ಪುರಸಭೆ ನಿರ್ಲಕ್ಷ್ಯ: ರಸ್ತೆ ಬದಿ ಬಿದ್ದಿರುವ ಹೈಮಾಸ್ಟ್ ಕಂಬ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಆ.1
ಇಲ್ಲಿನ ಪುರಸಭೆಯವರು ಲಕ್ಷಾಂತರ ಹಣ ಖರ್ಚು ಮಾಡಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಅವುಗಳಲ್ಲಿ ಕೆಲವು ನಾಮಕಾವಸ್ತೆಯಂತೆ ಕಂಡು ಬರುತ್ತಿದ್ದು, ಕೆಲವು ಕಡೆ ಇದ್ದ ಬಲ್ಬುಗಳಲ್ಲಿ ಒಂದು ಅಥವಾ ಎರಡು ಬೀಳುತ್ತಿದ್ದರೇ ಇನ್ನು ಕೆಲವು ನಮ್ಮಲ್ಲಿ ಬೆಳಕು ಯಾವಾಗ ಬರುತ್ತದೋ ಎಂದು ಕಂಬಗಳು ಕುಳಿತಂತೆ ಕಾಣುತ್ತಿವೆ.
ಕೊಳೆತ ಬಿದ್ದ ಹೈಮಾಸ್ಟ್ ಕಂಬ: ಕೆಲ ತಿಂಗಳುಗಳ ಹಿಂದೆ ಇಲ್ಲಿನ ಸದಾ ಜನಜಂಗುಳಿಯಿಂದ ಕೂಡಿರುವ ನಾಗಾವಿ ಕ್ರಾಸ್ ಬಳಿ ಇರುವ ಅತೀ ಕಳಪೆ ಗುಣಮಟ್ಟದ ಹೈಮಾಸ್ಟ್ ಕಂಬ ಹಾಕಿರುವುದರಿಂದ ಅದು ಕೆಲವೇ ತಿಂಗಳುಗಳಲ್ಲಿ ಕಂಬವು ಕೊಳೆತು ಮುರಿದು ಬಿದ್ದಿದ್ದು.
ಆ ಸಮಯದಲ್ಲಿ ಅಲ್ಲಿ ಜನರು ಇರದ್ದಿದರಿಂದ ಈ ಅವಘಡದಲ್ಲಿ ಯಾರಿಗೂ ಯಾವುದೇ ಅಪಾಯವಾಗದೆ ಹಾನಿಯಾಗಿರುವುದಿಲ್ಲ.
ಉಪಯೋಗಕ್ಕೆ ಬಾರದಂತೆ: ಬಿದ್ದ ಹೈಮಾಸ್ಟ್ ಕಂಬವನ್ನು ಪುರಸಭೆಯವರು ರಸ್ತೆಯ ಪಕ್ಕದಲ್ಲಿ ಇರುವ ಕಬರಸ್ತಾನ (ಸ್ಮಶಾನ) ಗೋಡೆಯ ಹತ್ತಿರ ಹಾಕಿ ಹಲವು ತಿಂಗಳು ಕಳೆದರೂ ಅದನ್ನು ತೆಗೆದು ಹೊಸದಾಗಿ ಕಂಬ ಕೂಡಿಸುವ ಕೆಲಸ ಮಾಡಿಲ್ಲ. ಬಿದ್ದ ಕಂಬ ಮಳೆಯಲ್ಲಿ ನೆನೆದು ಹಾಗೂ ಜನರು ಅಲ್ಲಿ ಮೂತ್ರ ಮಾಡುವುದರಿಂದ ಸಂಪೂರ್ಣ ಕಂಬ ಕೊಳೆತು ಉಪಯೋಗಕ್ಕೆ ಬಾರದ ರೀತಿಯಲ್ಲಿದೆ.
ಇದನ್ನು ಶಾಸಕರು ಹಾಗೂ ಪುರಸಭೆಯ ಚುನಾಯಿತ ಪ್ರತಿನಿಧಿಗಳೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಂಡೂ ಕಾಣದಂತಿರುವುದು ಜನರ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ರಾತ್ರಿ ವೇಳೆ ಪಟ್ಟಣದ ಎಲ್ಲ ಹೈಮಾಸ್ಟ್ ಕಂಬಗಳಲ್ಲಿ ವಿದ್ಯುತ್ ನೀಡಿ ಕತ್ತಲು ಮುಕ್ತ ಪಟ್ಟಣವಾಗಿ ಮಾಡುವರೇ ಕಾದು ನೋಡಬೇಕು.