ಇಸ್ಸಿಸ್ಸೀ... ಎಂಥಾ ರಸ್ತೆ
ಯಳಸಂಗಿಯಲ್ಲಿ ತಪ್ಪದ ಕೆಸರಿನ ಗೋಳು
ಕನ್ನಡಪ್ರಭ ವಾರ್ತೆ ಆಳಂದ ಆ.1
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರದಿಂದ ಹಲವು ಯೋಜನೆಗಳ ರೂಪದಲ್ಲಿ ಹಣ ಹರಿದು ಬಂದರು ಅಧಿಕಾರಿಗಳು ಮತ್ತು ಸ್ಥಳೀಯ ಜನ ಪ್ರತಿನಿಧಿಗಳೇ ಸಮರ್ಪಕವಾಗಿ ಕ್ರಿಯಾಯೋಜನೆ ಕೈಗೊಂಡು ಕಾಮಗಾರಿ ಅನುಷ್ಠಾನ ಕೈಗೊಳ್ಳದೆ ಇರುವ ವಿಪರ್ಯಾಸ ಪ್ರಕರಣ ಎದುರಾಗುವುದು ಆಯಾ ಗ್ರಾಪಂಗೆ ಇದೊಂದು ಕಪ್ಪು ಚುಕ್ಕೆಯಾಗಿದೆ.
ಇದಕ್ಕೆ ತಾಲೂಕಿನ ಯಳಸಂಗಿ ಮತ್ತು ಕಿಣ್ಣಿಸುಲ್ತಾನ ಗ್ರಾಪಂ ವ್ಯಾಪ್ತಿಯ ಸಾಲೇಗಾಂವ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಸಿಸಿ ರಸ್ತೆಗಳು ನಿರ್ಮಿಸಿದರು ಕೆಸರಲ್ಲಿನ ಒಡಾಟ ಮಾತ್ರ ತಪ್ಪುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕಳೆದ 3 ವರ್ಷಗಳ ಹಿಂದೆಯೇ ಯಳಸಂಗಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಿ ಸುಮಾರು 49.50 ಲಕ್ಷವೆಚ್ಚದಲ್ಲಿ ಸಿಸಿ ರಸ್ತೆ, ಸಮುದಾಯ ಭವನ, ಅಂಗನವಾಡಿ ಕಟ್ಟಡ, ಚರಂಡಿಗಳನ್ನು ನಿರ್ಮಿಸಲಾಗಿದೆ.
ಇಡೀ ರಸ್ತೆ ಕೆಸರುಗದ್ದೆ: ಆದರೆ, ಗ್ರಾಮದ ನಂ.1 ವಾರ್ಡ್ನಲ್ಲಿ ರಸ್ತೆ ನಿರ್ಮಿಸದೆ ಇರುವುದರಿಂದ ರಬಸದ ಮಳೆ ಬಂದರೆ ಇಡೀ ರಸ್ತೆ ಕೆಸರುಗದ್ದೆಯಾಗಿ ನಿಲ್ಲುತ್ತಿದೆ. ಇಲ್ಲಿಂದ ಹಿರಿಯ ನಾಗರಿಕರು, ಶಾಲಾ ಬಾಲಕರು ಹೆಚ್ಚಾಗಿ ಇಲ್ಲಿಂದ ಹಾದು ಹೋಗುತ್ತಿರುವರು. ಸ್ವಲ್ಪ ಕಾಲು ಜಾರಿ ಬಿದ್ದರೆ ಮೈಯಲ್ಲ ಕೆಸರು ಆಗುವುದಲ್ಲದೆ ವೃದ್ಧರು ಕೈಕಾಲು ಮುರುಯುವ ಸ್ಥಿತಿಯಿದೆ. ಮಳೆಗಾಲ ಹೆಚ್ಚಾದರೆ ಚರಂಡಿಯಲ್ಲಿ ನೀರು ತುಂಬಿ ಹರಿಯದೆ ನಿಲ್ಲುವುದರಿಂದ ಹಂದಿಗಳು ಬಿದ್ದು ಸಾವನ್ನಪ್ಪುತ್ತಿವೆ. ಇದರಿಂದ ಗ್ರಾಮದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಚರಂಡಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಮತ್ತು ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ಮುರುಮ್ ಸುರಿಯಬೇಕೆಂದು ಕೇಳಿಕೊಂಡರು, ಮುರುಮ್ ನೀವೆ ಹಾಕಿಕೋಳಿ ಎನ್ನುತ್ತಿದ್ದಾರೆ ಎಂದು ಗ್ರಾಮದ ಶಿವಾನಂದ ಯಲ್ದೆ, ರಾಜಶೇಖರ ಐರೋಡಗಿ, ಶಂಕ್ರಪ್ಪ ಗಂಗನಳ್ಳಿ, ಶ್ರೀಮಂತ ಹೂಗಾರ, ಶಿವಪ್ಪ ಐರೋಡಗಿ, ಬಸವರಾಜ ಸವಳೆ, ದಸ್ತಗೀರ ನಧಾಪ, ಗುಂಡು, ಇಲಾಹಿ, ಸಿದ್ದಲಿಂಗ ಅತನೂರೆ ಆರೋಪಿಸಿದ್ದಾರೆ.
ಸಂಬಂಧಿತ ಗ್ರಾಪಂ ಅಧಿಕಾರಿಗಳು ನೀರು ನಿಂತ ಸ್ಥಳದಲ್ಲಿ ಮುರುಮ್ ಹಾಕಿ ಗ್ರಾಮದ ಜನರು, ಶಾಲಾ ಬಾಲಕರು ಸುಗಮವಾಗಿ ಹೋಗಲು ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಪಂಚಾಯ್ತಿ ಮುಂದೆ ಧರಣಿ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.