ಜಾಥಾಕ್ಕೆ ಚಾಲನೆ
ಗುಲ್ಬರ್ಗ: ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯಿಂದ ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಿಸಲು ಅನುವಾಗುವಂತೆ ಮತದಾರರಲ್ಲಿ ಮತದಾನ ಹಕ್ಕು ಚಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಂದ ಹಮ್ಮಿಕೊಳ್ಳಲಾದ ಜಾಥಾಕ್ಕೆ ಜಿಲ್ಲಾಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷೆ ಪಲ್ಲವಿ ಆಕುರಾತಿ ಮಂಗಳವಾರ ಚಾಲನೆ ನೀಡಿದರು. ಸೂಪರ್ ಮಾರ್ಕೆಟ್, ಕೇಂದ್ರ ಬಸ್ ನಿಲ್ದಾಣ ಹಾಗೂ ಶರಣಬಸವೇಶ್ವರ ದೇವಸ್ಥಾನ ಆವರಣದಿಂದ ಹೊರಟ ಈ ಜಾಥಾಗಳು ಕನ್ನಡಭವನದಲ್ಲಿ ಸಮಾವೇಶಗೊಂಡವು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಆರೋಗ್ಯ ಇಲಾಖೆಯ ವಿವಿಧ ವಿಭಾಗದ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಕಾಂತಾ ಪಾದಯಾತ್ರೆ
ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪಟ್ಟಣ ಹೋಬಳಿಯ ಕೆರಿ ಬೋಸ್ಗಾ, ಭೀಮಳ್ಳಿ, ಪಟ್ಟಣ, ಸಾವಳಗಿ, ಸೈಯ್ಯದ್ ಚಿಂಚೋಳಿ ಗ್ರಾಮಗಳಲ್ಲಿ ಕೆಜೆಪಿ ಅಭ್ಯರ್ಥಿ ಎಸ್ಕೆ ಕಾಂತಾ ಮಂಗಳವಾರ ಪಾದಯಾತ್ರೆ ನಡೆಸಿ ಮತ ಕೇಳಿದರು. ಈ ಸಂದರ್ಭದಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಕೆಜೆಪಿ ಪ್ರಚಾರ ಸಮಿತಿಯ ಸದಸ್ಯರು, ನಗರ ಜಿಲ್ಲಾಧ್ಯಕ್ಷ ಬಸವರಾಜ ಇಂಗಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಂತಾರ ಹೋರಾಟದ ಕೆಚ್ಚು, ಪ್ರಾಮಾಣಿಕತೆಗೆ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಕಾಂತಾರನ್ನು ದಕ್ಷಿಣದಿಂದ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಯಡಿಯೂರಪ್ಪ ಕೈ ಬೆಂಬಲಿಸುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದು ಪ್ರಚಾರ ಸಭೆಗಳಲ್ಲಿ ಮಾತನಾಡಿದ ಎಲ್ಲರೂ ಹೇಳಿದರು. ರವಿ ಚೌಡಪ್ಪಗೋಳ, ಭೀಮಾಶಂಕರ ಪಟ್ಟಣ, ಚಂದ್ರಶಾ ತುಗದಿ, ಭೀಮಾಶಂಕರ ಬಂಡಿ, ರಾಮ ಜೋಷಿ, ದಯಾನಂದ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲಾಡ್ಲೇ ಮಶಾಕ್ ಜಾತ್ರೆ
ಆಳಂದ: ತಾಲೂಕಿನ ಪಡಸಾವಳಿ ಗ್ರಾಮದ ಹಿಂದೂ- ಮುಸ್ಲಿಮರ ಭಾವೈಕ್ಯತೆಯ ಆರಾಧ್ಯ ದೇವರಾದ ಧರ್ಮರಾಯ, ಲಾಡ್ಲೇ ಮಶಾಕ್ರ ಜಾತ್ರೆಯು ಮೇ 1 ಮತ್ತು 2ರಂದು ನಡೆಯಲಿದೆ. 1ರಂದು ಧರ್ಮರಾಯ ರಥೋತ್ಸವ ಸಾಯಂಕಾಲ 6 ಗಂಟೆಗೆ ನೆರವೇರಲಿದೆ. ಶಂಭುಲಿಂಗ ಸ್ವಾಮಿಜಿ, ಬಸವರಾಜೇಂದ್ರ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು ಸಮ್ಮುಖ ವಹಿಸುವರು. 2ರಂದು ಧಾನಮ್ಮದೇವಿ ಪುರಾಣ ಮಂಗಲ, ಧಾರ್ಮಿಕ ಸಭೆ ನಡೆಯುವುದು. ಜಿಡಗಾದ ಡಾ. ಮುರುಘೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಜಡೇ ಬಸವಲಿಂಗ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಧತ್ತ ಮಹಾರಾಜ ಭಾಗವಹಿಸುವರು. ರಾತ್ರಿ ದೀಪೋತ್ಸವ, ಮದ್ದು ಸುಡುವ ಕಾರ್ಯಕ್ರಮ ಗೀಗೀ ಪದಗಳು ನಡೆಯಲಿವೆ.
ಬಹುಮತ ಕೋರಿಕೆ
ಆಳಂದ: ಜೆಡಿಎಸ್ ಅಭ್ಯರ್ಥಿ ಶಾಸಕ ಸುಭಾಷ ಗುತ್ತೇದಾರ ಅವರು ಹೆಚ್ಚಿನ ಮತಗಳನ್ನು ನೀಡಿ ಚುನಾಯಿಸಬೇಕು ಎಂದು ಮಂಗಳವಾರ ವೈಜಾಪುರ, ಬೊಮ್ಮನಹಳ್ಳಿ, ಬಟ್ಟರಗಾ, ಧಂಗಾಪುರ, ಜಾವಳಿ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು.
ಇಂದು ಕಾರ್ಮಿಕರ ದಿನಾಚರಣೆ
ಗುಲ್ಬರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಲಿತ ಬಂಡಾಯ ಸಮುದಾಯ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಮೇ. 1ರಂದು ನಗರದ ಕನ್ನಡ ಭವನದಲ್ಲಿ ಸಂಜೆ 5.30ಕ್ಕೆ ಜಾಗತಿಕ ಕಾರ್ಮಿಕರ ದಿನಾಚರಣೆ ಮತ್ತು ಸಾಹಿತಿ ಚೆನ್ನಣ್ಣ ವಾಲಿಕಾರರ ವ್ಯೋಮವ್ಯೋಮ ಕಾವ್ಯದ ವಿಮರ್ಶಾ ಹೊತ್ತಿಗೆ ಲೋಕಾರ್ಪಣೆ ನಡೆಯಲಿದೆ.
ತನಿಖೆಗೆ ಆಗ್ರಹ
ಶಹಾಪುರ: ತಾಲೂಕಿನ ಹೈಯಾಳ ಬಿ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರಿನ ಚೆಕ್ಕುಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ಸಗರನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರು ಎಸ್.ಗುತ್ತೇದಾರ ಆರೋಪಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಚೆಕ್ಕುಗಳನ್ನು ನೀಡುವಾಗ ಫಲಾನುಭವಿಗಳ ಸಹಿ ನಕಲಿ ಮಾಡಿದ್ದಾರೆ ಮತ್ತು ಯಾರದೋ ಹೆಸರು ಬರೆದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟುಮಾಡಿದ್ದಾರೆ. ರಿಜಿಸ್ಟರ್ನಲ್ಲಿ ಫಲಾನುಭವಿಗಳ ಗಂಡನ ಹೆಸರು ಮತ್ತು ಊರಿನ ಹೆಸರು ಇಲ್ಲ. ವಿಚಾರಿಸಿದರೆ ಮಾಹಿತಿ ಇಲ್ಲ ಎಂದು, ರಿಜಿಸ್ಟರ್ ಪುಸ್ತಕದಲ್ಲಿ ಸಹಿ ಪಡೆದು ಚೆಕ್ ವಿತರಿಸಬೇಕೆಂಬ ಸರ್ಕಾರದ ನಿಯಮವಿದ್ದರೂ ಸಹಿ ತೆಗೆದುಕೊಳ್ಳದೆ ಬೇಕಾದವರಿಗೆ ವಿತರಿಸಲಾಗಿದೆ. ಹೈಯಾಳ ಬಿ. ಆಸ್ಪತ್ರೆಯಲ್ಲಿ ಇಷ್ಟೆಲ್ಲ ಅವ್ಯವಹಾರ ನಡೆದಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಇಲ್ಲವಾದಲ್ಲಿ ತಾಲೂಕೂ ಆರೋಗ್ಯ ಕೇಂದ್ರ ಮುಂದೆ ಪ್ರತಿಭಟಿಸಲಾಗುವುದು.