ಅಧಿಕಾರಕ್ಕೆ ಬಂದ್ರೆ ಸುಭಾಷ್ ಮಂತ್ರಿ
ಗುಲ್ಬರ್ಗ/ಆಳಂದ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು, ಆಳಂದದಿಂದ ನೀವು ಸುಭಾಷ್ ಗುತ್ತೇದಾರರನ್ನು ಆಶೀರ್ವದಿಸಬೇಕು. ಸರ್ಕಾರದಲ್ಲಿ ಸುಭಾಷ್ಗೆ ಮಂತ್ರಿಗಿರಿ ಕಟ್ಟಿಟ್ಟ ಬುತ್ತಿ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆಳಂದದಲ್ಲಿ ತೆನೆ ಹೊತ್ತ ಮಹಿಳೆಯ ಪರವಾಗಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದರು.
ಗುತ್ತೇದಾರ್ ಶಾಸಕರಾದ ನಂತರ ಆಳಂದದಲ್ಲಿ ಅನೇಕ ಜನಪರ ಯೋಜನೆ ಕೈಗೂಡಿವೆ. ನಿಮ್ಮೆಲ್ಲರ ಸಂಪರ್ಕದಲ್ಲಿ ಸದಾಕಾಲ ಇರುವ ಗುತ್ತೇದಾರ್ ಅವರಿಗೆ ಈ ಬಾರಿಯೂ ಹರಸಬೇಕು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನಪರ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದ ಅವರು, ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಲಾಗುವುದು ಹೇಳಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮಂಗಳವಾರ ಜನಜಾತ್ರೆ. ಕುಮಾರಸ್ವಾಮಿ ಬಹಿರಂಗ ಸಭೆ ಬೆ.10ಕ್ಕೇ ನಿಗದಿಯಾಗಿತ್ತು. ಆದರೆ ಅವರು ಬಂದಾಗ ಮ. 3.30. ಆದಾಗ್ಯೂ ಜನತೆ ಕುಮಾರಸ್ವಾಮಿ ಮಾತುಗಳನ್ನಾಲಿಸಲು ಸಹನೆಯಿಂದ ಕುಳಿತಿದ್ದು ಗಮನಾರ್ಹವಾಗಿತ್ತು.
ಸಚಿವ ಸ್ಥಾನ ಖಾತ್ರಿ: ಸುಭಾಸ ಗುತ್ತೇದಾರ್ ಅವರು ಹೃದಯ ವೈಶಾಲತೆಯಿಂದ ಕೂಡಿದ ವ್ಯಕ್ತಿ. ಈ ಚುನಾವಣೆಯಲ್ಲಿ ಮತದಾರರು ಅವರನ್ನು ಗೆಲ್ಲಿಸಿ ಆಶೀರ್ವದಿಸಿದರೆ ಸಚಿವ ಸಂಪುಟದಲ್ಲಿ ಇವರಿಗೊಂದು ಮಂತ್ರಿಸ್ಥಾನ ಗ್ಯಾರಂಟಿ ಕಾದಿಡಲಾಗುತ್ತದೆ ಎಂದಾಗ ಸೇರಿದ್ದ ಜನತೆ ಕರತಾಡನ ಮಾಡಿದರು.
ತಾವು ಸಿಎಂ ಆಗಿದ್ದಾಗ ಜಾರಿಗೆ ತಂದ ಯೋಜನೆಗಳೇ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗಲಿದೆ. ವಸತಿ ರಹಿತರಿಗೆ ಮನೆ, ನಿವೇಶನ ಮಾಸಾಶನ ವೃದ್ಧಾಪ್ಯ ವೇತನ ಸೇರಿದಂತೆ ಹತ್ತು ಹಲವು ಜನೋಪಯೋಗಿ ಯೋಜನೆಗೆ ಆದ್ಯತೆ ನೀಡಲಾಗುವುದು ಎಂದ ಅವರು, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಈ ರಾಜ್ಯದ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.
ನೀರು, ನದಿ ಜೋಡಣೆಗೆ ಆದ್ಯತೆ: 65 ಸಾವಿರ ಕೋಟಿ ಬಜೆಟ್ ಕಾದಿರಿಸಿ ನದಿಗಳ ಜೋಡಣೆ ಮೂಲಕ ಕೃಷಿ ಹಾಗೂ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡುವುದು, ರೈತರ ಬೆಳೆದ ಧಾನ್ಯಗಳಿಗೆ ಮಾರುಕಟ್ಟೆ ಬೆಲೆ ಕುಸಿದರೆ 51 ಸಾವಿರ ಕೋಟಿ ಕಾದಿರಿಸಿ ಅದಕ್ಕೆ ಬೆಂಬೆಲೆ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯ ಅಂಶಗಳನ್ನು ಪುನರುಚ್ಚರಿಸಿದರು.
ಗ್ರಾಮಗಳ ವಾಸ್ತವ್ಯ ಮುಂದುವರೆಸಿ ಗ್ರಾಮೀಣರ ಸಮಸ್ಯೆ ಅರಿತು ಕೆಲಸ ಮಾಡಲಾಗುವುದು. ನಿರುದ್ಯೋಗ ವಿದ್ಯಾವಂತರಿಗೆ ತಿಂಗಳಿಗೆ 10 ಸಾವಿರ ನಿರುದ್ಯೋಗ ಭತ್ಯೆ ಹಾಗೂ 70 ವರ್ಷದ ವೃದ್ಧರಿಗೆ ತಿಂಗಳಿಗೆ 5 ಸಾವಿರ ಮಾಸಾಶನ ವಸತಿ ಯೋಜನೆಗಳಿಗಾಗಿ 75 ಕೋಟಿ, ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ 1,500 ಮಾಸಾಸನ ನೀಡಲಾಗುವುದು ಎಂದು ಪ್ರಕಟಿಸಿದರು.
ಎದುರಾಳಿಗಳ ಮಾತಿಗೆ ಬೆಲೆ ಬೇಡ: ಅಭ್ಯರ್ಥಿ ಸುಭಾಷ್ ಗುತ್ತೇದಾರ ಮಾತನಾಡಿ, ಎದುರಾಳಿಗಳ ಮಾತಿಗೆ ಕಿವಿಗೊಡದೆ ಅಭಿವೃದ್ಧಿ ಕಾರ್ಯಕ್ಕೆ ಎಂದಿನಂತೆ ಮತದಾರರು ತಮ್ಮನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಪಕ್ಷದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಅಶೋಕ ಸಾವಳೇಶ್ವರ, ಅಬ್ದುಲ್ ಸಲಾಂ ಸಗರಿ, ಅಪ್ಪಾಸಾಬ ಗುಂಡೆ, ಸುನಿಲ ನಿಪ್ಪಾಣಿ, ಮೌಲಾ ಮುಲ್ಲಾ, ಭೀಮಾಶಂಕರ ಕದಂ, ಶಿವಶರಣಪ್ಪಾ ಗಡ್ಡದ, ಶ್ರೀಶೈಲ ಪಾಟೀಲ ಮತ್ತಿತರು ಮಾತನಾಡಿ, ಸುಭಾಷ ಗುತ್ತೇದಾರ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ತಾಪಂ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಮಲ್ಲಣ್ಣಾ ನಾಗೂರೆ, ಮುಖಂಡ ಶಿವುಪುತ್ರಪ್ಪಾ ಬೆಳ್ಳೆ, ಬಾಬುಗೌಡ ಪಾಟೀಲ, ಸಂದೇಶ ಜವಳಿ, ಈರಣ್ಣಾ ಹತ್ತರಕಿ ಮತ್ತಿತರರು ಉಪಸ್ಥಿತರಿದ್ದರು.