ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕ್ಷೀರಭಾಗ್ಯ ಪುಡಿಪುಡಿ!

Rashmi Kasaragodu
Updated On : 2 Aug 2013, 11:45 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಆ.1
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆ ಜಿಲ್ಲೆಯಲ್ಲಿ ಗೊಂದಲದೊಂದಿಗೆ ಆರಂಭಗೊಂಡಿತು.
ಏಕೆಂದರೆ- ಯೋಜನೆಯಂತೆ ಹಾಲಿನ ಪುಡಿಯಿಂದ ಸಿದ್ಧಪಡಿಸಿದ ಹಾಲನ್ನು ವಿತರಿಸುವ ಕಾರ್ಯಕ್ರಮ ಇದು. ಆದರೆ ಸರ್ಕಾರದ ಯೋಜನೆಯನ್ನು ಸುತ್ತೋಲೆಯಲ್ಲಿರುವಂತೆ ಯಥಾಸ್ಥಿತಿ ಅನುಷ್ಠಾನಕ್ಕೆ ತರುವ ಸಾಮಾನ್ಯ ಜ್ಞಾನವನ್ನೂ ಪ್ರದರ್ಶಿಸದ ಅಧಿಕಾರಿ ವರ್ಗದಿಂದಾಗಿ, ಮಕ್ಕಳಿಗೆ ಹಾಲು ಕುಡಿಸಬೇಕೋ ಅಥವಾ ಹಾಲಿನ ಪುಡಿ ಕೊಡಬೇಕೋ ಎಂಬ ಗೊಂದಲ ಏರ್ಪಟ್ಟು ಮಕ್ಕಳು ದಿಗಿಲುಗೊಳ್ಳುವಂತಾಯಿತು.
ಭೇದ- ಭಾವವೇಕೆ?: ನಗರದ ಪಂಡಿತ್ ರಂಗಮಂದಿರದಲ್ಲಿ ಗುರುವಾರ ನಡೆದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಕ್ಕಳನ್ನು ವೇದಿಕೆಗೆ ಕರೆತಂದು ಹಲವರಿಗೆ ಹಾಲು ಕುಡಿಸಿದರೆ, ಇನ್ನು ಕೆಲವರಿಗೆ ಹಾಲಿನ ಪುಡಿ ಪೊಟ್ಟಣ ನೀಡಿ ಕಳಿಸಲಾಯ್ತು. ಖುದ್ದು ಕೆಎಂಎಫ್ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ್ ಹಾಗೂ ಜಿಲ್ಲಾಧಿಕಾರಿ ಸಹಿತ ಅಧಿಕಾರಿ ವರ್ಗದೆದುರೇ ಇಂತಹ ಅಪಸವ್ಯ ನಡೆಯಿತು. ಕೊನೆ ಪಕ್ಷ ಉದ್ಘಾಟನೆ ಸಮಾರಂಭದಲ್ಲಾದರೂ ವೇದಿಕೆಗೆ ಕರೆತರುವ ಮಕ್ಕಳಿಗೆಲ್ಲರಿಗೂ ಹಾಲನ್ನೇ ಕುಡಿಯಲು ಕೊಡುವ ಮೂಲಕ ಉತ್ತಮ ಚಾಲನೆ ನೀಡಬೇಕೆಂಬ ಚಿಂತನೆಗೂ ಬರವಿದ್ದದ್ದು ಗಮನಾರ್ಹವಾಗಿತ್ತು.
ವೇದಿಕೆ ಹತ್ತಿದ್ದ ಅಂಗನವಾಡಿ ಮಕ್ಕಳಲ್ಲಿ ಕೆಲವರು ಅಧಿಕಾರಿಗಳು- ಗಣ್ಯರಿಂದ ಹಾಲು ಕುಡಿದು ಫೋಟೋಗೆ ಪೋಸು ಕೊಟ್ಟರೆ ಇನ್ನು ಕೆಲವು ಮಕ್ಕಳು ಮುಖ ಸಿಂಡರಿಸಿಕೊಂಡು ಕೈಗಿಟ್ಟ ಹಾಲಿನ ಪುಡಿ ಪೊಟ್ಟಣ ನೋಡುತ್ತ ತಾವು ಕುಳಿತಿದ್ದ ಆಸನಗಳತ್ತ ಮರಳಬೇಕಾಯ್ತು. ಇದನ್ನು ಕಂಡ ಹಲವರು ಮರುಗಿದರು. ಆದರೆ ಸಮಾರಂಭದ ಆಯೋಜಕರಾದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗಾಗಲಿ, ಅಂಗನವಾಡಿ ನಿಯಂತ್ರಣ ಹೊಂದಿರುವ ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆಯವರಿಗಾಗಲಿ, ಸಿಇಒ ಪಲ್ಲವಿ ಆಕುರಾತಿ, ಜಿಲ್ಲಾಧಿಕಾರಿ ಪ್ರಸನ್ನಕುಮಾರ ಹಾಗೂ ವೇದಿಕೆಯಲ್ಲಿದ್ದ ಶಾಸಕರು, ಜಿಪಂ ಅಧ್ಯಕ್ಷರು, ಸದಸ್ಯರಾಗಲಿ ಈ ಬೆಳವಣಿಗೆ ಬಗ್ಗೆ ಏನನ್ನೂ ಹೇಳಲಿಲ್ಲ.
ಉದ್ಘಾಟನೆಯಲ್ಲಿ ನುಡಿಮುತ್ತುಗಳು
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಮಾತನಾಡಿ, ವಿತರಿಸಲಾಗುವ ಹಾಲಿನ ಪುಡಿಯನ್ನು ಅಂಗನವಾಡಿ ಹಾಗೂ ಶಾಲೆಯವರು ಸ್ವಚ್ಛವಾಗಿ ಶೇಖರಿಸಿಟ್ಟುಕೊಳ್ಳಬೇಕು. ಹಾಲು ನೀಡುವ ಸಮಯ ಹೊರತುಪಡಿಸಿದಂತೆ ಅನ್ಯ ಕಾರಣ ನಿಮಿತ್ತ ಹಾಲಿನ ಪುಡಿಯ ಪ್ಯಾಕೆಟ್ ಬಿಚ್ಚಬಾರದು. ಬಿಚ್ಚಿದರೆ ಪುಡಿಯ ಮಾಯಿಶ್ಚರೈಸರ್ ಹಾಳಾಗುವುದರೊಂದಿಗೆ ಅದರಲ್ಲಿನ ಸತ್ವ ಪದಾರ್ಥಗಳು ಕ್ಷೀಣಗೊಳ್ಳುತ್ತವೆ ಎಂದು ಹೇಳಿದರು.
ಹಾಲಿನ ಪುಡಿಯನ್ನು ಚೆನ್ನಾಗಿ ಕಾಯಿಸಿದ ಶುದ್ಧ ನೀರಿನಲ್ಲಿ ಬೆರಸಿ ಸೇವಿಸಬೇಕು. ಹಾಲನ್ನು ಸೇವಿಸಲು ಬಳಸುವ ಲೋಟ ಶುದ್ಧವಾಗಿರಬೇಕು. ಇದನ್ನು ಹಾಲು ಕೊಡುವ ಮುನ್ನ ಸಂಬಂಧಪಟ್ಟವರು ಗಮನಿಸಬೇಕು. ಉತ್ತಮ ಪೋಷಕಾಂಶಗಳನ್ನು ಒದಗಿಸುವ ಹಾಲಿನಿಂದ ಮಕ್ಕಳು ದೃಢಕಾಯರಾಗುತ್ತಾರೆ.
ಯೋಜನೆ ಸಮರ್ಪಕ ಜಾರಿಗೆ ಸಹಕರಿಸಿ: ಈ ಯೋಜನೆ ಸಮರ್ಪಕ ಜಾರಿಗೆ ಜಿಪಂ ಸದಸ್ಯರು, ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಹಾಲಿನ ಪುಡಿಯ ಸಂಗ್ರಹ ಹಾಗೂ ನೀರಿನ ಸ್ಪಚ್ಛತೆ ಬಗ್ಗೆ ಪರಿಶೀಲಿಸಬೇಕು. ಅಂಗನವಾಡಿ ಹಾಗೂ ಶಾಲೆಗಳಿಗೆ ನೀರನ್ನು ಶುದ್ಧೀಕರಿಸಲು ನೀರು ಶುದ್ಧೀಕರಣ ಯಂತ್ರವನ್ನು ಒದಗಿಸಲಾಗಿದೆ. ಅಪೌಷ್ಟಿಕತೆ ನಿವಾರಣೆಗೆ ಈ ಯೋಜನೆ ಉತ್ತಮವಾಗಿದೆ ಎಂದು ಹೇಳಿದರು.
ಹಾಲಿನ ಪುಡಿ ಸಂಗ್ರಹಕ್ಕೆ ವ್ಯವಸ್ಯೆಯಿದೆಯೇ?: ಹಾಲಿನ ಪುಡಿಯ ಶೇಖರಣೆಯಲ್ಲಿ ಏನೆಲ್ಲ ತೊಂದರೆಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೆಚ್ಚಿನ ಪ್ರಮಾಣದಲ್ಲಿ ಪುಡಿ ಸಂಗ್ರಹ ದೊಡ್ಡ ತಲೆನೋವು. ಮೊದಲೇ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿರುವ ಅಂಗನವಾಡಿ, ಶಾಲೆಗಳಲ್ಲಿ ಈ ಪುಡಿ ದಾಸ್ತಾನಿಗೆ ಯಾವ ವ್ಯವಸ್ಥೆಗಳೂ ಇಲ್ಲ. ಈ ಸಂಗತಿ ಹೊರ ಬರಲೇ ಇಲ್ಲ.
ಕ್ಷೀರಭಾಗ್ಯ ಹಾಲಿನ ಪುಡಿ ವಿತರಣೆ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗುವಂತೆ ಶಾಲೆಗಳ ಮುಖ್ಯಶಿಕ್ಷಕರು, ಎಸ್ಡಿಎಂಸಿ ಸದಸ್ಯರು ನೋಡಿಕೊಳ್ಳಬೇಕೆಂದು ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ ತೆಲ್ಕೂರ್ ತಿಳಿಸಿದರು.
ಕೆಎಂಎಫ್ ಗುಲ್ಬರ್ಗ- ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ರಾಜ್ಯದ ಪ್ರತಿ ಮಗುವೂ ಹಾಲು ಸೇವಿಸಬೇಕು. ಎಲ್ಲ ಮಕ್ಕಳಲ್ಲೂ ಸಾಮರ್ಥ್ಯ ಹೆಚ್ಚಬೇಕೆಂಬ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಈ ಯೋಜನೆ ಘೋಷಿಸಿದ್ದಾರೆ, ಇದು ಶ್ಲಾಘನೀಯ ಎಂದರು.
ಜಿಲ್ಲೆಯ 6 ಲಕ್ಷ ಮಕ್ಕಳಿಗೆ ಲಾಭ: ಅಧ್ಯಕ್ಷತೆ ವಹಿಸಿದ್ದ ಶಾಸಕ ದತ್ತಾತ್ರೇಯ ಮಾತನಾಡಿ, ಈ ಭಾಗದಲ್ಲಿ ಗೋಚರಿಸುವ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಕ್ಷೀರಭಾಗ್ಯ ಯೋಜನೆ ಸಹಕಾರಿಯಾಗಿದೆ. ಜಿಲ್ಲೆಯ 6 ಲಕ್ಷ ಮಕ್ಕಳಿಗೆ ಲಾಭವಾಗಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಿಗೂ ನೀರು ಶುದ್ಧೀಕರಿಸುವ ಯಂತ್ರಗಳನ್ನು ಒದಗಿಸಿಕೊಡಬೇಕು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಪಂ ಸದಸ್ಯರಾದ ಸಿದ್ಧಾರ್ಥ ಬಸರಿಗಿಡ ಮಾತನಾಡಿದರು. ಸಿಇಒ ಪಲ್ಲವಿ ಆಕುರಾತಿ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಸಾವಳೇಶ್ವರ ವೇದಿಕೆಯಲ್ಲಿದ್ದರು. ಡಿಡಿಪಿಐ ಜಯರಾಂ ಸ್ವಾಗತಿಸಿದರು. ಜಿಪಂ ಡಿಆರ್ಡಿಎ ಯೋಜನಾ ನಿರ್ದೇಶಕ ಎಸ್.ಎಂ. ಕೆಂಚಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮಂಜುನಾಥ್ ವಂದಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement