ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೋಗಿಗಳು ಬದುಕಲು ಬರ್ಬೇಕೋ.., ಸಾಯಲೋ..

Rashmi Kasaragodu
Updated On : 2 Aug 2013, 11:52 am

ಕನ್ನಡಪ್ರಭ ವಾರ್ತೆ  ಸುರಪುರ  ಆ.1
ಉಪ ಲೋಕಾಯುಕ್ತ ನ್ಯಾ. ಶಶಿಧರ ಮಜಗೆ ಗುರುವಾರ ಸುರಪುರಕ್ಕೆ ದಿಢೀರ್ ಭೇಟಿ ನೀಡುವುದರ ಮೂಲಕ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿ, ಹಲವು ಬಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
  ಇಲ್ಲಿಯ ಐತಿಹಾಸಿಕ ಪುಷ್ಕರಣಿ ದೇವರಬಾವಿ ಸೇರಿದಂತೆ ಇತರೆ ಬಾವಿಗಳಿಗೆ, ತರಕಾರ ಮಾರುಕಟ್ಟೆಗೆ ಭೇಟಿ ನೀಡಿದರು. ಐತಿಹಾಸಿಕ ಬಾವಿಗಳ ಸಂರಕ್ಷಣೆಗೆ ತಾಲೂಕಾಡಳಿತ ಮತ್ತು ಪುರಸಭೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲಿಯ ತರಕಾರಿ ಮಾರುಕಟ್ಟೆಗೆ ವ್ಯವಸ್ಥಿತವಾದ ಕಟ್ಟೆಗಳನ್ನು ನಿರ್ಮಿಸಿಕೊಡಬೇಕು. ವಾರದೊಳಗಾಗಿ ಪಟ್ಟಣದಲ್ಲಿ ಮೂತ್ರಾಲಯ ಸ್ಥಾಪನೆ ಮಾಡಬೇಕು. ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಕಾಂಪೌಡ್ ನಿರ್ಮಾಣಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧಿಕಾರಿಗೆ ತರಾಟೆ: ಪಟ್ಟಣದ ಹೂಳು ತುಂಬಿದ ಮತ್ತು ತೆರೆದ ಚರಂಡಿಗಳನ್ನು ನೋಡಿದ ಲೋಕಾಯುಕ್ತರು, ಪುರಸಭೆ ಅಧಿಕಾರಿ ಮೇಲೆ ಕಿಡಿಕಾರಿದರು. ಈ ಸಂದರ್ಭದಲ್ಲಿ ಸುದ್ದಿಗಾರರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಇದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆದಾಗ, ಪಕ್ಕದಲ್ಲಿಯೇ ಇದ್ದ ಪುರಸಭೆ ಮುಖ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
  ನಂತರ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯದ್ವಾರಕ್ಕೆ ಕೀಲಿ ಹಾಕಿರುವುದನ್ನು ಕಂಡು ಕೆಂಡಾಮಂಡಲರಾದರು. ಆಸ್ಪತ್ರೆಯಲ್ಲಿ ಕತ್ತಲಿದ್ದುದನ್ನು ಕಂಡು ಲೋಕಾಯುಕ್ತರೇ ಲೈಟ್ ಬಟನ್ ಒತ್ತಿ ಬೆಳಕು ಹಾಕಿದರು. ದುರ್ಗಪ್ಪ ನಾಯಕ ಡೋಣ್ಣಿಗೇರಿ, ಆಸ್ಪತ್ರೆಯ ಅವ್ಯವಸ್ಥೆ ಹಾಗೂ ರೋಗಿಗಳು ಅನುಭವಿಸುವ ಕಷ್ಟದ ಉಪ ಲೋಕಾಯುಕ್ತರ ಗಮನಕ್ಕೆ ತಂದರು.
ನಾನು ಯಾವ ಲೋಕದಲ್ಲಿದ್ದೇನೆ..?: ಆಸ್ಪತ್ರೆಯಲ್ಲಿನ ಗಬ್ಬೆದ್ದು ನಾರುತ್ತಿದ್ದ ಶೌಚಾಲಯ, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ತಿರುಗದ ಫ್ಯಾನ್ಗಳು, ಹತ್ತದ ಲೈಟ್ಗಳನ್ನು ಕೆಂಡು ದಂಗಾಗಿ ಹೋದರು. ನಾನು ಈ ಲೋಕದಲ್ಲಿ ಇದ್ದೇನೋ ಇನ್ನಾವುದಾದರೂ ಲೋಕಕ್ಕೆ ಬಂದಿದ್ದೇನೋ ಎಂದು ಉದ್ಘಾರ ತೆಗೆದರು.
  ಇದೇ ಸಂದರ್ಭದಲ್ಲಿ ರೋಗಿಗಳು ಬಂದು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಗೋಳಿಟ್ಟರು. ಆಸ್ಪತ್ರೆಯ ಎಲ್ಲ ಕೋಣೆಗಳಿಗೆ ಭೇಟಿ ನೀಡಿದ ಲೋಕಾಯುಕ್ತರು ಶೌಚಾಲಯಕ್ಕೆ ಬರುತ್ತಿದ್ದಂತೆ ಸಾಕಪ್ಪ ಸಾಕು.. ಇನ್ನೊಂದೆಜ್ಜೆ ಮುಂದಿಟ್ಟರೆ ಸತ್ತು ಹೋಗುತ್ತೇನೆ. ನನ್ನ ಸೇವಾವಧಿಯಲ್ಲಿ ಇಂಥ ಕೆಟ್ಟ ತಾಲೂಕು ಮತ್ತು ಆಸ್ಪತ್ರೆಯನ್ನು ನೋಡಿಯೇ ಇಲ್ಲ. ನೀರೇ ಇಲ್ಲ ಎಂದರೆ ಹೆರಿಗೆ ಹೇಗೆ ಸಾಧ್ಯ. ರೋಗಿಗಳು ಬದುಕುವುದಕ್ಕೆ ಬರಬೇಕೋ ಅಥವಾ ಸಾಯುವುದಕ್ಕೆ ಬರಬೇಕೆಂದು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ಟ್ಯಾಂಕರ್ ನೀರು ಪೂರೈಸಿ: ಆಸ್ಪತ್ರೆಗೆ ಟೇಲರ್ಸ್ ಮಂಜಿಲ್ನಿಂದ ಪೈಪ್ಲೈನ್ ಮುಖಾಂತರ ನೀರು ಸರಬರಾಜು ಮಾಡಬೇಕು. ಅಲ್ಲಿವರೆಗೆ ಪ್ರತಿದಿನ ಟ್ಯಾಂಕರ್ ನೀರು ಸರಬರಾಜು ಮಾಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರ ಹಿರೇಮಠಗೆ ಸೂಚಿಸಿದರು.
  ಸಿಬ್ಬಂದಿಗೆ ಆಸ್ಪತ್ರೆಯ ಸ್ವಚ್ಛಗೆ ಬಗ್ಗೆ ಗಮನಹರಿಸಲು ಸೂಚಿಸಿದರು. ಡಿಎಚ್ಒ ಜೊತೆ ದೂರವಾಣಿಯಲ್ಲಿ ಮಾತನಾಡಿ, ಆಸ್ಪತ್ರೆಯ ಸ್ವಚ್ಛತೆ ಗುತ್ತಿಗೆ ಪಡೆದ ಏಜೆನ್ಸಿ ಮೇಲೆ ಕ್ರಮ ಜರುಗಿಸಲು ಆದೇಶಿಸಿದರು. ನಂತರ ಇಲ್ಲಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಭೇಟಿ ನೀಡಿ ಕೋಣೆಗಳನ್ನು ಪರಿಶೀಲಿಸಿದರು. ಕೋಣೆಯೊಂದರ ಚಾವಣಿ ಕುಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಳಪೆ ಕಾಮಗಾರಿ ಮಾಡಿದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಲು ಸೂಚಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement