ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಬಕಾರಿ ಅಧಿಕಾರಿ ಬೇಜವಾಬ್ದಾರಿ ಮಾತು

Vishwanath S
Updated On : 5 Aug 2013, 12:36 pm

ಕನ್ನಡಪ್ರಭ ವಾರ್ತೆ ,  ಆಳಂದ ,  ಆ.4
ಸಾರಾಯಿ ಮಾರಾಟ ತಡೆಯಬೇಕು ಎಂದು ಅಬಕಾರಿ ಅಧಿಕಾರಿಗೆ ಗ್ರಾಮದ ಮುಖಂಡರು ಒತ್ತಾಯಿಸಿದರೆ, ಕುಡಿಯುವುದೇ ಬಿಟ್ಟರೆ ಇದೆಲ್ಲ ಉಸಾಬರಿ ಬರೋದಿಲ್ಲ ಎಂದು ತಾಲೂಕಿನ ಸರಸಂಬಾ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಬಕಾರಿ ಅಧಿಕಾರಿಯೊಬ್ಬರು ಹೇಳಿ ಸಭೆಯಲ್ಲಿ ಆಶ್ಚರ್ಯ ಮೂಡಿಸಿದರು.
ಈಗಾಗಲೇ ಹಲವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ ಎಂದಾಗ ಮಧ್ಯ ಪ್ರವೇಶಿಸಿದ ಗ್ರಾಮದ ಪಂಡಿತ ಖಾನಾಪುರೆ ಮತ್ತು ಮಹಾಂತೇಶ ಆಲೂರೆ ಅವರು ಪ್ರಕರಣ ಪದೇ ಪದೇ ಒಬ್ಬರ ಮೇಲೆ ದಾಖಲಿಸಿದರೆ ನ್ಯಾಯಾಲಯದಿಂದ ಬಿಡುಗಡೆಯಾಗಿ ಅದೇ ಕೆಲಸ ಮುಂದುವರೆಸಿದ್ದಾರೆ. ಯುವಕರು ಕುಡಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಕ್ಷಣವೇ ಸಾರಾಯಿ ಮಾರಾಟ ತಡೆಯಬೇಕು. ಇಲ್ಲವಾದಲ್ಲಿ ಗ್ರಾಮದ ಯುವಕರು ಮತ್ತು ಮಹಿಳೆಯರು ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಅಂಗನವಾಡಿ ಶಿಕ್ಷಕಿ ಯಾರು?! ಸಭೆಯ ಆರಂಭದಲ್ಲಿ ಭಾಗವಹಿಸಿದ್ದ ಸಿಡಿಪಿಒ ಅಶೋಕ ರಾಜನ್ ಮಧ್ಯದಲ್ಲಿ ನಿರ್ಗಮಿಸಿದರು. ಅಂಗನವಾಡಿ ಮತ್ತು ಅದಕ್ಕೆ ಪೂರೈಸಿದ ಆಹಾರ ಧಾನ್ಯ ಒಬ್ಬರ ಮನೆಯಲ್ಲೇ ಇರುತ್ತದೆ. ಯಾವ ಮಕ್ಕಳಿಗೆ ಅದರ ಲಾಭ ತಟ್ಟಿಲ್ಲ. ಅಂಗನವಾಡಿ ಶಿಕ್ಷಕಿಯಾರೆಂಬುದೇ ಗೊತ್ತಾಗಿಲ್ಲ ಎಂದು ಪಂಡಿತ ಖಾನಾಪುರೆ ಹರಿಹಾಯ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರು ಅಂಗನವಾಡಿ ಪ್ರಕರಣವನ್ನು ಸರಿಪಡಿಸುವಂತೆ ಮೇಲ್ವಿಚಾರಕಿ ಅವರಿಗೆ ಸೂಚಿಸಿದರು. ಮಾಸಾಶನ ಕಡಿತಗೊಂಡ ಫಲಾನುಭವಿಗಳಿಗೆ ಸರ್ಕಾರ ಮಾಸಾಶನ ನೀಡುವಂತೆ ಆದೇಶಿಸಿದ ದಾಖಲೆಗಳನ್ನು ಸರಿಪಡಿಸಿಕೊಂಡರೆ ಹಣ ಒದಗಿಸಲಾಗುವುದು. ಪಡಿತರ ಚೀಟಿಗೆ ಹೊಸ ಅರ್ಜಿಗಳನ್ನು ಸಲ್ಲಿಸಿದರೆ ಎರಡು ತಿಂಗಳಲ್ಲಿ ಚೀಟಿ ನೀಡಲಾಗುವುದು ಎಂದು ವಿವರಿಸಿದರು.
217 ಶಿಕ್ಷಕರ ಕೊರತೆ: ನಾಗಲೇಗಾಂವ, ಸರಸಂಬಾ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕುರಿತಾದ ಅರ್ಜಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರು, ತಾಲೂಕಿನಲ್ಲಿ 217 ಶಿಕ್ಷಕರ ಕೊರತೆಯಿದೆ. ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶಿಸಿದೆ. ಅರ್ಹತೆಗೆ ಅನುಗುಣವಾಗಿ ಎಸ್‌ಡಿಎಂಸಿ ಅವರು ಶಿಕ್ಷಕರನ್ನು ನೇಮಿಸಿಕೊಂಡು ಕೆಲಸ ಸಾಗಿಸಬೇಕು ಎಂದು ಅವರು ಹೇಳಿದರು.
ಗ್ರಾಮದ ಸಾತಲಿಂಗಪ್ಪ ಪಾಟೀಲ್ ಇತರರು ಸೇರಿ ಗ್ರಾಮಕ್ಕೆ ಲೈನ್‌ಮನ್, ಗ್ರಾಪಂ ಕಚೇರಿಗೆ ಸಿಬ್ಬಂದಿ ಹಾಗೂ ವಿದ್ಯುತ್ ತಂತಿ ನವೀಕರಣ, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸೇರಿ ಸರಸಂಬಾ ಗ್ರಾಪಂ ವ್ಯಾಪ್ತಿಯ ಹಲವು ಸೌಲಭ್ಯ ಒದಗಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಮನೆಯೇ ಕೊಟ್ಟಿಲ್ಲ: ಗ್ರಾಪಂ ಪಿಡಿಒ ಅವರಿಗೆ ವರ್ಗಾವಣೆ ಕೈಗೊಳ್ಳಬೇಕು ಎಂದು ಅರ್ಜಿ ಸಲ್ಲಿಸಲಾಯಿತು. ಸ್ಮಶಾನ ಭೂಮಿ, ಸಿದ್ಧಾರ್ಥ ನಗರದಲ್ಲಿ ಶಾಲೆ ಆರಂಭಗೊಂಡು ಎಂಟು ವರ್ಷಗಳಾದರೂ ಅಡುಗೆ ಕೋಣೆ ನೀಡಿಲ್ಲ. ವೈದ್ಯಾಧಿಕಾರಿಗಳ ಕೊರತೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮನೆ ಕೊಡುತ್ತಾರೆ ಎಂದು ಬಡ್ಡಿಯಿಂದ ಹಣ ತೆಗೆದು ಕೊಟ್ಟಿದ್ದೇವೆ, ಇನ್ನೂ ಮನೆಯೇ ಕೊಟ್ಟಿಲ್ಲ. ಗ್ರಾಮಸಭೆ ಎಂದು ಎರಡು ಕಡೆ ಸಭೆ ನಡೆಸಿದ್ದಾರೆ ಎಂದು ತರಕಾರಿ ವ್ಯಾಪಾರಿ ಫುಲಾಬಾಯಿ ಮತ್ತು ಬಸಣ್ಣ ಮೇಲಿನಕೇರಿ ಅವರು ಆರೋಪಿಸಿದರು. ಒಟ್ಟು 22 ಅರ್ಜಿಗಳ ಕುರಿತು ತಹಸೀಲ್ದಾರರು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಹಾಯಕ ಕೃಷಿ ನಿರ್ದೇಶಕ ಶಶಾಂಕ ಶಹಾ, ತಾಪಂ ಗ್ರಾಪಂ ಅಧ್ಯಕ್ಷ ಗುರುನಾಥ ಮೂಲಗೆ, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ, ಜಿಪಂ ಎಇಇ ಶಿವಲಿಂಗಪ್ಪ ಕಲಶೆಟ್ಟಿ, ಎಂಜಿನಿಯರ್ ಚಂದ್ರಕಾಂತ, ಸಮಾಜ ಕಲ್ಯಾಣಾಧಿಕಾರಿ ಕಮಲಾಬಾಯಿ ತಮ್ಮನ್, ಆಹಾರ ನಿರೀಕ್ಷಕ ದತ್ತಾತ್ರೆಯ ಇತರ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement