ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಷ್ಟ್ರೀಯ ಹೆದ್ದಾರಿ; 28 ಪ್ರಸ್ತಾವನೆ ನೆನೆಗುದಿಗೆ

Rashmi Kasaragodu
Updated On : 2 Aug 2013, 11:54 am

 ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಆ.1
ತನ್ನೊಡಲಲ್ಲಿ ಹರಡಿಕೊಂಡಿರುವ 4,899 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ 2009ರಿಂದ ಕೇಂದ್ರದ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯಕ್ಕೆ ರವಾನಿಸುತ್ತಿರುವ ಪ್ರಸ್ತಾವನೆಗಳು ಧೂಳು ತಿನ್ನುತ್ತಿವೆ.
ರೇಲ್ವೆಯಂತೆ ರಾಷ್ಟ್ರೀಯ ಹೆದ್ದಾರಿ ಸೌಲಭ್ಯದಿಂದಲೂ ರಾಜ್ಯ ವಂಚಿತ. ಅದರಲ್ಲೂ ನಿನ್ನೆ- ಮೊನ್ನೆವರೆಗೂ ಹೈ- ಕ ನೆಲ ರಾಷ್ಟ್ರೀಯ ಹೆದ್ದಾರಿ ಜಾಲದೊಂದಿಗೆ ಸಂಪರ್ಕವನ್ನೇ ಹೊಂದಿರಲಿಲ್ಲ ಎಂಬುದು ಕಟುವಾಸ್ತವ.
ಪರಿಸ್ಥಿತಿ ಹೀಗಿರುವಾಗ ತನ್ನ ಉದ್ದಗಲಕ್ಕೂ ಹರಡಿಕೊಂಡಿರುವ, ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರ, ಗೋವಾ, ತಮಿಳುನಾಡು ಸೇರಿದಂತೆ ಅನ್ಯ ರಾಜ್ಯಗಳೊಂದಿಗೆ ಸಂಪರ್ಕ ಬೆಸೆಯುವಂತಹ ಮಹತ್ವದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳೆಂದು ಘೋಷಿಸಿ ಮೇಲ್ದರ್ಜೆಗೇರಿಸಿ ಎಂದು ರಾಜ್ಯದಿಂದ 2009ರ ಮಾರ್ಚ್ತಿಂಗಳಿಂದ 2013ರ ಜುಲೈ ತಿಂಗಳವರೆಗೂ ನಿರಂತರ ಪ್ರಸ್ತಾವನೆಗಳು ಸಲ್ಲಿಸಲ್ಪಟ್ಟಿದೆ. ಆದರೂ ಭೂ ಸಾರಿಗೆ ಸಚಿವಾಲಯದಿಂದ ಸ್ಪಂದನೆ ದೊರಕಿದ್ದು ಅಷ್ಟಕ್ಕಷ್ಟೆ.
28 ಪ್ರಸ್ತಾವನೆಗಳು: 'ಕನ್ನಡಪ್ರಭ'ಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರ 2009ರ ಮಾರ್ಚ್ 11ರಂದು 10, 2009ರ, ಅದೇ ಸಾಲಿನ ಜೂನ್ 22ರಂದು 6 ಮತ್ತು ಆಗಸ್ಟ್ 24ರಂದು 1, 2010ರ ಫೆಬ್ರವರಿ 15 ಹಾಗೂ 20ರಂದು 2, 2011ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 3, 2013ರ ಏಪ್ರಿಲ್ನಿಂದ ಜುಲೈವರೆಗೂ 6 ಪ್ರಸ್ತಾವನೆಗಳನ್ನು ಕಳುಹಿಸಿ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ರಸ್ತೆಗಳ ಪರಿವರ್ತನೆಗೆ ಕೋರಿಕೊಂಡಿದೆ.
ಗಮನಾರ್ಹ ಸಂಗತಿ ಎಂದರೆ, ಹೀಗೆ 2009ರಿಂದಲೇ ಕೇಂದ್ರಕ್ಕೆ ನಿರಂತರ ಪ್ರಸ್ತಾವನೆಗಳು ರವಾನೆಯಾದರೂ ಕೂಡ ಇಂದಿಗೂ ಈ 28 ಪ್ರಸ್ತಾವನೆಗಳ ಪೈಕಿ ಒಂದಕ್ಕೂ ಕೇಂದ್ರ ಧನಾತ್ಮಕವಾಗಿ ಸ್ಪಂದಿಸಿಲ್ಲ. ರಾಜ್ಯದಿಂದ ಬರುವ ಪ್ರಸ್ತಾವನೆ ಕಡತಗಳನ್ನು ಸ್ವೀಕರಿಸಿ ಮೌನವಾಗಿದೆ.
ನೆನೆಗುದಿಗೆ ಬಿದ್ದಿರುವ ಪ್ರಸ್ತಾವನೆಗಳು
ಅ) 2009ರ ಮಾರ್ಚ್ 11ರ ಪ್ರಸ್ತಾವನೆಗಳು
1) ಮೈಸೂರು- ಚನ್ನರಾಯಪಟ್ಟಣ- ಅರಸೀಕೆರೆ ರಸ್ತೆ(ಚನ್ನರಾಯಪಟ್ಟಣ, ಸಕಲೇಶಪುರ, ವಾಯಾ ಹೊಳೆನರಸಿಪುರ) 187 ಕಿ.ಮೀ.
2) ಬೆಂಗಳೂರು- ಹೊರ ವರ್ತುಲ ರಸ್ತೆ- ದಾಬಸಪೇಟೆ- ಸೋಲುರ- ಮಾಗಡಿ- ರಾಮನಗರ- ಕನಕಪುರ- ಆನೇಕಲ್- ಅತ್ತಿಬೆಲೆ- ಸರ್ಜಾಪುರ- 194 ಕಿ.ಮೀ.
3) ಬೆಂಗಳೂರು- ರಾಮನಗರ- ಚನ್ನಪಟ್ಟಣ- ಮಂಡ್ಯ- ಮೈಸೂರು- ಮರಕೇರಾ- ಮಂಗಳೂರು ರಸ್ತೆ(ರಾಹೆ 17ಕ್ಕೆ ಸಂಪರ್ಕ) 385 ಕಿ.ಮೀ.
4) ಕೊರಟಗೆರೆ- ತುಮಕೂರು- ಕುಣಿಗಲ್- ಹುಲಿಯೂರುದುರ್ಗ- ಮದ್ದೂರು- ಮಳವಳ್ಳಿ ರಸ್ತೆ- 140 ಕಿ.ಮೀ.
5) ಬೆಳಗಾವಿ- ಬಾಗಲಕೋಟೆ- ರಾಯಚೂರು- ಮಹೆಬೂಬನಗರ- ಆಂಧ್ರಪ್ರದೇಶದ ಗಡಿ- 336 ಕಿ.ಮೀ.
6) ಮಳವಳ್ಳಿ- ಬನ್ನೂರ- ಮೈಸೂರು ರಸ್ತೆ(ರಾಹೆ 209- 212 ಸಂಪರ್ಕ) 45 ಕಿ.ಮೀ.
7) ಹೆಬ್ಸೂರ- ಧಾರವಾಡ- ರಾಮನಗರಂ(ಲೋಂಡಾ)- ಅನಮೋಡ- ಪಣಜಿ ರಸ್ತೆ(ರಾಹೆ 17ಕ್ಕೆ ಸಂಪರ್ಕ) 95 ಕಿ.ಮೀ.
8) ಬೆಂಗಳೂರು(ಯಲಹಂಕ)- ಹಿಂದುಪುರ(ರಾಹೆ 7ಕ್ಕೆ ಸಂಪರ್ಕ), ದೊಡ್ಡಬಳ್ಳಾಪುರ- ಗೌರಿಬಿದನೂರು- ವಿದುರಾಶ್ವತ್ಥ ಮಾರ್ಗ- 80 ಕಿ.ಮೀ.
9) ಮಾನಂದವಾಡಿ- ಎಚ್.ಡಿ. ಕೋಟೆ- ಜೈಪುರ- ಕಡಕೋಳ- ಸುತ್ತೂರು- ಟಿ. ನರಸೀಪುರ- ಕೊಳ್ಳೇಗಾಲ- ಮಲೆಮಹದೇಶ್ವರ ಬೆಟ್ಟ- ಸೇಲಂ ರಸ್ತೆ- 197 ಕಿ.ಮೀ.
10) ದೊಡ್ಡಬಳ್ಳಾಪುರ- ಕೋಲಾರ ರಸ್ತೆ, ನಂದಿ, ವಿಜಯಪುರ, ವೇಮಗಲ್ ಮಾರ್ಗ- 82 ಕಿ.ಮೀ.
11) ಹಾಸನ- ಗೋರೂರು- ಅರಕಲಗೂಡು- ರಾಮನಾಥಪುರ- ಬೆಟ್ಟದಪುರ- ಪಿರಿಯಾಪಟ್ಟಣ- ಗುಂಡ್ಲುಪೇಟೆ ರಸ್ತೆ- 249 ಕಿ.ಮೀ.
12) ಬೆಳಗಾವಿ- ಬಿಜಾಪುರ- ಗುಲ್ಬರ್ಗ- ಹುಮನಾಬಾದ್(ರಾಹೆ 9ಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 12) 144 ಕಿ.ಮೀ.
13) ಕುಮಟಾ- ಶಿರಸಿ- ಮುಂಡಗೋಡು- ತಡಸಾ- ಹುಬ್ಬಳ್ಳಿ ರಸ್ತೆ- 140 ಕಿ.ಮೀ.
14) ಕುಮಟಾ- ಶಿರಸಿ- ಹಾವೇರಿ- ಹಡಗಲಿ- ಹರಪ್ಪನಹಳ್ಳಿ- ಕೂಡ್ಲಗಿ- 240 ಕಿ.ಮೀ.
15) ತಡಸಾ- ಮುಂಡಗೋಡು- ಹಾನಗಲ್- ಅನವಟ್ಟಿ- ಶಿರಾಳಕೊಪ್ಪ- ಶಿಕಾರಿಪುರ- ಶಿವಮೊಗ್ಗ- 186 ಕಿ.ಮೀ.
16) ಕುಮಟಾ- ಶಿರಸಿ- ಹಾವೇರಿ- ಕೂಡ್ಲಿಗಿ- ಮೊಳಕಾಲ್ಮೂರು- ಅನಂತಪುರ- 315 ಕಿ.ಮೀ.
17) ನಂಜನಗೂಡು- ಚಾಮರಾಜನಗರ- 38 ಕಿ.ಮೀ.
ಆ) 2010ರಲ್ಲಿನ ಪ್ರಸ್ತಾವನೆಗಳು
1) ಬೀದರ್- ಹುಮನಾಬಾದ್- ಗುಲ್ಬರ್ಗ- ಸಿರಗುಪ್ಪ- ಬಳ್ಳಾರಿ- ಹಿರಿಯೂರು- ಚಿಕ್ಕನಾಯಕನಹಳ್ಳಿ- ನಾಗಮಂಗಲ- ಶ್ರೀರಂಗಪಟ್ಟಣ- 608 ಕಿ.ಮೀ.
(ರಾಜ್ಯ ಹೆದ್ದಾರಿಗಳಾದ 19, 105 ಸೇರಿಕೊಂಡು ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾದಲ್ಲಿ ಹಿಂದುಳಿದ ಹೈ-ಕ ಭಾಗದವರಿಗೆ ಅನುಕೂಲ)
ಇ) 2011ರಲ್ಲಿನ ಪ್ರಸ್ತಾವನೆಗಳು
1) ಕಾಲಪೆಟ್ಟಾ- ಮನತಂವಾಡಿ- ಕುಟ್ಟಾ- ಗೋಣಿಕೊಪ್ಪಲು- ಹುಣಸೂರು- ಮೈಸೂರು- 123 ಕಿ.ಮೀ.
2) ದೇವನಹಳ್ಳಿ- ವಿಜಯಪುರ- ಎಚ್. ಕ್ರಾಸ್- ವೇಮಗಲ್- ಕೋಲಾರ- ಕೆಜಿಎಫ್- ಕೆಂಪಾಪುರ- 96 ಕಿ.ಮೀ.
3) ಗಿಣಿಗೇರಾ- ಗಂಗಾವತಿ- ಮಾನವಿ- ಸಿಂಧನೂರು- ಕಲ್ಮಲಾ- ರಾಯಚೂರು- ಮಹೆಬೂಬನಗರ- ಜಡಚರ್ಲಾ(ರಾಹೆ 17ಕ್ಕೆ ಸಂಪರ್ಕ) 162 ಕಿ.ಮೀ.
ಈ) 2013ರಲ್ಲಿನ ಪ್ರಸ್ತಾವನೆಗಳು
1) ಮೈಸೂರು- ಹಾಸನ- ಬೇಲೂರು ರಸ್ತೆ- 154 ಕಿ.ಮೀ.
2) ಉಡುಪಿ- ತೀರ್ಥಹಳ್ಳಿ, ಮಾರ್ಗ- ಹೆಬ್ಬಾರಿ- ಆಗುಂಬೆ- 87.60 ಕಿ.ಮೀ.
3) ಬಿ.ಸಿ. ರೋಡ್- ಮೂಲ್ಕಿ, ಮಾರ್ಗ- ಪೋಳಲಿ- ಕಟೀಲ- ಕಿಣ್ಣಿಗೋಳಿ- 48.10 ಕಿ.ಮೀ.
4) ಮಣಿ- ಉಳ್ಳಾಲ ರಸ್ತೆ- 29 ಕಿ.ಮೀ.
5) ಬೈಂದೂರು- ಆಯನೂರು, ಮಾರ್ಗ- ಕೊಳ್ಳೂರು- ನಾಗೋಡಿ ಘಾಟ್- ನಿಟ್ಟೂರು- ನಗರ- ಹೊಸನಗರ- ರಿಪ್ಪನಪೇಟೆ- 180 ಕಿ.ಮೀ.
6) ಉಡುಪಿ- ಸುಳ್ಯ, ಮಾರ್ಗ- ಕಾರ್ಕಳ- ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯಂ- 208 ಕಿ.ಮೀ.



ಹೆದ್ದಾರಿ ಜಾಲ ಹಿಗ್ಗುವುದೇ?
ಕರ್ನಾಟಕದಲ್ಲೀಗ ಒಟ್ಟು 4,688 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಜಾಲವಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಎನ್ಎಫ್ಎಐ ಅಡಿಯಲ್ಲಿ 1,526 ಕಿ.ಮೀ. ಹೆದ್ದಾರಿ ಅಭಿವೃದ್ಧಿಯಲ್ಲಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ವಲಯ ವ್ಯಾಪ್ತಿಯಲ್ಲಿ 3,162 ಕಿ.ಮೀ. ಹೆದ್ದಾರಿ ಇದೆ. ಈ ಪೈಕಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 1,847 ಕಿ.ಮೀ. ಹೆದ್ದಾರಿ ಯೋಜನೆ ರೂಪಿಸುತ್ತಿದೆ.
ಈ ಪ್ರಸ್ತಾವನೆಗಳಿಗೆಲ್ಲ ಕೇಂದ್ರ ಭೂ ಸಾರಿಗೆ ಸಚಿವಾಲಯ ಹಸಿರು ನಿಶಾನೆ ತೋರಿದ್ದೆ ಆದಲ್ಲಿ ರಾಜ್ಯದ ರಸ್ತೆ ಜಾಲ ಇನ್ನೂ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ. ನಮ್ಮವರೇ ಆಸ್ಕರ್ ಫರ್ನಾಂಡಿಸ್ ಭೂ ಸಾರಿಗೆ ಹೊಣೆ ಹೊತ್ತಿದ್ದಾರೆ. ಇನ್ನಾದರೂ ಕೇಂದ್ರ ಭೂ ಸಾರಿಗೆ ಸಚಿವಾಲಯ ಕರ್ನಾಟಕದ ಹೆದ್ದಾರಿ ಪ್ರಸ್ತಾವನೆಗಳ ಗ್ರಹಣ ಮೋಕ್ಷಕ್ಕೆ ಮುಂದಾಗುವುದೇ ಕಾದು ನೋಡಬೇಕು.


ಕರ್ನಾಟಕಕ್ಕೆ ಆದ್ಯತೆ
ರಾಜ್ಯದ ಹೆದ್ದಾರಿ ಯೋಜನೆಗಳಿಗೆ ಆರಂಭದ ಹಂತದಲ್ಲಿರುವ 12ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯದ ಎಲ್ಲಾ 28 ಪ್ರಸ್ತಾವನೆಗಳು ಕೇಂದ್ರದ ಮುಂದಿವೆ, ಭೂ ಸಾರಿಗೆ- ಹೆದ್ದಾರಿ ಸಚಿವಾಲಯ ಈ ಪ್ರಸ್ತಾವನೆಗಳಿಗೆ ಸೂಕ್ತ ಸಮಯದಲ್ಲಿ ನ್ಯಾಯ ನೀಡುವ ಪ್ರಯತ್ನ ಮಾಡುತ್ತದೆ. ರಾಜ್ಯದ ಪ್ರಸ್ತಾವನೆಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವ ಪ್ರಯತ್ನವನ್ನಂತೂ ಮಾಡುವೆ.
- ಆಸ್ಕರ್ ಫನಾಂಡಿಸ್, ಭೂ ಸಾರಿಗೆ- ಹೆದ್ದಾರಿ ಸಚಿವರು



ಪ್ರಸ್ತಾವನೆಗಳಿಗೆ ಬೇಗ ಸ್ಪಂದಿಸಲಿ
ರಾಜ್ಯದಿಂದ 2009ರಿಂದಲೇ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಕೋರಿ ಪ್ರಸ್ತಾವನೆ ರವಾನಿಸಿದ್ದರೂ ಅವು ನೆನೆಗುದಿಗೆ ಬಿದ್ದಿವೆ. ಈಗ ಕರ್ನಾಟಕದವರೇ ಆಗಿರುವ ಆಸ್ಕರ್ ಫರ್ನಾಂಡಿಸ್ ಭೂ ಸಾರಿಗೆ ಸಚಿವರಾಗಿದ್ದಾರೆ. ಇತ್ತಿಚೆಗಷ್ಟೇ ಅವರೊಂದಿಗೆ ಚರ್ಚಿಸಿ ನೆನೆಗುದಿಗೆ ಬಿದ್ದಿರುವ ಪ್ರಸ್ತಾವನೆಗಳ ಬಗ್ಗೆ ಗಮನ ಸೆಳೆದಿರುವೆ. ಬೇಗನೆ 28 ಪ್ರಸ್ತಾವನೆಗಳಲ್ಲಿ ಆದ್ಯತೆ ಮೇರೆಗೆ ಕೆಲವನ್ನಾದರೂ ಗಣನೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.
- ಡಾ. ಎಚ್.ಸಿ. ಮಹಾದೇವಪ್ಪ, ಲೋಕೋಪಯೋಗಿ ಸಚಿವರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement