ಹಣ ಲೂಟಿ: ಆರೋಪ
ಸೇಡಂ: ಪಟ್ಟಣ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಪಡಿತರ ಚೀಟಿ ನೋಂದಣಿ ಹೆಸರಲ್ಲಿ ತಾಪಂ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ್ ಆರೋಪಿಸಿದ್ದಾರೆ. ಯಮಗಳನ್ನು ಉಲ್ಲಂಘಿಸಿ, ಅಧಿಕಾರಿಗಳು ಹಾಗೂ ಏಜೆನ್ಸಿದಾರರು ಪಡಿತರ ಚೀಟಿ ನೋಂದಣಿಗೆ ಒಂದೊಂದು ಕುಟುಂಬಕ್ಕೆ 300ಕ್ಕೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಡ ಜನತೆಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ತಾಲೂಕಿನ, ಮುಧೋಳ, ಆಡಕಿ, ಮದನಾ, ರಂಜೋಳ, ಇಟಕಾಲ್, ಮೋತಕಪಲ್ಲಿ, ಮೇದಕ ವಿಧಾನಸಭಾ ಕ್ಷೇತ್ರದ ಶಿರೊಳ್ಳಿ, ರುದ್ನೂರ, ರಾಯಕೋಡ, ಸುಲೇಪೇಟ್ ಮುಂತಾದ ಗ್ರಾಪಂ.ಗಳಲ್ಲಿ ಬಡ ಜನರಿಂದ ನಿಗದಿತ 50 ರುಪಾಯಿಗಿಂತ ಹೆಚ್ಚು ಹಣ ಪಡೆದು ಪೀಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪಟ್ಟಣಕ್ಕೆ ಸಮೀಪವಿರುವ ರುದ್ನೂರ, ರಾಯಕೋಡ, ಶಿರೊಳ್ಳಿಯ ಗ್ರಾಮಸ್ಥರು ಪಡಿತರ ಚೀಟಿ ಫೋಟೋ ನೋಂದಣಿಗೆ ದೂರದ ಚಿಂಚೋಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖರ್ಗೆ ಪ್ರವಾಸ
ಗುಲ್ಬರ್ಗ: ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಇದೇ ಆಗಸ್ಟ್ 2ರ ಬೆಳಿಗ್ಗೆ ರೈಲಿನ ಮೂಲಕ ವಾಡಿ ಪಟ್ಟಣಕ್ಕೆ ಆಗಮಿಸಿ ವಾಡಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1 ಮತ್ತು 2ರಲ್ಲಿ ವಾಡಿ- ಗುಲ್ಬರ್ಗ ರೇಲ್ವೆ ವಿದ್ಯುದ್ದೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ 12.30ಕ್ಕೆ ವಾಡಿಯಿಂದ ರೈಲಿನ ಮೂಲಕ ಹೊರಟು ಗುಲ್ಬರ್ಗ ನಗರಕ್ಕೆ ಆಗಮಿಸುವರು. ಮಧ್ಯಾಹ್ನ 2.30ಕ್ಕೆ ನಗರದ ಪಂಡಿತ ರಂಗಮಂದಿರದಲ್ಲಿ ಆಯೋಜಿಸಿರುವ ಗುಲ್ಬರ್ಗ ನಗರದ ನೂತನ ಜೇವರ್ಗಿ ರಸ್ತೆಯಲ್ಲಿರುವ (ಮದರ ತೆರೆಸಾ ಶಾಲೆ ಹತ್ತಿರ) ರೇಲ್ವೆ ರಸ್ತೆ ಮೇಲ್ಸೆತುವೆಯ ಪುನನಿರ್ಮಾಣ ಮತ್ತು ಅಗಲಿಕರಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಮಧ್ಯಾಹ್ನ 3.45ಕ್ಕೆ ಗುಲ್ಬರ್ಗದಿಂದ ರೈಲು ಮೂಲಕ ಉಮ್ದಾನಗರ (ಹೈದ್ರಾಬಾದ್) ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸುವರು.
ಇಂದು ನೇತ್ರ ತಪಾಸಣೆ
ಗುಲ್ಬರ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ವಿಭಾಗ), ಜಿಲ್ಲಾ ಸರ್ಕಾರಿ ಆಸ್ಪತ್ರೆ, ಜಿಲ್ಲಾ ನೇತ್ರಶಸ್ತ್ರ ಚಿಕಿತ್ಸಾ ಘಟಕ ಹಾಗೂ ಆರ್ಜು ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಅಗಸ್ಟ್ 2ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರ ಆರೋಗ್ಯ ಕೇಂದ್ರ, ರೆಹಮತ್ ನಗರ ಗುಲ್ಬರ್ಗ ಇಲ್ಲಿ ಉಚಿತ ನೇತ್ರ ತಪಾಸಣೆ (ಮೋತಿ ಬಿಂದು) ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿದೆ.
ಲೋಕ ಅದಾಲತ್
ಗುಲ್ಬರ್ಗ: ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ ದಾಸ್ ಅಧ್ಯಕ್ಷತೆಯಲ್ಲಿ ಆ.3ರಂದು ಬೆಳಿಗ್ಗೆ 10ಕ್ಕೆ ಗುಲ್ಬರ್ಗ ವಿಕಾಸ ಭವನದ ಸಭಾಂಗಣದಲ್ಲಿ ಲೋಕ ಅದಾಲತ್ ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.