ಸುದ್ದಿ ಸಂಕ್ಷೇಪ
ಚಿಕ್ಕನಳ್ಳಿ: ಭಾವಲಿಂಗ ಪ್ರತಿಷ್ಠಾಪನೆ ನಾಳೆ
ಸುರಪುರ: ತಾಲೂಕಿನ ಚಿಕ್ಕನಳ್ಳಿ ಗ್ರಾಮದ ನಿರಗುಡಿ ಹವಾ ಮಲ್ಲಿನಾಥ ಆಶ್ರಮದಲ್ಲಿ ಆ.5ರಂದು ಬೆಳಗ್ಗೆ 7.20ಕ್ಕೆ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಭಾವಲಿಂಗ ಪ್ರತಿಷ್ಠಾಪನೆ ನೇರವೇರಿಸಲಿದ್ದಾರೆ. ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವೀರಶೈವ ಸಮಿತಿ ಸಭೆ ಇಂದು
ಸುರಪುರ: ಇಲ್ಲಿಯ ಸಮೀಪದ ರಂಗಂಪೇಟೆ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಆ. 4ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಮಟ್ಟದ ವೀರಶೈವ ಸಮಿತಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಉಚಿತ ಪ್ರಸಾದ ನಿಲಯಕ್ಕೆ ವಿದ್ಯಾರ್ಥಿಗಳ ಆಯ್ಕೆ ಹಾಗೂ ಇನ್ನಿತರ ವಿಷಯಗಳನ್ನು ಚರ್ಚೆಯಾಗಲಿವೆ ಎಂದು ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ತಿಳಿಸಿದ್ದಾರೆ.
ಆರ್ಯ ಈಡಿಗ ಸಂಘ ಹರ್ಷ
ಸುರಪುರ: ಆರ್ಯ ಈಡಿಗ ಸಮಾಜದ ಬ್ರಹ್ಮರ್ಷಿ ನಾರಾಯಣ ಗುರುಗಳ ಅಧ್ಯಯನ ಪೀಠವನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿ, 2 ಕೋಟಿ ಒದಗಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ರಮವನ್ನು ತಾಲೂಕು ಆರ್ಯ ಈಡಿಗ ಸಮಜ ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದೆ. ನಾರಾಯಣ ಗುರುಗಳ ಜನ್ಮದಿನಾಚರಣೆಗೆ ಸರ್ಕಾರ ರಜೆ ಘೋಷಿಸಬೇಕು ಮತ್ತು ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂದು ಸಂಘದ ಚಂದ್ರಕಾಂತ ಕಡೇಚೂರು, ಕೃಷ್ಣಯ್ಯ ಗುತ್ತೇದಾರ್, ಸುಭಾಸ ಗುತ್ತೇದಾರ್, ಸೋಮರಾಯ ಶಾಖಾಪುರ, ರಾಜೂ ಕಲಾಲ್, ಬಾಲಯ್ಯ ಗುತ್ತೇದಾರ್, ಲಲಿತ ಭಂಡಾರಿ, ಮಲ್ಲಯ್ಯ ಹೆಬ್ಬಾಳ, ಕುಮಾರಗೌಡ ರುಕ್ಮಾಪುರ ಆಗ್ರಹಿಸಿದ್ದಾರೆ.
ಇಂದು ಹೋಮಿಯೋಪತಿ ಉಚಿತ ಚಿಕಿತ್ಸಾ ಶಿಬಿರ
ಯಾದಗಿರಿ: ಗುಲ್ಬರ್ಗ ನಗರದ ರಾಮಮಂದಿರ ಎದರಿನ ಧನ್ವಂತರಿ ಆಸ್ಪತ್ರೆಯಲ್ಲಿ ಉಚಿತ ಹೋಮಿಯೊಪತಿ ಚಿಕಿತ್ಸಾ ಶಿಬರವನ್ನು ಆ. 4ರಂದು ಬೆ.10ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಕೀಲುನೋವು, ಸ್ನಾಯು ಸೆಳೆತ, ಮಂಡಿ ನೋವು, ಬೆನ್ನು ನೋವು, ಸ್ಟಾಂಡಿಲೈಟಿನ್, ಆತ್ರಾಟಿಸ್ ರೋಗಳಿಗೆ ಸಂಬಂಧಿಸಿದಂತೆ ಹೀಟ್ ಥೆರಫಿ, ಆಯಿಲ್ ಮಸಾಜ್ ಸೇರಿದಂತೆ ಇತರ ರೋಗಗಳ ಬಗ್ಗೆ ಉಚಿತ ಮಾಹಿತಿ, ಸಲಹೆಗಳನ್ನು ನೀಡಲಾಗುವುದು. ಥೈರಾಯ್ಡ್, ಸಕ್ಕರೆ ಕಾಯಿಲೆ, ಬಿಪಿ, ನಿದ್ರಾಹೀನತೆ, ಅಸ್ತಮಾ, ಬಂಜೆತನ, ಮುಟ್ಟಿನ ಸಮಸ್ಯೆ, ಗರ್ಭಕೋಶದ ತೊಂದರೆ, ಮೂಲವ್ಯಾದಿ, ಕೂದಲು ಉದುರುವಿಕೆ, ಕಿಡ್ನಿ ಮತ್ತು ಪಿತ್ತಕೋಶದಲ್ಲಿನ ಹರಳು ಇನ್ನಿತರ ತೊಂದರೆಗಳಿಗೆ ಡಾ. ಕೊಪ್ಪರ ಅವರು ಉಚಿತ ಚಿಕಿತ್ಸೆ ನೀಡಲಿದ್ದಾರೆ ಎಂದು ಡಾ. ಶ್ವೇತಾ ಜೆ.ಕೆ, ತಿಳಿಸಿದ್ದಾರೆ. ಕಾರಣ ಈ ಶಿಬಿರದ ಲಾಭವನ್ನು ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ಜನರು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಮಾಹಿತಿಗಾಗಿ ಮೊ. 8867192933 ಸಂಪರ್ಕಿಸಲು ಕೋರಿದ್ದಾರೆ.
ಅಂಬೇಡ್ಕರ್ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಕಾರ್ಯಕ್ಕೆ ಶ್ಲಾಘನೆ
ಯಾದಗಿರಿ: ನಗರದ ಗಂಜ್ ಪ್ರದೇಶದಲ್ಲಿರುವ ಡಾ. ಅಂಬೇಡ್ಕರ್ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಕ್ಕೆ ಕೈ ಮಗ್ಗ ಮತ್ತು ಜವಳಿ ಇಲಾಖೆ ರಾಜ್ಯ ಯೋಜನಾ ನಿರ್ದೇಶಕ ವಿಜಯಕುಮಾರ ನಿರಾಲಿ ಶನಿವಾರ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಅವರು ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಹತ್ತಾರು ಯೋಜನೆಗಳ ಕುರಿತಂತೆ ಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಂಡರು. ಇದೇ ವೇಳೆ ಕೇಂದ್ರವು ಉತ್ತಮವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಲಾಭ ತಲುಪಿಸುವಂತೆ ಸೂಚನೆ ನೀಡಿದರು. ತರಬೇತಿ ಕೇಂದ್ರದ ವತಿಯಿಂದ ವಿಜಯಕುಮಾರ ಮತ್ತು ಇಲಾಖೆಯ ಸಹಾಯಕ ನಿರ್ದೇಶಕ ಎ.ಜೆ. ನಾಯಕ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಅಧ್ಯಕ್ಷ ಡಾ. ಗಾಳೆಪ್ಪ ಪೂಜಾರಿ, ಮಲ್ಲಣ್ಣ ಐಕೂರು, ಬಸವರಾಜ ಮಡಿವಾಳ, ಮಲ್ಲೇಶ, ಚನ್ನಕೇಶಗೌಡ ಇತರರಿದ್ದರು.
ತಾಲೂಕು ಮಟ್ಟಕ್ಕೆ ಆಯ್ಕೆ
ಸುರಪುರ: ಸಮೀಪದ ರಂಗಂಪೇಟೆಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಎಲ್ಲಮ್ಮ ಗೋವಿಂದಪ್ಪ ಗದ್ವಾಲ್ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.