ಸಚಿವನೆಂದು ಕರೆ ಮಾಡಿ ಐಜಿಯನ್ನೇ ಯಾಮಾರಿಸಿದ್ದ ಭೂಪ!
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಆ.1
ಈಶಾನ್ಯ ವಲಯ ಐಜಿಪಿ ಮೊಹ್ಮದ್ ವಜೀರ್ ಅಹ್ಮದ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾತನಾಡತ್ತಿದ್ದೆನೆಂದು ಸುಳ್ಳು ಕರೆ ಮಾಡಿ, ಪೊಲೀಸ್ ಅಧಿಕಾರಿಯೊಬ್ಬರ ವರ್ಗಾವಣೆ ಪ್ರಕರಣದ ಬಗ್ಗೆ ವಿಚಾರಿಸಿದ ವ್ಯಕ್ತಿಯೊಬ್ಬ ಈಗ ಪೊಲೀಸ್ ಅತಿಥಿ!
ಯಾಮಾರಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಗುಲ್ಬರ್ಗ ಪೊಲೀಸರು ಬಂಧಿಸಿದ್ದು ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ (ಸೈಬರ್ ಕಾನೂನು) ಅಪರಾಧ ತಡೆ ಕಾಯ್ದೆ ಅಡಿಯಲ್ಲಿ ಖಟ್ಲೆ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.
ಸುಳ್ಳು ಕರೆ ಮಾಡಿದಾತ ಕಾನೂನು ಪದವೀಧರ ಆರೀಫ್ ಕಾಡ್ಲೂರ್ನನ್ನು ಬಂಧಿಸಿ ಆತನ ವಿರುದ್ಧ ಸೈಬರ್ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ ಎಂದು ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಶರಣಬಸವೇಶ್ವರ ಭಜಂತ್ರಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ್ದಾರೆ.
ಈ ವ್ಯಕ್ತಿ ತನ್ನ ಮೋಬೈಲ್ (ಸಂ.9739069999)ನಿಂದ ಐಜಿಪಿಗೆ ಕರೆ ಮಾಡಿ ತಾನು ತಾನು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಎಂದು ಪರಿಚಯಿಸಿಕೊಂಡು, ಪಿಎಸ್ಐಯೊಬ್ಬರ ವರ್ಗಾವಣೆ ಬಗ್ಗೆ ವಿಚಾರಿಸಿದ್ದರು.
ಈ ಕರೆ ಸ್ವೀಕರಿಸುವ ತುಸು ಮುನ್ನವೆ ಐಜಿಪಿ ಸಚಿವರೊಂದಿಗೆ ಮಾತನಾಡಿದ್ದರು. ಆದ್ದರಿಂದ ಬಹಳ ಬೇಗನೆ ಧ್ವನಿಯಲ್ಲಿ ವ್ಯತ್ಯಾಸ ಗುರುತಿಸಿದ ಐಜಿಪಿ ಸಚಿವರ ಪಿಎಗೆ ಫೋನ್ ಮಾಡಿ ವಿಚಾರಿಸಿದ್ದರು. ಈ ಸಂಬಂಧ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.