ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಡಿ-ಗುಲ್ಬರ್ಗ ವಿದ್ಯುದೀಕರಣಕ್ಕೆ ಹಸಿರು ನಿಶಾನೆ

Rashmi Kasaragodu
Updated On : 3 Aug 2013, 11:55 am

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಆ.2
ದೇಶದ ಮಹಾನಗರಗಳಾದ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ವಿಶಾಖಪಟ್ಟಣಂಗಳಿಗೆ ಸುಗಮ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಚೆನ್ನೈ- ಮುಂಬೈ ರೇಲ್ವೆ ಮಾರ್ಗದ ವಿದ್ಯುದೀಕರಣ ಕಾಮಗಾರಿ 2015ರ ಒಳಗಾಗಿ ಪೂರ್ಣಗೊಳಿಸಲಾಗುತ್ತದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಾಡಿಯಲ್ಲಿ ಶುಕ್ರವಾರ ನಡೆದ ಮುಂಬೈ- ಚೆನ್ನೈ ಮಾರ್ಗದಡಿಯಲ್ಲೇ ಬರುವ ವಾಡಿ-ಗುಲ್ಬರ್ಗ 42 ಕಿ.ಮೀ. ಮಾರ್ಗ ವಿದ್ಯುದೀಕರಣ ಕಾಮಗಾರಿ(42 ಕೋಟಿ ವೆಚ್ಚ)ಗೆ ಹಸಿರು ನಿಶಾನೆ ತೋರಿಸಿದ ಸಚಿವರು, ವಾಡಿ ಜಂಕ್ಷನ್ನ ಪ್ಲಾಟ್ಫಾರ್ಮ್ 1ರಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
ದೇಶದ 64 ಸಾವಿರ ಕಿ.ಮೀ. ಉದ್ದದ ರೇಲ್ವೆ ಮಾರ್ಗದ ಪೈಕಿ ಈಗಾಗಲೇ 23,400 ಕಿ.ಮೀ. ವಿದ್ಯುದೀಕರಣಗೊಳಿಸಲಾಗಿದೆ. ರೇಲ್ವೆ ಸುಗಮ ಸಂಚಾರಕ್ಕೆ ಇದು ಅನುಕೂಲ. ಜೊತೆಗೆ ಪರಿಸರ ಸ್ನೇಹಿ ಕ್ರಮ, ಹಳಿಗಳ ಸುತ್ತ ಹೊಗೆಯೇ ಇರದಂತೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ರೇಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಆದ್ಯತೆ ಕೊಡಲಾಗುತ್ತದೆ. ವಾರ್ಷಿಕ 1,300 ಕಿ.ಮೀ. ಮಾರ್ಗ ವಿದ್ಯುದೀಕರಣ ಗುರಿ ಹೊಂದಲಾಗಿದೆ. 12ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ 16,500 ಕಿ.ಮೀ. ರೇಲ್ವೆ ಮಾರ್ಗದ ವಿದ್ಯುದೀಕರಣ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ರಾಜ್ಯದ ಸಹಕಾರ ಬೇಕು: ಈಗಾಗಲೇ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳ ಬಗ್ಗೆ ತಾವು ಸಭೆ ನಡೆಸಿ ಮಾಹಿತಿ ಪಡೆದಿದ್ದಾಗಿ ಹೇಳಿದ ಖರ್ಗೆ, ವೇದಿಕೆಯಲ್ಲೇ ಇದ್ದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ಕುರಿತು ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರುವ ಮೂಲಕ ಭೂ ಸ್ವಾಧೀನದಲ್ಲಿ ಚುರುಕು ತನ್ನಿ, ಆಗ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆಲ್ಲ ಹೊಸ ದಿಕ್ಕು ನೀಡೋಣ ಎಂದರು. ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ಡಾ. ಉಮೇಶ ಜಾಧವ, ಮಾಜಿ ಸಂಸದ ಇಕ್ಬಾಲ್ ಸರಡಗಿ, ದಕ್ಷಿಣ ಮಧ್ಯ ರೇಲ್ವೆ ಅಧಿಕಾರಿ ಬಿ.ಪಿ. ಖರೆ ಮಾತನಾಡಿದರು. ವಾಡಿ ಪಪಂ ಅಧ್ಯಕ್ಷೆ ಹಸೀನಾ ಖುರೇಶಿ, ರೇಲ್ವೆ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement