ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಸ್ತೆತಡೆ
ಗುಲ್ಬರ್ಗ: ಸಿರಗಾಪುರ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಡಾಂಬರೀಕರಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಯುವ ಶಕ್ತಿ ಸೈನ್ಯದ ಕಾರ್ಯಕರ್ತರು ಶನಿವಾರ ಸಿರಗಾಪುರ ಕ್ರಾಸ್ ಹತ್ತಿರ ರಸ್ತೆತಡೆ ಚಳವಳಿ ನಡೆಸಿದರು.
ಸಿರಗಾಪುರ ಕ್ರಾಸ್ನಿಂದ ಸಿರಡೋಣ, ಭೂಸಣಗಿ, ಕಣ್ಣೂರ್, ಬಬಲಾದ ಹಾಗೂ ಶ್ರೀಬಂದವರೆಗೆ 14 ಕಿ. ಮೀ. ಒಳ್ಳೆಯ ಡಾಂಬರೀಕರಣ ರಸ್ತೆ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಬಬಲಾದ (ಐಕೆ) ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಇದ್ದು, ಈ ಗ್ರಾಮಕ್ಕೆ ಶಾಶ್ವತವಾದ ನೀರಿನ ಸಮಸ್ಯೆಯನ್ನು ಬಗೆ ಹರಿಸಬೇಕು. ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕುರಿಕೋಟಾ ಹೊಸ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು. ಎಲ್ಲ ಗ್ರಾಮಗಳಲ್ಲಿ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು. ಮಹಾಗಾಂವ ಗ್ರಾಮದಿಂದ ಮಹಾಗಾಂವ ವಾಡಿ ಗ್ರಾಮದವರೆಗೆ 4.5 ಕಿ.ಮೀ. ಡಾಂಬರೀಕರಣ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೈನ್ಯದ ರಾಜ್ಯಾಧ್ಯಕ್ಷ ಲಿಂಗರಾಜ ಗುಂಡುರಕರ್, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ನಿಗ್ಗುಡಗಿ, ಪಾಲಂಜಿ ದಯಾನಂದ, ವಿಜಯಕುಮಾರ್. ಪಿ. ರಾವೂರ, ಶರಣು ಬಬಲಾದ, ಅಂಬಾರಾಯ ಕಂಠಿಕರ್, ಗುರುರಾಜ, ಶ್ರೀಮಂತ ಲೇಂಗಟಿಕರ್, ಗುರುನಾಥ ಕಟ್ಟೋಳ್ಳಿ, ರಾಘವೇಂದ್ರ ದೇಸಾಯಿ, ಪಾಶಾ ಜಮಾದಾರ ಇತರರು ಭಾಗವಹಿಸಿದ್ದರು.