ಭೀಮೆಗೂ ಬಂತು ಹೊಸ ನೀರು
ಯಾದಗಿರಿ: ಬರಿದಾಗಿದ್ದ ಭೀಮಾ ನದಿಯೂ ಈಗ ಮೈದುಂಬಿ ಹರಿಯುತ್ತಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಉಜನಿ ಜಲಾಶಯದಿಂದ ನೀರನ್ನು ಬಿಡಲಾಗುತ್ತಿದ್ದು, ಸೋಮವಾರ ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೃಷ್ಣಾ ನದಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ನದಿ ತೀರದ ಅನೇಕ ಗ್ರಾಮಗಳು ತೊಂದರೆಗೆ ಸಿಲುಕಿದ್ದರು. ಆದರೆ ಜಿಲ್ಲೆಯ ಮತ್ತೊಂದು ನದಿ ಭೀಮಾ ಬರಿದಾಗಿತ್ತು. ಇದರಿಂದ ಯಾದಗಿರಿ ಹಾಗೂ ಶಹಾಪುರ ತಾಲೂಕಿನ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಗಿತ್ತು. ಆದರೆ ಈಗ ಭೀಮಾ ನದಿಗೂ ನೀರು ಬಂದಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನು ಕೃಷಿ ಕಾರ್ಯ ಚುರುಕು ಪಡೆದುಕೊಳ್ಳಲಿದೆ.