋಟಿಗಾಗಿ ಹಣ ಮತ್ತಿತರ ವಸ್ತುಗಳನ್ನು ಕೊಡುವುದು ಮತ್ತು ಸ್ವೀಕರಿಸುವುದು ಆರ್.ಪಿ. ಆಕ್ಟ್ 171ರ ಅನ್ವಯ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು.