ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಳ್ಳಿದಾರಿಗೆ ತರಲು ದಂಡ 'ದಶ'ಗುಣಂ... ಸೂತ್ರ

Vishwanath S
Updated On : 5 Aug 2013, 12:38 pm

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಆ.4
ಹಳ್ಳಿಯತ್ತ ಮುಖ ಹಾಕಿಯೂ ಮಲಗಲ್ಲ... ಅನ್ನೋ ಧೋರಣೆಯ ನವ ವೈದ್ಯ(ಸ್ನಾತಕ, ಸ್ನಾತಕೋತ್ತರ, ಮೆರಿಟ್ ಕೋಟಾ ಅಡಿಯಲ್ಲಿ ಸೀಟ್ ಪಡೆದವರು) ಪದವೀಧರರಿಗೆ ಹಳ್ಳಿದಾರಿಗೆ ತರಲು ಸರ್ಕಾರ ದಂಡವನ್ನೇ ಹತ್ತು ಪಟ್ಟು ಹೆಚ್ಚಿಸಿ ಶಾಕ್ ನೀಡಿದೆ.
ಎಂಬಿಬಿಎಸ್ ಅಥವಾ ಎಂಡಿ, ಎಂಎಸ್ ಪದವಿ ನಂತರ 1 ವರ್ಷ ಹಳ್ಳಿಯಲ್ಲಿ ವೈದ್ಯ ಸೇವೆ ಕಡ್ಡಾಯ ಮಾಡಿದ್ದರೂ ಈ ಸೇವೆ ಒಲ್ಲದ ಎಂಬಿಬಿಎಸ್ ಪದವೀಧರರು ಇದರಿಂದ ಬಚಾವ್ ಆಗಲು ಇರುವ ದಂಡದ ದಾರಿಯಲ್ಲೇ ಸಾಗುತ್ತಿದ್ದರು. ಎಂಬಿಬಿಎಸ್‌ನವರು 1 ಲಕ್ಷ, ಎಂಡಿ, ಎಂಎಸ್ ಪದವೀಧರರು 5 ಲಕ್ಷ ದಂಡ ತೆತ್ತು ಹಳ್ಳಿ ವೈದ್ಯರಾಗದೇ ಜಾರಿಕೊಳ್ಳಲು ಇದುವರೆಗೂ ಅವಕಾಶವಿತ್ತು.
ಆದರೀಗ ಸರ್ಕಾರ ಹಳ್ಳಿ ದಾರಿ ತುಳಿಯಲೊಲ್ಲೆ ಎನ್ನುವ ಯುವ ವೈದ್ಯರ ದಂಡದ ಮೊತ್ತ ಹೆಚ್ಚಿಸಿದೆ. ಎಂಬಿಬಿಎಸ್‌ನವರ ದಂಡದ 1 ಲಕ್ಷದಿಂದ 10 ಲಕ್ಷಕ್ಕೆ ಏರಿಸಿದರೆ, ಸ್ನಾತಕೋತ್ತರ ಪದವೀಧರರಿಂದ(ಎಂಡಿ, ಎಂಎಸ್) ವಸೂಲಿ ಮಾಡುವ ದಂಡದ ಮೊತ್ತವನ್ನು 5 ಲಕ್ಷದಿಂದ 25 ಲಕ್ಷಕ್ಕೆ ಏರಿಸಿದೆ.
ಗ್ರಾಮೀಣ ಭಾಗದಲ್ಲಿ ವೈದ್ಯ ಸೇವೆ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಹಳ್ಳಿಯಲ್ಲಿ ವರ್ಷ ಕೆಲ್ಸ ಮಾಡಿ ಬನ್ನಿ ಎಂದರೆ ಯಾರೂ ಇದಕ್ಕೆ ಒಪ್ಪಲು ಸಿದ್ಧರಿಲ್ಲ. ದಂಡ ವಿಧಿಸಿ ಹೆದರಿಕೆ ಉಂಟು ಮಾಡಿಯಾದರೂ ನವ ವೈದ್ಯರಿಗೆ ಹಳ್ಳಿಯತ್ತ ಸಾಗಹಾಕೋಣ ಎಂಬ ಧೋರಣೆಯೂ ದಂಡವಾಗಬಾರದು ಎಂದು ಸರ್ಕಾರ ಇದೀಗ ಇದುವರೆಗೂ ಇದ್ದ ದಂಡದ ಮೊತ್ತವನ್ನೇ ಹತ್ತು ಪಟ್ಟು ಹೆಚ್ಚು ಮಾಡಿದೆ.
9 ಕೋಟಿ ದಂಡ ಕಟ್ಟಿದರು: ಎಂಬಿಬಿಎಸ್ ಅಥವಾ ಎಂಡಿ, ಎಂಎಸ್ ಪದವೀಧರರಿಗೆ ಹಳ್ಳಿ ಸೇವೆ ಕಡ್ಡಾಯ ಮಾಡಿ 2006ರಲ್ಲಿ ನಿಯಮ ರೂಪಿಸಲಾಗಿತ್ತು. ಇದೇ ನಿಯಮದಲ್ಲೇ ದಂಡದ ಮಾರ್ಗವೂ ನಮೂದಾಗಿದೆ. ಹಳ್ಳಿ ಸೇವೆ ಯಾಕೆ, ದಂಡ ಭರಿಸುವುದೇ ಓಕೆ ಎಂದು ವೈದ್ಯ ಪದವೀಧರರು ಇದುವರೆಗೂ ಸರ್ಕಾರದ ಬೊಕ್ಕಸಕ್ಕೆ ದಂಡ ರೂಪದಲ್ಲಿ 9 ಕೋಟಿ ಹಣ ಭರಿಸಿದ್ದಾರೆ.
ದಂಡ ರೂಪದಲ್ಲಿ ಸರ್ಕಾರದ ಖಜಾನೆ ಸೇರಿರುವ ನವ ಕೋಟಿ ಮೊತ್ತದ ಹಿನ್ನೆಲೆಯಲ್ಲೇ ಯಾರಾದರೂ ಊಹಿಸಬಹುದು, ನವ ವೈದ್ಯರ ಹಳ್ಳಿ ವಿರೋಧಿ ನೀತಿ ಅದೆಷ್ಟು ಪ್ರಬಲವಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಕನ್ನಡಿ ಬೇಕೆ? ಇವೆಲ್ಲ ಬೆಳವಣಿಗೆ ಅರಿತೇ ಸರ್ಕಾರ ದಂಡವನ್ನು ದಶಗುಣ್(ಹತ್ತುಪಟ್ಟು) ಹೆಚ್ಚಿಸಿ ವೈದ್ಯರನ್ನೆಲ್ಲ ಹಳ್ಳಿದಾರಿಗೆ ತರುವ ಪ್ರಯತ್ನ ಮಾಡಿದೆ. ಇದು ಅದೆಷ್ಟು ಯಶಸ್ವಿಯಾಗುವುದೋ ಕಾದು ನೋಡಬೇಕಷ್ಟೆ.
ಹಳ್ಳಿಗೆ ಹೋಗದಿದ್ರೆ ಪದವಿನೇ ಇಲ್ಲ!
ಸಾಮಾನ್ಯ ಜನರಿಗೂ ಆರೋಗ್ಯ ಸೇವೆ ಮನೆ ಬಾಗಿಲಲ್ಲೇ ದೊರಕಬೇಕು ಎಂಬ ಕಲ್ಯಾಣ ರಾಜ್ಯ ಪರಿಕಲ್ಪನೆಯನ್ನಾಧರಿಸಿ ಸರ್ಕಾರ ಹಳ್ಳಿ ಸೇವೆ ನವ ವೈದ್ಯ ಪದವೀಧರರಿಗೆ(ಅದೂ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದ ಪ್ರತಿಭಾನ್ವಿತರಿಗೆ) ಕಡ್ಡಾಯ ಮಾಡಿದ್ದರೂ ಕಳಕಳಿಗೆ ಯಾರೂ ಸ್ಪಂದಿಸದೆ ಇರುವುದು ಸರ್ಕಾರದ ಗಮನ ಬಹುವಾಗಿ ಸೆಳೆದ ಸಂಗತಿ.
ವೈದ್ಯ ಶಿಕ್ಷಣ ಬಡವರಿಗೂ ಕೈಗೆಟುಕಲಿ ಎಂದು ಪ್ರತಿಭಾನ್ವಿತರಿಗೆ ಮೆರಿಟ್ ಕೋಟಾದಲ್ಲಿ ಸೀಟು ಕೊಡಿಸುವ ಸರ್ಕಾರ ಪ್ರತಿ ಎಂಬಿಬಿಎಸ್ ಪದವೀಧರರಿಗೆ 30 ಲಕ್ಷ, ಎಂಡಿ, ಎಂಎಸ್ ಸ್ನಾತಕ ಪದವೀಧರರಿಗೆ 40 ಲಕ್ಷ ವೆಚ್ಚ ಮಾಡುತ್ತದೆ. ಉಳಿದುಕೊಳ್ಳುವ ವೆಚ್ಚ ಕೊಟ್ಟು ಹಳ್ಳಿ ಸೇವೆ ಮಾಡಿ ಎಂದರೂ ಮೂಗು ಮುರಿಯುವ ವೈದ್ಯ ಪದವೀಧರರ ಪ್ರವೃತ್ತಿ ಅಕ್ಷಮ್ಯ ಎಂದಿರುವ ಸರ್ಕಾರ 2012ರಲ್ಲೇ ಹಳ್ಳಿ ಸೇವೆ ಮಾಡದವರಿಗೆ ವೈದ್ಯ ಪದವಿನೇ ಕೊಡಲಾಗದು ಎಂದು ಮಸೂದೆ ಸಿದ್ದಪಡಿಸಿದೆ. ಅದೀಗ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದ ಪರಿಶೀಲನೆಯಲ್ಲಿದೆ.
1 ವರ್ಷ ಹಳ್ಳಿಗೆ ಹೋಗಲು ತೊಂದ್ರೆ ಏನು?
ಎಂಬಿಬಿಎಸ್, ಅಥವಾ ಎಂಡಿ, ಎಂಎಸ್‌ನಂತಹ ವೈದ್ಯಕೀಯ ಪದವಿ ಪಡೆದವರು 1 ವರ್ಷ ಹಳ್ಳಿ ಸೇವೆ ಮಾಡಲು ತೊಂದರೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳಲ್ಲಿ ಉಳಿದುಕೊಳ್ಳುವ ವೆಚ್ಚದ ಸಮೇತ ಸೇವೆ ಮಾಡ್ರಿ ಅಂದ್ರೂ ಒಲ್ಲೆಂದರೆ ಸರ್ಕಾರ ಏನ್ಮಾಡಲು ಸಾಧ್ಯ. ಸಾಕಷ್ಟು ಹಣ ಮೆರಿಟ್ ಕೋಟಾ ವೈದ್ಯ ಸೀಟು ಪಡೆದವರ ಮೇಲೆ ಸರ್ಕಾರ ವೆಚ್ಚ ಮಾಡುತ್ತದೆ. ಅದಕ್ಕೆ ಪ್ರತಿಯಾಗಿ ಹಳ್ಳಿಗೆ ಹೋಗಿ ಬಡವರ ಸೇವೆ ಮಾಡಬನ್ನಿ, ಜೊತೆಗೇ ಅನುಭವ ಹೆಚ್ಚಿಸಿಕೊಳ್ಳಿ ಅಂತ ಬಯಸೋದು ತಪ್ಪೇ? ವೈದ್ಯರಿಗೆ ಮುಂಚಿನ ದಂಡದ ಮೊತ್ತ ಪಾವತಿಸಲು ಸುಲಭವಾಗಿತ್ತು. ಅದನ್ನೀಗ ಹತ್ತು ಪಟ್ಟು ಹೆಚ್ಚಿಗೆ ಮಾಡಿದ್ದೇವೆ. ಈಗಲಾದರೂ ವೈದ್ಯ ಪದವೀಧರರು ಹಳ್ಳಿ ದಾರಿ ಹಿಡಿಯಲಿ.
- ಡಾ. ಶರಣಪ್ರಕಾಶ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement