ಬೆಂಗ್ಳೂರಲ್ಲೇ ಉಳಿದ ವೈದ್ಯರು, ತಂತ್ರಜ್ಞರು
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.4
ಕಳೆದ ಅನೇಕ ವರ್ಷಗಳಿಂದ ರೋಗಿಗಳ ಪಾಲಿಗೆ ಇದ್ದು ಇಲ್ಲದಂತಾಗಿರುವ ವಿಠ್ಠಲರಾವ ಸುತ್ರಾವೆ ಪೆರಿಫೇರಲ್ ಕ್ಯಾನ್ಸರ್ ಆಸ್ಪತ್ರೆಗೆ ಕಾಯಕಲ್ಪ ನೀಡುವ ದಿಶೆಯಲ್ಲಿ ಕೆಲಸ ಮಾಡುವುದಾಗಿ ಹೇಳಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಗುಲ್ಬರ್ಗ ಕ್ಯಾನ್ಸರ್ ಆಸ್ಪತ್ರೆಗೆ ನೇಮಕಗೊಂಡು ಬೆಂಗಳೂರಲ್ಲಿ ಕೆಲಸ ಮಾಡುತ್ತಿರುವ 50ಕ್ಕೂ ಅಧಿಕ ವೈದ್ಯರು- ಇತರೆ ಸಿಬ್ಬಂದಿ, ತಂತ್ರಜ್ಞರನ್ನೆಲ್ಲ ತಕ್ಷಣ ಗುಲ್ಬರ್ಗಕ್ಕೆ ಮರಳುವಂತೆ ತಾಕೀತು ಮಾಡಿದ್ದಾರೆ.
ಗುಲ್ಬರ್ಗ ಕ್ಯಾನ್ಸರ್ ಆಸ್ಪತ್ರೆಗೆಂದು ನೇಮಕವಾಗಿರುವ 85 ಹುದ್ದೆಗಳಲ್ಲಿ 25 ಸಿಬ್ಬಂದಿ ಮಾತ್ರ ಇಲ್ಲಿದ್ದಾರೆ. ಇನ್ನುಳಿದವರೆಲ್ಲರೂ ಬೆಂಗಳೂರಲ್ಲಿ ಇದ್ದಾರೆಂಬ ಮಾಹಿತಿ ದೊರಕಿದೆ. ಈ ಬಗ್ಗೆ ಹೆಚ್ಚಿನ ಪರಿಶೀಲನೆಗೆ ತಾವು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿದ್ದಾಗಿ ಹೇಳಿದ ಡಾ. ಪಾಟೀಲ್ ಇನ್ನೊಂದು ವಾರದಲ್ಲಿ ನಿರ್ದೇಶಕರು ಗುಲ್ಬರ್ಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗುಲ್ಬರ್ಗ ಕ್ಯಾನ್ಸರ್ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ 2 ಹಂತದಲ್ಲಿ ಅಭಿವೃದ್ಧಿ ಮಾಡುವ ವಿಚಾರ ಸರ್ಕಾರದ್ದಾಗಿದೆ. ಬಜೆಟ್‌ನಲ್ಲಿ ಹಣ ನಿಗದಿಯಾಗಿದೆ. ಸಿಬ್ಬಂದಿ ವಿಚಾರ, ಮೂಲ ಸೌಕರ್ಯ, ರೇಡಿಯೇಶನ್ ಇತ್ಯಾದಿ ಸಂಗತಿಗಳನ್ನೆಲ್ಲ ಅರಿಯಲು ಕಿದ್ವಾಯಿ ನಿರ್ದೇಶಕರಿಗೆ ಇಲ್ಲಿಗೆ ಬಂದು ಹೋಗಲು ಹೇಳಿದ್ದು, ಅವರಿಂದ ವರದಿ ಬಂದ ನಂತರ ಕಾಮಗಾರಿಗಳು ಶುರುವಾಗುತ್ತವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಡಾ. ಪಾಟೀಲ್ ಸದ್ಯ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ಇದೆ. ಆದರೆ ನಿರೀಕ್ಷಿತವಾಗಿಲ್ಲ, ಪರಿಣಾಮಕಾರಿಯೂ ಆಗಿಲ್ಲ ಎಂದರಲ್ಲದೆ ಸಮಯಾವಕಾಶ ಕೊಡಿ, ಆದಷ್ಟು ಬೇಗನೆ ಆಸ್ಪತ್ರೆ ಬಡವರಿಗೆ ಕೈಗೆಟಕುವಂತೆ ಮಾಡುವೆ ಎಂದು ಭರವಸೆ ನೀಡಿದರು.
ಗುಲ್ಬರ್ಗಕ್ಕೆ ಮೆಡಿಕಲ್ ಕಾಲೇಜು ಮಂಜೂರು: ಸರ್ಕಾರಿ ಮೆಡಿಕಲ್ ಕಾಲೇಜು ಇದೀಗ ಮಂಜೂರಾಗಿದೆ. ಬಜೆಟ್ ಮೇಲಿನ ಚರ್ಚೆಗೆಂದು ನಡೆದ ಸದನದಲ್ಲೇ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ಬರುವ ದಿನಗಳಲ್ಲಿ ಕೈಗೊಳ್ಳಲಾಗುದು ಎಂದು ಡಾ. ಶರಣ ಹೇಳಿದರು.
ಈಗಾಗಲೇ ಇಲ್ಲಿ 700 ಹಾಸಿಗೆಯ ಸರ್ಕಾರಿ ಆಸ್ಪತ್ರೆ ಇದೆ. ಇದನ್ನು ಸರ್ಕಾರಿ ವೈದ್ಯ ವಿದ್ಯಾಲಯಕ್ಕೆ ಬಳಸಬಹುದಾಗಿದೆ ಎಂದರು. ಸರ್ಕಾರಿ ವೈದ್ಯ ವಿದ್ಯಾಲಯಕ್ಕೆ ಕನಿಷ್ಠ 300 ಹಾಸಿಗೆ ಆಸ್ಪತ್ರೆಯಾದರೂ ಬೇಕು. ಪಕ್ಕದ ಯಾದಗಿರಿಯಲ್ಲಿ ಈ ಸೌಕರ್ಯವಿಲ್ಲ, ಅದಕ್ಕೇ ಆ ಜಿಲ್ಲೆಯನ್ನು ಸರ್ಕಾರಿ ವೈದ್ಯ ಕಾಲೇಜಿಗೆ ಗಣಿಸಲಾಗಿಲ್ಲ ಎಂದರು. ಹಿಂದಿನ ಸರ್ಕಾರ 7 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯ ವಿದ್ಯಾಲಯ ಆರಂಭಿಸುವ ಮಾತನ್ನಾಡಿತ್ತಾದರೂ ಎಂಸಿಐಗೆ ಹಣಕಾಸು ಖಚಿತತೆ ನೀಡಿರಲಿಲ್ಲ. ಇದರಿಂದಾಗಿ 7 ಕಾಲೇಜುಗಳ ಪ್ರಸ್ತಾವನೆ ತಿರಸ್ಕೃತಗೊಂಡಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಸಚಿವರು ಹೇಳಿದರು.
ಕಲಂ 371 (ಜೆ) ನಿಯಮಗಳಿಂದ ಹೆಚ್ಚಿನ ಲಾಭ: ಸಂವಿಧಾನದ ಕಲಂ 371 (ಜೆ) ಗೆ ತಿದ್ದುಪಡಿ, ನಂತರ ರಾಜ್ಯ ಸರ್ಕಾರ ರಚಿಸಿರುವ ನಿಯಮಗಳಿಂದ ಈ ಭಾಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊರಗಿನ ಜಿಲ್ಲೆಗಳಲ್ಲಿಯೂ ನೇಮಕಾತಿ, ಇತರೆ ಹಂತಗಳಲ್ಲಿ ಶೇ.8 ರಷ್ಟು ಮೀಸಲಾತಿ ನೀಡಲಾಗಿದೆ. ಸ್ಥಳೀಯವಾಗಿ ಶೇ.80 ಕ್ಕೂ ಹೆಚ್ಚು ನೀಸಲಾತಿ ಇದೆ. ಇವೆಲ್ಲ ಸಂಗತಿಗಳಿಂದಾಗಿ ಕಲಂ 371 (ಜೆ) ಈ ಭಾಗದವರಿಗೆ ಹೆಚ್ಚಿನ ಪ್ರಯೋಜನ ತರಲಿದೆ ಎಂದರು.
ಹೈ-ಕ ರಹವಾಸಿ ವಿಚಾರ ನಿರ್ಧರಿಸುವ ಸಂಗತಿಗಳಲ್ಲಿ ಸರ್ಕಾರ ಹೇಳಿರುವಂತಹ ಯಾರೇ ಹೈ-ಕ ಪ್ರದೇಶಕ್ಕೆ ಬಂದು 10 ವರ್ಷ ವಾಸವಿದ್ದರೆ ಅವರಿಗೆ ಈ ಸೌಕರ್ಯ ದೊರಕಬೇಕು ಎಂದಿದೆ. ಈ ಭಾಗದಿಂದ ವಲಸೆ ಹೋಗಿರುವವರಿಗೂ ವಂಚನೆ ಆಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಅವಧಿ ನಿಗದಿಮಾಡಲಾಗಿದೆ. ಇದರಿಂದ ಯಾವುದೇ ಹೆಚ್ಚಿನ ಪಾಲು ಮೂಲ ಹೈ-ಕ ವಾಸಿಗಳ ಕೈ ತಪ್ಪಿ ಹೋಗದು ಎಂದರು.
ಸೇಡಂ ಪಟ್ಟಣದ ಮಧ್ಯದಲ್ಲೇ ರೇಲ್ವೆ ಹಳಿ ಸರಿಯಲ್ಲ: ಸೇಡಂ ಪಟ್ಟಣದಲ್ಲಿ ತೀವ್ರ ವಿವಾದ ಹುಟ್ಟು ಹಾಕಿರುವ ಪಟ್ಟಣದ ನಡುವೆಯೇ ಸಾಗಿ ಹೋಗುವ ವಾಸವದತ್ತಾ ಸಿಮೆಂಟ್ ಸಾಗಾಣಿಕೆಯ ರೈಲು ಮಾರ್ಗ ಅಲ್ಲಿಂದ ಊರ ಹೊರಗಡೆ ಸ್ಥಳಾಂತರವಾಗಬೇಕು. ಇದು ಸುರಕ್ಷತೆ ದೃಷ್ಟಿಯಿಂದ ಹೆಚ್ಚು ಸೂಕ್ತ. ಆದರೆ ರೇಲ್ವೆ ಲಾಖೆಯೇ ಈ ಸ್ಥಳಾಂತರ ಕೆಲಸ ನಿರ್ವಹಿಸಲಿ ಎಂದು ಕಾರ್ಖಾನೆಯವರು ಹೇಳುತ್ತಿದ್ದಾರೆ. ಹೀಗಾಗಿ ಈ ಮಾರ್ಗ ಸ್ಥಳಾಂತರ ವಿಚಾರ ವಿವಾದವಾಗಿದೆ. ಬರುವ ದಿನಗಳಲ್ಲಿ ಈ ವಿವಾದ ಸುಖಾಂತ್ಯ ಕಾಣಲಿದೆ ಎಂದರು.
ಉಸ್ತುವಾರಿ ಅದಲು ಬದಲು ಯಾಕ್ರಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 2 ತಿಂಗಳಲ್ಲಿ ಬೀದರ್- ರಾಯಚೂರು ಎಂದು ತಮ್ಮ ಜಿಲ್ಲಾ ಉಸ್ತುವಾರಿ ಸಚಿವ ಗಿರಿಯನ್ನು 5 ಬಾರಿ ಆಕಡೆ- ಈಕಡೆ ಮಾಡಲಾಯ್ತು. ಸ್ಥಳೀಯವಾಗಿ ಕೆಲವು ಶಾಸಕರ ಅಭಿಪ್ರಾಯದಿಂದಾಗಿ ಈ ಅದಲು- ಬದಲು ಸಾಗಿದೆ ಎಂದರಾದರೂ ತಮಗೆ ಯಾವ ಜವಾಬ್ದಾರಿ ನೀಡರು ನಿಬಾಯಿಸುವ ಸಾಮರ್ಥ್ಯವಿದ್ದ ಕಾರಣ ತಾವು ಇಂತಹ ಬೆಳವಣಿಗೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.
ಕೆಲಸ ಮಾಡಲು ಸಮಯ ಬೇಕ್ರಿ: ಸಚಿವರಾಗಿ 2 ತಿಂಗಳಾಗಿದೆ. ಗುಲ್ಬರ್ಗ ನಗರ, ಜಿಲ್ಲೆಯ ಜನರ ಬೇಕು ಬೇಡಗಳನ್ನರಕಿತು ಕೆಲಸ ಮಾಡಲು ತುಸು ಸಮಯಾವಕಾಶ ಬೇಕು ಎಂದು ಹೇಳಿದ ಡಾ. ಶರಣ ಪಾಟೀಲ್, ಪತ್ರಕರ್ತರು ನಗರದಲ್ಲಿ ಹದಗೆಟ್ಟಿರುವ ರಸ್ತೆ ಸೇರಿದಂತೆ ಮೂಲ ಸೌಕರ್ಯ ವಿಚಾರದಲ್ಲಿ ಎಲ್ಲೆಡೆ ಕಾಣುತ್ತಿರುವ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತ ಏನಾದರೂ ಮಾಡಿರಿ, ಜನಪರ ಕೆಲಸಗಳಿಗೆ ಚಾಲನೆ ಕೊಡಿ ಎಂದರು.
ಖರ್ಗೆ ರೇಲ್ವೆ ಸಚಿವರಾದ ನಂತರ ಅನೇಕ ಬೃಹತ್ ಯೋಜನೆಗಳು ಜಿಲ್ಲೆಗೆ ಬಂದವು. ಅವುಗಳ ಉದ್ಘಾಟನೆಗೂ ಸಿಎಂ ಸಿದ್ದರಾಮಯ್ಯ ಬರಲಿಲ್ಲವಲ್ಲ ಎಂಬ ಪ್ರಶ್ನೆಗೆ ಸ್ಪಂದಿಸಿದ ಡಾ. ಶರಣಪ್ರಕಾಶ ಸದನವಿತ್ತು, ಬಜೆಟ್ ಮೇಲಿನ ಚರ್ಚೆ ಇದ್ದಾಗ ಸಿಎಂ ಸಾಮಾನ್ಯವಾಗಿ ಸದನದಲ್ಲಿರುತ್ತಾರೆ. ಅದಕ್ಕೇ ಬರಲಿಲ್ಲ, ಲೋಕಸಭೆ ಉಪಚನಾವಣೆಗಳ ನಂತರವೇ ಸಿಎಂ ಗುಲ್ಬರ್ಗ ಸೇರಿದಂತೆ ಹೈ-ಕ ಜಿಲ್ಲೆಗಳ ಪ್ರವಾಸ ಮಾಡಬಹುದು ಎಂದರು.