ಪ್ಯಾಸೆಂಜರ್ ರೈಲು ನಿಲುಗಡೆಗೆ ಆಗ್ರಹ
ಆಳಂದ: ತಾಲೂಕಿನ ಬೆಣ್ಣೆಶಿರೂರ ಗ್ರಾಮದ ಹತ್ತಿರ ಮಧ್ಯ ರೇಲ್ವೆ ಹಾದು ಹೋಗಿದ್ದು, ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕಾಗಿ ಪ್ಯಾಸೆಂಜರ್ ರೈಲು ಗಾಡಿಗಳನ್ನು ನಿಲ್ಲಿಸಬೇಕು ಹಾಗೂ ಮೇಲ್ ಸೇತುವೆಗಳನ್ನು ನಿರ್ಮಾಣ ಮಾಡುವಂತೆ ಗ್ರಾಮದ ಮಹಾತೇಂಶ ಬನ್ನಿಕಟ್ಟಿ, ರವಿ ಮೇಲಕೇರಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಬೆಣ್ಣೆಶಿರೂರ ಗ್ರಾಮವು ತಾಲೂಕಿನ ಕೊನೆಯ ಗ್ರಾಮವಾಗಿದ್ದು, ರಸ್ತೆ ಇಲ್ಲ, ಸಾರಿಗೆ ಬಸ್ಸುಗಳ ಮುಖ ಇದುವರೆಗೂ ಕಂಡಿಲ್ಲ. ಸುಮಾರು 5 ಸಾವಿರ ಜನಸಂಖ್ಯೆ ಹೊಂದಿದ್ದರು ಮೂಲ ಸೌಲಭ್ಯಗಳಿಲ್ಲದೆ ನರಳುವಂತಾಗಿದೆ ಎಂದು ತಿಳಿಸಿದ್ದಾರೆ. ಶಾಲಾ, ಕಾಲೇಜುಗಳಿಗೆ ಹೋಗಬೆಕಾದರೆ ಮಾಡಿಯಾಳ ಇಲ್ಲವೆ ಕುಲಾಲಿ ಸ್ಟೇಷನ್ಗೆ ಹೋಗುವುದು ನಿತ್ಯದ ಮಾತಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಕಂಡರೂ ಗ್ರಾಮಕ್ಕೆ ಮೂಲ ಸೌಲಭ್ಯಗಳು ಕನಸಿನ ಮಾತಾಗಿ ಉಳಿದಿವೆ ಎಂದು ನೋವಿನಿಂದ ಹೇಳಿದ್ದಾರೆ. ಬಡ ಜನರು ಉದ್ಯೋಗಕ್ಕಾಗಿ ಪುಣೆ, ಮುಂಬಯಿ, ಹೈದ್ರಾಬಾದ್, ಬೆಂಗಳೂರಿಗೆ ಹೋಗುತ್ತಾರೆ. ಜನರಿಗೆ ಅನುಕೂಲ ಕಲ್ಪಿಸಬೇಕು. ಸಂಬಂಧಿತರು ಸ್ಪಂದಿಸದೇ ಹೋದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಸ್ಡಿಎಂಸಿ ರದ್ದು ಮಾಡಲು ಆಗ್ರಹ
ಚಿತ್ತಾಪುರ: ತಾಲೂಕಿನ ಇಟಗಾ ಸರ್ಕಾರಿ ಶಾಲೆಯಲ್ಲಿ ರಚನೆಯಾದ ಎಸ್ಡಿಎಂಸಿ ರದ್ದು ಮಾಡಬೇಕೆಂದು ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ತಮ್ಮಣ್ಣ ಡಿಗ್ಗಿ ಅವರು ಕ್ಷೇತ್ರ ಶೀಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ದಿಗ್ಗಾಂವ ಗ್ರಾಪಂ ಅಧ್ಯಕ್ಷರ ಅಣ್ಣನವರು ಸಭೆಗೆ ಬಂದು ಸಿಆರ್ಸಿ ಅವರನ್ನು ಶಾಲೆಗೆ ಕರೆಸಿ ಎಸ್ಡಿಎಂಸಿ ರಚನೆ ಮಾಡಿದ್ದಾರೆ. ಗ್ರಾಮದ ಪಾಲಕರ ಗಮನಕ್ಕೆ ತರದೆ ಹಾಗೂ ಊರಲ್ಲಿ ಡಂಗೂರ ಹೋಡಿಸದೆ ಅಧ್ಯಕ್ಷರೆಂದು ಸುಳ್ಳು ಹೇಳಿ ಕಾನೂನು ಬಾಹಿರವಾಗಿ ಎಸ್ಡಿಎಂಸಿ ರಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅದನ್ನು ರದ್ದುಗೊಳಿಸಿ ಪುನಾ ನಿಯಮನುಸಾರವಾಗಿ ಸಭೆ ಕರೆದು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನಿರ್ಲಕ್ಷಿಸಿದರೆ ಸಂವಿಧಾನ ಬದ್ದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
'ಆಡ್ವಾಣಿ' ನಾಪತ್ತೆ!
ಗುಲ್ಬರ್ಗ/ಶಹಾಬಾದ್: ಶಹಾಬಾದ್ ನಗರ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ, ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ವಿವಿಧ ವಲಯಗಳ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮದ ನಿಮಿತ್ತ ನಗರದ ವಿವಿಧ ಭಾಗದಲ್ಲಿ ಕಟ್ಟಿದ ಬ್ಯಾನರ್ಗಳಲ್ಲಿ ಎಲ್.ಕೆ. ಆಡ್ವಾಣಿ ಹೆಸರು ನಾಪತ್ತೆಯಾಗಿತ್ತು. ಜಿಲ್ಲಾ, ರಾಜ್ಯ, ಕೇಂದ್ರದ ಪಕ್ಷದ ಮುಖಂಡರ ಚಿತ್ರಗಳಿದ್ದು, ಪಕ್ಷವನ್ನು ಕಟ್ಟಿ ಬೆಳೆಸಿ, ಮೋದಿಯಿಂದ ಹಿಡಿದು ಕೆಳ ಹಂತದ ನಾಯಕರ ಭಾವಚಿತ್ರವಿದ್ದರು. ಆದರೆ ಎಲ್.ಕೆ. ಆಡ್ವಾಣಿಯವರು ಚಿತ್ರ ಬ್ಯಾನರ್ಗಳಲ್ಲಿ ಕಾಣಲಿಲ್ಲ, ಜಿಲ್ಲಾ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ ತಮ್ಮ ಭಾಷಣದಲ್ಲಿ ನರೇಂದ್ರ ಮೋದಿ ಹೆಸರು ಮಾತ್ರ ಹೇಳಿ, ಲೋಹ ಪುರುಷನ ಹೆಸರು ಮಾತ್ರ ಪ್ರಸ್ತಾಪಿಸಲಿಲ್ಲ.
ಬಳಿಚಕ್ರ ಮಹೇಶ್ವರಿ ದೇವಸ್ಥಾನದಲ್ಲಿ ಕಳವು
ಯಾದಗಿರಿ: ತಾಲೂಕಿನ ಬಳಿಚಕ್ರ ಗ್ರಾಮದ ಮಹೇಶ್ವರಿ ದೇವಿ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವದಲ್ಲಿ ಗರ್ಭಗುಡಿಯ ಮಖ್ಯದ್ವಾರದ ಕೀಲಿ ಮುರಿದು ಕಳ್ಳತನ ನಡೆಸಿರುವ ಪ್ರಕರಣ ನಡೆದಿದೆ. ದೇವಸ್ಥಾನದ ಗರ್ಭಗುಡಿಯ ಮುಖ್ಯದ್ವಾರದ ಕೀಲಿ ಮುರಿದು 2 ಕೆಜಿ ತೂಕದ 2 ದೇವಿಯ ಬೆಳ್ಳಿ ಉತ್ಸವ ಮೂರ್ತಿ, 1 ಕೆಜಿ ತೂಕದ ಬೆಳ್ಳಿ ಖಡ್ಗ ಮತ್ತು ದೇವಿಗೆ ಹಾಕಲಾಗಿದ್ದ ಚಿನ್ನದ ಮೂಗುತಿ ಸೇರಿದಂತೆ ಒಟ್ಟು ಸುಮಾರು 5 ಕೆಜಿ ಬೆಳ್ಳಿ ಮತ್ತು 50 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಅರ್ಚಕರು ಭಾನುವಾರ ಬೆಳಗ್ಗೆ ಪೂಜೆ ಮಾಡಲು ಬಂದಾಗ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಇದನ್ನು ಗಮನಿಸಿ ಊರಿನ ಜನರಿಗೆ ಮಾಹಿತಿ ನೀಡಿದ್ದಾರೆ. ಗರ್ಭಗುಡಿ ದ್ವಾರದ ಕೀಲಿ ಮುರಿದು ಒಳನುಗ್ಗಿದ ಕಳ್ಳರು, ದೇವಿಗೆ ಹಾಕಲಾಗಿದ್ದ ವಿವಿಧ ಬಗೆಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮತ್ತು ಡಿವೈಎಸ್ಪಿ ಎಸ್.ಬಿ. ಕಟ್ಟಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಸವಣ್ಣ ಜಾತ್ರೆ ಪೂರ್ವಭಾವಿ ಸಭೆ
ಯಾದಗಿರಿ: ನಗರದ ವಾಲ್ಮೀಕಿ ನಗರದ ಬೆಟ್ಟದ ಮೇಲಿರುವ ಐತಿಹಾಸಿಕ ಹಿನ್ನೆಲೆಯ ದಂಡಗುಂಡ ಬಸವಣ್ಣ ಜಾತ್ರೆ ನಿಮಿತ್ತ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದರು. ದೇವಸ್ಥಾನ ಮುಖ್ಯ ಅರ್ಚಕ ಸಿದ್ದಯ್ಯಸ್ವಾಮಿ ಮಾತನಾಡಿ, ಪ್ರತಿ ವರ್ಷದಂತೆ ಶ್ರಾವಣ ಮಾಸದ ಮೂರನೇ ಸೋಮವಾರ ಆ. 26ರಂದು ಬೆಳಗ್ಗೆ ಬಸವಣ್ಣನ ಕರ್ತೃ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನಡೆಯುವುದು ಹಾಗೂ ಭಕ್ತರ ಸಹಕಾರದಿಂದ ನೂತನವಾಗಿ ನಿರ್ಮಾಣಗೊಂಡಿರುವ ರಥೋತ್ಸವದ ಕಳಸಾರೋಹಣ ಜರುಗುವುದು ಎಂದು ಹೇಳಿದರು. ಅಂದು ಸಾಯಂಕಾಲ 6ಕ್ಕೆ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ ನಡೆಯುವುದು. ನಂತರ ನಡೆಯುವ ಧರ್ಮ ಸಭೆಗೆ ಈ ಭಾಗದ ಮಠಾಧೀಶರನ್ನು ಆಹ್ವಾನಿಸಲಾಗುವುದು. ಅವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾಟ ನಡೆಸಲಾಗುತ್ತಿದೆ. ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು. ಸಭೆಯಲ್ಲಿ ದೇವಸ್ಥಾನ ಪದಾಧಿಕಾರಿಗಳಾದ ಶಾಂತವೀರಯ್ಯ ಸ್ವಾಮಿ, ಚಂದ್ರಕಾಂತ ಮದ್ದಿನ್, ಬಸವರಾಜಪ್ಪ ನಾಯಕ, ಗಂಗಣ್ಣ ಗುಳಗಿ, ಸುಭಾಶ್ಚಂದ್ರ ಹೆಡಗಿಮದ್ರಿ, ಮೋನಪ್ಪ ಹಳಿಗೇರಿ, ಹಣಮಂತ ಹೊಸಮನಿ, ಪ್ರಭು ಹಕೀಂ, ಬಸವರಾಜ ಗೊಂದೆನೂರ, ಪ್ರಭು ಕಟ್ಟಿಮನಿ, ಕಾಶೀನಾಥ ನಾನೆ ಇತರರು ಭಾಗವಹಿಸಿ ಜಾತ್ರೆಯ ಯಶಸ್ವಿಗೆ ಸಲಹೆ ಸೂಚನೆ ನೀಡಿದರು.