ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಹಿತ್ಯ ಲೋಕಕ್ಕೆ 'ಅರಿವು ಬೆಳಕು'

Vishwanath S
Updated On : 5 Aug 2013, 12:36 pm

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಆ.4
ಸಂವಿಧಾನಾತ್ಮಕ ಮತ್ತು ನ್ಯಾಯಾಂಗ ವ್ಯವಸ್ಥೆಯ ಅಂಶಗಳನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳಲು ಕನ್ನಡದಲ್ಲಿ ಸರಳೀಕರಣಗೊಳಿಸಿದ ಅರಿವು ಬೆಳಕು ಕೃತಿ ಸಾಹಿತ್ಯ ಲೋಕಕ್ಕೆ ಹೊಸ ಕೊಡುಗೆಯಾಗಿದೆ ಎಂದು ಧಾರವಾಡ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಜೆ.ಎಸ್. ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೌಹಾರ್ದ ಭಾರತ ಹಾಗೂ ಕಾನೂನು ಸಲಹಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ಅರಿವು ಬೆಳಕು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾಮಾನ್ಯರಿಗೂ ತಿಳಿಯಬಲ್ಲದು: ದಾಸ್ ಅವರು ನ್ಯಾಯಾಂಗ ವ್ಯವಸ್ಥೆಗೆ ಹೊಸ ರೂಪ ಮತ್ತು ಸ್ವರೂಪ ಕಲ್ಪಿಸಿಕೊಟ್ಟಿದ್ದಾರೆ. ನ್ಯಾಯಬದ್ಧತೆ ಮೇಲೆ ಸಮಾಜ ಕಟ್ಟುವ ಪ್ರಯತ್ನ ಮಾಡಿದ್ದಾರೆ. ನ್ಯಾಯಾಂಗದ ಚೌಕಟ್ಟು ಒಡೆಯದೆ ಕ್ಲಿಷ್ಟಕರವಾದ ಕಾನೂನಿನ ನೀತಿ ನಿಯಮಗಳನ್ನು ಸಾಮಾನ್ಯ ಜನತೆಗೆ ತಿಳಿಯುವ ಹಾಗೆ ಕೃತಿ ರಚಿಸಿದ್ದಾರೆ ಎಂದರು.
ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಡಾ. ಮೀನಾಕ್ಷಿ ಬಾಳಿ ಕೃತಿ ಕುರಿತು ಮಾತನಾಡಿ, ಮೂಲತಃ ತೆಲಗು ಮಾತೃಭಾಷೆ ಹೊಂದಿರುವ ನ್ಯಾಯಮೂರ್ತಿ ದಾಸ್ ಅವರು ಕನ್ನಡ ಭಾಷೆ ಕಲಿತು ಅಧ್ಯಯನ ಮಾಡಿ ಕಾನೂನಿನ ಕಠಿಣ ಶಬ್ದಗಳನ್ನು ಕನ್ನಡೀಕರಣಗೊಳಿಸಿ ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಕೃತಿ ರಚಿಸಿದ್ದಾರೆ ಎಂದರು.
ಸಂವಿಧಾನದ ಕೈಪಿಡಿ: ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಸಂವಿಧಾನದ ಅಂಶಗಳನ್ನು ಕನ್ನಡದಲ್ಲಿ ಸರಳವಾಗಿ ಕೃತಿ ನೀಡಿದ್ದು, ಇದು ಸಂವಿಧಾನದ ಕೈಪಿಡಿಯಾಗಿದೆ ಎಂದ ಅವರು, ಕಾನೂನಿನ ಕೃತಿ ರಚಿಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಶೋಷಣೆ, ಅನ್ಯಾಯ, ಭ್ರಷ್ಟಾಚಾರ, ಮೂಲಭೂತ ಹಕ್ಕು, ಕರ್ತವ್ಯಗಳು, ಪರಿಸರ ನಾಶ, ಭಯೋತ್ಪಾದನೆ ಸೇರಿದಂತೆ ವಿವಿದ ಅಂಶಗಳ ಕುರಿತು ಸುಮಾರು 28 ಲೇಖನಗಳು ಬರೆದಿದ್ದಾರೆ ಎಂದು ವಿವರಿಸಿದರು.
ಜೀವನಕ್ಕೆ ಕೊನೆ ಆಸರೆ ಕಾನೂನು: ಪ್ರಸ್ತುತ ವ್ಯವಸ್ಥೆ ಹಾಳಾಗಿದ್ದು, ವ್ಯಕ್ತಿಯ ಜೀವನದ ಕೊನೆಯ ಆಸರೆ ಕಾನೂನು ಆಗಿದೆ ಎಂದ ಅವರು, ಇಂತಹ ಉತ್ತಮ ಕಾನೂನಾತ್ಮಕ ಕೃತಿಗಳನ್ನು ಇನ್ನೂ ಹೆಚ್ಚು ಹೊರ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಹೈಕೋಟ್ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ತೆಲುಗು ಮಾತೃಭಾಷೆ ಹೊಂದಿರುವ ತಾವು ಕಾಲಕ್ರಮೇಣ ಕನ್ನಡ ಭಾಷೆ ಕಲಿತು ಅಧ್ಯಯನ ಮಾಡಿ ನ್ಯಾಯಾಂಗ ನೀತಿ ನಿಯಮಗಳನ್ನು ಕನ್ನಡದಲ್ಲಿ ಕೃತಿ ರಚಿಸಿರುವುದಾಗಿ ಹೇಳಿದರು.
ಮಹಿಳೆಯರ ಮೇಲೆ ಬೆಳಕು ಚೆಲ್ಲಿ: ಅನೇಕ ರೀತಿಯಲ್ಲಿ ಪ್ರಗತಿ ಸಾಧಿಸಿದರೂ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ನಿಲ್ಲುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಕತ್ತಲೆಯಲ್ಲಿರುವ ಮಹಿಳೆಯರಿಗೆ ಬೆಳಕಿಗೆ ತರುವ ಪ್ರಯತ್ನ ಕೃತಿಗಳು ಹೊರಬರಬೇಕಾಗಿದೆ ಎಂದರು.
ಸಮಾರಂಭದಲ್ಲಿ ನ್ಯಾ. ಅಬ್ದುಲ್ ನಜೀರ್, ಗುಲ್ಬರ್ಗ ವಿಶ್ವವಿದ್ಯಾಲಯದ ಡಾ. ಎಚ್.ಟಿ. ಪೋತೆ, ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಸೌಹಾರ್ದ ಭಾರತದ ಅಧ್ಯಕ್ಷ ಪ್ರೊ. ಆರ್.ಕೆ. ಹುಡಗಿ ಇದ್ದರು.
ಮಾಜಿ ಸಚಿವ ವೈಜನಾಥ ಪಾಟೀಲ್, ಹಿರಿಯ ನ್ಯಾಯವಾದಿ ಬಾಬುರಾವ ಮಂಗಾಣೆ ಸೇರಿದಂತೆ ಹಲವಾರು ವಕೀಲರು, ನ್ಯಾಯಾಧೀಶರು, ನಾಗರೀಕರು ಭಾಗವಹಿಸಿದ್ದರು. ಸೌಹಾರ್ದ ಭಾರತದ ಡಾ. ಕಾಶಿನಾಥ ಅಂಬಲಗೆ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement