ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಜಾನಪದ ಯುವ ಜನಾಂಗಕ್ಕೆ ಜೀವಾಳವಾಗಲಿ'

Vishwanath S
Updated On : 7 Aug 2013, 11:17 am

ಗುಲ್ಬರ್ಗ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ಯುವ ಜನಾಂಗಕ್ಕೆ ಗ್ರಾಮೀಣ ಸಂಸ್ಕೃತಿಯ ಮೂಲ ಮಂತ್ರವಾದ ಜಾನಪದವು ಜೀವಾಳವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಹೇಳಿದರು. ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿ ಆರ್ಯನ ಸಮಾಜ ಕಾರ್ಯ ಮಹಾವಿದ್ಯಾಲಯ, ಸಾಯಿ ಪ್ರಸಾದ ಸಮಾಜಕಾರ್ಯ ಮಹಾವಿದ್ಯಾಲಯ, ಸರ್ದಾರ ವಲ್ಲಭಬಾಯಿ ಸಮಾಜ ಕಾರ್ಯ ಮಹಾವಿದ್ಯಾಲಯ ಮತ್ತು ಆರುಂಧತಿ ಸಮಾಜ ಕಾರ್ಯ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರ್ಯನ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಗೋಪಾಪ್ಪ ಆರ್. ರಾಜಾಪುರ, ಶಿವಕುಮಾರ್ ದೊಡ್ಮನಿ, ವಿನೋದ ಎಸ್. ಇದ್ದರು.  ಸಂಗರಾಜ ವಾಲಿಕಾರ್, ಸುನೀಲ್ ಮಾನ್ಪಡೆ, ವಿನೋದ, ಶ್ರೀದೇವಿ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಆರ್ಯನ್ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ ಬಿ. ಹಣಕುಣಿ ಅಧ್ಯಕ್ಷತೆ ವಹಿಸಿದ್ದರು.
ನೇರ ನೇಮಕಾತಿ;
ಸಚಿವರಿಗೆ ಒತ್ತಾಯ
ಗುಲ್ಬರ್ಗ: ಐಟಿಸಿ ತರಬೇತಿದಾರರಿಗೆ ಕೆಪಿಟಿಸಿಎಲ್‌ನಲ್ಲಿ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ಎಐವೈಎಫ್ ಸಂಯೋಜಿತ ಐಟಿಸಿ ತರಬೇತಿದಾರರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಮುಖಂಡರಾದ ಮಹೇಶಕುಮಾರ್ ರಾಠೋಡ, ಭೀಮಾಶಂಕರ ಮಾಡ್ಯಾಳ, ಪ್ರಸನ್ನ ದೇಶಪಾಂಡೆ, ರಾಧಾಕೃಷ್ಣ ಕುಲಕರ್ಣಿ, ಉತ್ತಮಕುಮಾರ್, ಶ್ರೀನಿವಾಸ ಕುಲಕರ್ಣಿ, ಮಂಜುಳಾ ಗಿರಿಜಾ, ಶರಣು ಹೊಸಮನಿ, ಜನಾರ್ಧನ, ಚಂದ್ರಕಾಂತ ಹಾಳೊಳ್ಳಿಕರ್, ಹನುಮೇಶ ಕುಲಕರ್ಣಿ ಇತರರು ಇದ್ದರು.
ಸವಿ ನೆನಪು ದತ್ತಿ ಪ್ರಶಸ್ತಿಗೆ ಕೃತಿ ಆಯ್ಕೆ
ಗುಲ್ಬರ್ಗ: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪು ದತ್ತಿ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ಡಾ. ಎಚ್.ಟಿ. ಪೋತೆ ಅವರ ಕೃತಿ ಆಯ್ಕೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯಲ್ಲಿ ಡಾ.ಎಲ್. ಬಸವರಾಜು ಅವರು ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪಿನಲ್ಲಿ ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿನೆನಪು ದತ್ತಿ ಸ್ಥಾಪಿಸಿದ್ದಾರೆ. 2012-13ನೇ ಸಾಲಿನ ಪ್ರಶಸ್ತಿಯನ್ನು ಈಚೆಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಪೋತೆ ಅವರ ದಲಿತ ಲೋಕ ಎಂಬ ಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗವಿಕಲರ ಸೌಲಭ್ಯದಲ್ಲಿ ಪುರಸಭೆ ನಿರ್ಲಕ್ಷ್ಯ: ಮಹ್ಮದ್
ಚಿತ್ತಾಪುರ: ಇಲ್ಲಿಯ ಪುರಸಭೆ ಮುಖ್ಯಾಧಿಕಾರಿಗಳು ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ತಾಲೂಕ ದೈಹಿಕ ಮತ್ತು ಮಾನಸಿಕ ಅಂಗವಿಕಲ ವಿವಿದೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರು ಜಿಲ್ಲಾಧಿಕಾರಿ ಹಾಗೂ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಕೆಲವು ಸರ್ಕಾರದ ಯೋಜನೆಗಳಲ್ಲಿ ಶೇ.3 ರಷ್ಟು ಮೀಸಲಾತಿ ನೀಡುವುದು ಕಡ್ಡಾಯವಾಗಿದೆ. ಆದರೆ, ಮುಖ್ಯಾಧಿಕಾರಿಗಳು ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
2011-12ನೇ ಸಾಲಿನಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆಯಲ್ಲಿ ವಸತಿ ರಹಿತ ಜನರಿಗೆ ಹಂಚಲು ನಿವೇಶನ ಖರೀದಿ ಮಾಡಲಾಗಿದೆ. ಕಳೆದ 6 ತಿಂಗಳಿಂದ ಅರ್ಹ ಪಲಾನುಭವಿಗಳಿಂದ ಅರ್ಜಿ ಆಹ್ವಾನಿಲಾಗಿದೆ. ಆದರೆ ಆಯ್ಕೆ ಮಾಡದೆ ನೆನೆಗುದಿಗೆ ಇಟ್ಟಿದ್ದಾರೆ.
ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮೀಸಲಾತಿ ಪ್ರಕಾರ  ಅಂಗವಿಕಲರಿಗೆ ಹಂಚಿಕೆ ಮಾಡಿ ಎಂದು ಕೇಳಿದರೆ ನೀವು ಹೇಳಿದಂತೆ ಮಾಡುವುದಿಲ್ಲ ಸದಸ್ಯರು ಹೇಳಿದಂತೆ ನಿವೇಶನ ಹಂಚಿಕೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ವಿವಿಧ ಸರ್ಕಾರಿ ಸೌಲಭ್ಯಗಳನ್ನು ಅಂಗವಿಕಲರಿಗೆ ವಂಚನೆಯಾಗದಂತೆ ನಿವೇಶನ ಹಂಚಿಕೆ ಮಾಡುವಂತೆ ನಿರ್ದೇಶನ ನೀಡಿ ಅಂಗವಿಕಲರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಆಳಂದ; ಜಪಯಜ್ಞ ಸಮಾರೋಪ
ಆಳಂದ: ಪಟ್ಟಣದ ಶರಣನಗರ ಸದ್ಗುರು ರೇವಣಸಿದ್ಧ ಶಿವಶರಣರ ಮಠದಲ್ಲಿ ಒಂದು ತಿಂಗಳ ಕಾಲ ನಡೆದ ಸಾಮೂಹಿಕ ಜಪಯಜ್ಞ ಪೂಜಾ ವಿಧಾನ ಕಾರ್ಯಕ್ರಮ ಸಮಾರೋಪ ಕೈಗೊಳ್ಳಲಾಯಿತು.
ಅಕ್ಕಲಕೋಟದ ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿ ಅವರಿಗೆ ಭಕ್ತಾದಿಗಳು ಪಾದಪೂಜೆ ಕೈಗೊಂಡರು. ಶರಣ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು. ಪುರಸಭೆ ಸದಸ್ಯ ಅಶೋಕ ಇಟಾಮಳೆ, ಗುರುನಾಥ ಕಳಸೆ, ಮಾಜಿ ಸದಸ್ಯ ಗುರುನಾಥ ಷಣ್ಮೂಖ, ಮುಖಂಡ ಸುಭಾಷ ಮಾಳಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುನಾಥ ಅಲಮದ್, ಭೀಮಣ್ಣಪ್ಪ ಶಟಗುಂಡೆ, ಸೂರ್ಯಕಾಂತ ತಟ್ಟಿ, ಸಿದ್ಧರೂಢ ಅಲಮದ್, ಖಿರಾನಂದ ಅಲಮದ್, ಗುರು ಜುಳಜುಳೆ, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.
ಚಿತ್ತಾಪುರದಲ್ಲಿಂದು ಪುರಾಣ ಆರಂಭ
ಚಿತ್ತಾಪುರ: ತಾಲೂಕು ಅಖಿಲ ಭಾರತ ವೀರಶೈವ ಮಹಾಸಭೆ ವತಿಯಿಂದ ಶ್ರಾವಣ ಮಾಸ ನಿಮಿತ್ತ ಆ.7ರಂದು ಎಮ್ಮೆಗನೋರ ಜಡಿ ಸಿದ್ದೇಶ್ವರ ಶಿವಯೋಗಿಗಳ ಪುರಾಣ ಕಾರ್ಯಕ್ರಮ ಆರಂಭವಾಗಲಿದೆ. ಪ್ರತಿದಿನ ಸಂಜೆ 8ಕ್ಕೆ ಅಕ್ಕಮಹಾದೇವಿ ಮಂದಿರದಲ್ಲಿ ನಡೆಯುವ ಪುರಾಣ ಕಾರ್ಯಕ್ರಮವನ್ನು ಬಳೂಟಗಿಯ ಪುರಾಣ ಪ್ರವೀಣರಾದ ಸಿದ್ದೇಶ್ವರ ಶಾಸ್ತ್ರೀಗಳು ಪುರಾಣ ಹೇಳುವರು. ಗವಾಯಿಗಳಾದ ಅಣ್ಣಾರಾವ ಮತ್ತಿಮುಡ, ಶ್ರೀಧರ ಆಚಾರ್ಯ ಅಳ್ಳಳ್ಳಿ ಸಂಗೀತ ಸೇವೆ ಸಲ್ಲಿಸುವರು. ಸಾರ್ವಜನಿಕರು ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕು ಎಂದು ರೇಷ್ಮಿ ತಿಳಿಸಿದ್ದಾರೆ.
15ರಂದು ಸಾಕ್ಷರತಾ ದಿನಾಚರಣೆ
ಗುಲ್ಬರ್ಗ: ಜಿಲ್ಲೆಯ 2011ರ ಜನಗಣತಿಯ ಪ್ರಕಾರ ಶೇ. 50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇರುವ ತಾಲೂಕುಗಳಲ್ಲಿ 2009ರಿಂದ ಸಾಕ್ಷರ ಭಾರತ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ. ಗ್ರಾಪಂ ಮಟ್ಟದಲ್ಲಿ ಸಂಪೂರ್ಣ ಸಾಕ್ಷರತೆ ಸಾಧಿಸುವ ನಿಟ್ಟಿನಲ್ಲಿ ಈ ಬಾರಿ ಆ. 15ರಂದು ಸಾಕ್ಷರತಾ ಆಂದೋಲನ ಹಾಗೂ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಸಹ ಹಮ್ಮಿಕೊಳ್ಳಲಾಗುವುದು ಎಂದು ಗುಲ್ಬರ್ಗ ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ್ ತಿಳಿಸಿದರು. ಜಿಪಂ ಹಳೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂಗಳಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನ ಹಾಗೂ ಸ್ವಾತಂತ್ರ್ಯ ದಿನಾಚರಣೆ ಜೊತೆಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಆಚರಿಸುವ  ಕುರಿತ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ 372 ಜಿಲ್ಲೆಗಳ 1.5 ಲಕ್ಷ ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಕರ್ನಾಟಕದ 17 ಜಿಲ್ಲೆಗಳ 107 ತಾಲೂಕಿನ 3507 ಗ್ರಾಪಂಗಳಲ್ಲಿ ಸಾಕ್ಷರ ಭಾರತ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಈವರೆಗೂ ರಾಜ್ಯದ 16.69 ಲಕ್ಷ ಅನಕ್ಷರಸ್ಥರು, ನವಸಾಕ್ಷರರಾಗಿದ್ದಾರೆ ಎಂದರು.
ನಾಳೆ 'ಒಲಿದಂತೆ ಹಾಡುವೆ'
ಚಿತ್ತಾಪುರ: ತಾಲೂಕಿನ ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಆ.8ರಂದು ಬೆಳಗ್ಗೆ 10.30ಕ್ಕೆ 'ಒಲಿದಂತೆ ಹಾಡುವೆ' ಎಂಬ ಶೀರ್ಷಿಕೆ ಆಡಿಯಲ್ಲಿ ಮಕ್ಕಳ ಹಾಗೂ ಶಿಕ್ಷಕರ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕ ಸಿದ್ದಲಿಂಗ ಬಾಳಿ ತಿಳಿಸಿದ್ದಾರೆ. ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗುಲ್ಬರ್ಗ ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಭಾಗವಹಿಸುವರು. ವಿವರಕ್ಕೆ ಸಿದ್ದಲಿಂಗ ಬಾಳಿ ಮೊ. 95900 92113 ಸಂಪರ್ಕಿಸಬಹುದು.
ದಿಗ್ಗಾಂವ; ಶ್ರೀಗಳ ಪಾದಪೂಜೆ
ಚಿತ್ತಾಪುರ: ತಾಲೂಕಿನ ದಿಗ್ಗಾಂವದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಇಲ್ಲಿಯ ಪಂಚಗ್ರಹ ಹಿರೇಮಠದ ಸಿದ್ದವೀರ ಶಿವಾಚಾರ್ಯರು ಶ್ರಾವಣ ಮಾಸದ ನಿಮಿತ್ತ ಆ.7ರಂದು ಬುಧವಾರದಿಂದ ತಿಂಗಳವರೆಗೆ ಪಾದ ಪೂಜೆ ನಡೆಯಲಿದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಭಕ್ತರು ಭಾಗವಹಿಸಿ ದರ್ಶನ ಪಡೆದುಕೊಳ್ಳಬೇಕು ಎಂದು ಶರಣು ಕಲಕಂಭ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement