ಹಾಸ್ಟೆಲ್ ಅವ್ಯವಸ್ಥೆ; ಎಚ್ಚೆತ್ತ ಸಮಾಜ ಕಲ್ಯಾಣಾಧಿಕಾರಿ
ಕೆಂಭಾವಿ: ಪಟ್ಟಣದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಕ್ಕೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಹಾಸ್ಟೆಲ್ ದುರವಸ್ಥೆ ಕುರಿತು 'ಕನ್ನಡಪ್ರಭ' ಶುಕ್ರವಾರ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ವಸತಿ ನಿಲಯಕ್ಕೆ ಭೇಟಿ ಕೊಟ್ಟ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಸವರಾಜ, ವಸತಿ ನಿಲಯವನ್ನು ಪರಿಶೀಲಿಸಿದರು.
ಕಾರಣ ಕೇಳಿ ನೋಟಿಸ್ ಜಾರಿ: ನಂತರ ಮಾತನಾಡಿದ ಅವರು, ವಸತಿ ನಿಲಯವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು ಇಲ್ಲಿಯ ದುರವಸ್ಥೆಯ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ವಸತಿ ನಿಲಯದ ಮೇಲ್ವಿಚಾರಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನೆರಡು ದಿನದಲ್ಲಿ ಈ ವಸತಿ ನಿಲಯದ ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು. ಮೇಲ್ವಿಚಾರಕಿ ಯಶೋಧಾ ರಾಠೋಡ, ದಿವಾಕರ ಹಾಗೂ ಸೋಮಶೇಖರ ಇದ್ದರು.