ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಲವಾರ ಗ್ರಾಪಂ; ಕೋರಂ ಭರ್ತಿ ತಡೆಗೆ ಯತ್ನ, ವಾಗ್ವಾದ

Rashmi Kasaragodu
Updated On : 3 Aug 2013, 11:55 am

ಗುಲ್ಬರ್ಗ/ಶಹಾಬಾದ್: ನಾಲವಾರ ಗ್ರಾಮ ಪಂಚಾಯ್ತಿ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಈರಣ್ಣಗೌಡ ಬಿರಾಳ ತಮ್ಮ ಅವಧಿಯಲ್ಲಿ ಆರು ತಿಂಗಳು ಸಾಮಾನ್ಯ ಸಭೆ ಕರೆಯದೆ ಮಂಗಳವಾರ ಸಭೆ ಕರೆದು ಕೋರಂ ಭರ್ತಿಗೆ ಹರಸಾಹಸ ಮಾಡಿದರೆ, ಪ್ರತಿಪಕ್ಷದ ಶಿವರೆಡ್ಡಿ ಗೌಡರವರು ಕೋರಂ ಭರ್ತಿಯಾಗದಂತೆ ತಡೆಯೊಡ್ಡಿದ್ದರಿಂದ ವಾಗ್ವಾದ ನಡೆದು ಕೈಕೈ ಮೀಲಾಯಿಸುವ ಹಂತ ತಲುಪಿದ ಘಟನೆ ನಡೆಯಿತು.
ಈರಣ್ಣಗೌಡರವರು ಅಧ್ಯಕ್ಷರಾದ ನಂತರ ಕರೆದ ಎರಡು ಸಭೆಯಲ್ಲಿ ಕೋರಂ ಇಲ್ಲದೆ ಮುಂದುಡಲಾಗಿತ್ತು. ಈ ಬಾರಿಯ ಸಭೆಯನ್ನು ಶತಾಯಗತಾಯ ನಡೆಸಲೆಬೇಕೆಂಬ ನಿಶ್ಚಯದೊಂದಿಗೆ ಸಭೆಯನ್ನು ಕರೆದಿದ್ದರು. ಒಟ್ಟು 29 ಸದಸ್ಯ ಬಲದ ಗ್ರಾಮ ಪಂಚಾಯ್ತಿಯಲ್ಲಿ ಸಭೆ ನಡೆಸಲು ಬೇಕಾದ 16ಸದಸ್ಯರ ಬೆಂಬಲಕ್ಕಾಗಿ  ಅಧ್ಯಕ್ಷರು ಹರಸಾಹಸ ಮಾಡಬೇಕಾಯಿತು.
ತಡೆಯೊಡ್ಡಲು ಪ್ರಯತ್ನ: ಪ್ರತಿ ಪಕ್ಷದ ನಾಯಕರಾದ ಶಿವರೆಡ್ಡಿಗೌಡರವರು ಸಾಮಾನ್ಯ ಸಭೆಗೆ ಆಗಮಿಸುತ್ತಿದ್ದ ಸದಸ್ಯರನ್ನು ಸಭೆಗೆ ಹಾಜರಾಗದಂತೆ ತಡೆಯೊಡ್ಡಲು ಪ್ರಯತ್ನಿಸಿದರು. ಅಧ್ಯಕ್ಷರ ಬೆಂಬಲಿಗ ಸದಸ್ಯರಾದ ಜಯಪ್ರಕಾಶ ಗೌಡರವರು ಸಭೆಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಿದ್ದಾಗ ಅದನ್ನು ಶಿವರೆಡ್ಡಿಗೌಡರವರು ತಡೆಯಲು ಪ್ರಯತ್ನಿಸಿ ಒಂದು ಹೆಜ್ಜೆ ಮುಂದೆ ಹೋಗಿ ಹಾಜಿರಿ ಪುಸ್ತಕವನ್ನೆ ಕಸಿಯಲು ಪ್ರಯತ್ನಿಸಿದರು. ಇದರಿಂದ ಇಬ್ಬರು ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು, ಒಂದು ಹಂತದಲ್ಲಿ ಕೈಕೈ ಮೀಲಾಯಿಸುವ ಹಂತ ತಲುಪಿತು. ಇದರಿಂದ ಗ್ರಾಪಂ ಕಚೇರಿಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಯಿತು.
ಗೊಂದಲಗಳ ನಡುವೆ: ಸಭೆಯ ಭದ್ರತೆಗೆ ಆಗಮಿಸಿ ವಾಡಿ ಪಿಎಸ್ಐ ಎಸ್.ಎಸ್. ದೊಡ್ಡಮನಿಯವರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡೆಸಿದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪಾರ್ವತೆಮ್ಮ ಎಂಬುವವರನ್ನು ಅಧ್ಯಕ್ಷರ ಬೆಂಬಲಿಗರು ಹೊತ್ತುಕೊಂಡು ಸಭೆಗೆ ಕರೆತಂದರು. ಇದರಿಂದ ಒಟ್ಟು 17 ಸದಸ್ಯರು ಸಭೆಯಲ್ಲಿ ಹಾಜರಾಗಿರುವುದರಿಂದ ಅವಶ್ಯಕ ಕೋರಂ ಭರ್ತಿಯಾಗಿ ನಾಲವಾರ ಗ್ರಾಮದ ಜಿದ್ದಾಜಿದ್ದಿ ರಾಜಕೀಯದಿಂದ ಆರು ತಿಂಗಳ ನಂತರ ಸಾಮಾನ್ಯಸಭೆ ಗೊಂದಲಗಳ ನಡುವೆ ನಡೆಯಿತು.
ಸಾಮಾನ್ಯ ಸಭೆಯಲ್ಲಿ 2013-14ನೇ ಸಾಲಿನ ವಿಶೇಷ ಕ್ರಿಯಾಯೋಜನೆ, 13ನೇ ಹಣಕಾಸಿನ ಯೋಜನೆಗಳಿಗೆ  ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀಯವರು ಅನುಮೋದನೆ ಪಡೆದರು. ಅ.1 ರಿಂದ 3ರವರೆಗೆ ಗ್ರಾಮದ 9 ವಾರ್ಡ್ಗಳಲ್ಲಿ ಆಯಾ ಸ್ಥಳದಲ್ಲಿ ಸಭೆ ಏರ್ಪಡಿಸಲು, ಅ.5 ರಂದು ಸ್ಟೇಷನ್ ನಾಲವಾರದ ಪ್ರವಾಸಿ ಮಂದಿರದಲ್ಲಿ ಗ್ರಾಮಸಭೆ ನಡೆಸಲು ತಿರ್ಮಾನಿಸಲಾಯಿತು.
80 ಸಾವಿರ ಕಂದಾಯ ವಸೂಲಿಯ ಗುರಿ: ಆ.8ರಂದು ಗ್ರಾಪಂ ವ್ಯಾಪ್ತಿಯ ಕೆರೆ, ಕೊಂಡೆವಾಡಿ, ತೈಬಜಾರಗಳ ಹರಾಜು ಪ್ರಕ್ರಿಯೆ ನಡೆಸಲು ನಿಗದಿಪಡಿಸಲಾಯಿತು. ಗ್ರಾಪಂ ಸಿಬ್ಬಂದಿಯ ವೇತನ ಕಳೆದ 15 ತಿಂಗಳಿನಿಂದ ದೊರೆಯದೆ ಇರುವುದರಿಂದ ಗ್ರಾಪಂಗೆ ಬರಬೇಕಾದ ಕಂದಾಯವನ್ನು ಬಿಲ್ ಕಲೆಕ್ಟರ್ ತಿಂಗಳಿಗೆ ಕೇವಲ 5 ರಿಂದ 10 ಸಾವಿರ ವಸೂಲಿ ಮಾಡುತ್ತಿರುವುದರಿಂದ, ಪಂಚಾಯತಿಯ ಸಿಬ್ಬಂದಿಗೆ ವೇತನ ನೀಡಬೇಕಾದರೆ ತಿಂಗಳಿಗೆ 80 ಸಾವಿರ ಕಂದಾಯ ವಸೂಲಿಯ ಗುರಿ ಹೊಂದಬೇಕಾಗಿದೆ ಎಂದು ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement