ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

Vishwanath S
Updated On : 7 Aug 2013, 11:16 am

ಆಳಂದ: ತಾಲೂಕಿನ ಚಿಂಚೋಳಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಸಮ್ಮುಖದಲ್ಲಿ ಶನಿವಾರ ದಾನಿಯೊಬ್ಬರಿಂದ ದೊರೆತ ಶಾಲಾ ಬ್ಯಾಗ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು. ನಾ ಕಲಿತ ಶಾಲೆ ಹಿಂದಿರುಗಿ ನೋಡು ಎಂಬ ಸರ್ಕಾರದ ಯೋಜನೆಯಂತೆ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತು ಮುಂಬೈನಲ್ಲಿ ಕಂಪೆನಿಯೊಂದರ ಕೆಲಸಕ್ಕೆ ಸೇರಿದ ಗ್ರಾಮದ ಬಸವರಾಜ ಮನೋಹರ್ ಅಮ್ರೆ ಅವರು, ತಮ್ಮ ಮೊದಲ ವೇತನದ 50 ಸಾವಿರ ವೆಚ್ಚದ ಶಾಲಾ ಬ್ಯಾಗ್‌ಗಳನ್ನು ಮಕ್ಕಳಿಗೆ ವಿತರಿಸಿದರು. ಅವರು ಕುಟುಂಬ ಸಮೇತವಾಗಿ ಬ್ಯಾಗ್ ಕೊಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ 150 ಮಕ್ಕಳಿಗೆ ಬ್ಯಾಗ್ ಹಂಚಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಧಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಇಲಾಖೆ ಪರ ಅಭಿನಂದಿಸಿದರು. ಬಸವರಾಜ ಅವರ ಅಜ್ಜಿ ಗಂಗಾಬಾಯಿ ಅಮ್ರೆ, ಮನೋಹರ್ ಅಮ್ರೆ, ಶಿಕ್ಷಣ ಸಂಯೋಜಕ ಕೆ. ಬಸವರಾಜ, ಸಿಆರ್‌ಪಿ ಶಶಿಕಾಂತ ಪಡಶೆಟ್ಟಿ, ಮಲ್ಲಯ್ಯ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಥ್ವಿರಾಜ್, ಮುಖ್ಯಗುರು ಲಾಲಭಾಷಾ, ಗ್ರಾಪಂ ಸದಸ್ಯ ಕಾಶಿನಾಥ ಮುಲಗೆ, ದತ್ತಪ್ಪ ಕಣ್ಣಿ ಇದ್ದರು. ವಿಜಯಕುಮಾರ ಸ್ವಾಗತಿಸಿದರು. ರಾಘವೇಂದ್ರ ನಿರೂಪಿಸಿದರು.

ದೇಶಾಭಿವೃದ್ಧಿಗೆ ಉಪನ್ಯಾಸಕರು ಕೈಗನ್ನಡಿಯಿದ್ದಂತೆ
ಆಳಂದ: ನಾಡು, ದೇಶ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ದೇಶಾಭಿವೃದ್ಧಿಗೆ ಆದರ್ಶ ಉಪನ್ಯಾಸಕರು ಕೈಗನ್ನಡಿಯಿದ್ದಂತೆ ಎಂದು ಯುವ ಮುಖಂಡ ಚಂದ್ರಕಾಂತ ಘೋಡಕೆ ಸಾವಳೇಶ್ವರ ಅಭಿಪ್ರಾಯಪಟ್ಟರು.
  ಪಟ್ಟಣದ ಎ.ವ್ಹಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಡಾ. ಎನ್.ಎಚ್. ಪಾಟೀಲ್, ಎಚ್. ಕಾಮಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಇಲಾಖೆಯಲ್ಲಿ ನೇಮಕ ಹೊಂದಿದವರಿಗೆ ಕೊನೆಗೊಂದು ದಿವಸ ನಿವೃತ್ತಿ ಕಟ್ಟಿಟ್ಟ ಬುತ್ತಿ. ಆದರೆ ವೃತ್ತಿಯ ಸಮಯದಲ್ಲಿ ಮಾಡಿರುವ ಪ್ರಾಮಾಣಿಕ ಸೇವೆಯನ್ನು ವಿದ್ಯಾರ್ಥಿಗಳು ಮರೆಯುವುದಿಲ್ಲ ಎಂದರು. ಪದವಿ ಮಹಾವಿದ್ಯಾಲಯದಲ್ಲಿ ಡಾ. ಪಾಟೀಲ್ ಹಾಗೂ ಎಚ್. ಕಾಮಶೆಟ್ಟಿ ಅವರು ವಿದ್ಯಾರ್ಥಿಗಳ ಮನಗೆದ್ದು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರ್ಯಾಂಕ್ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಹುರಿದುಂಬಿಸುತ್ತಿದ್ದರು. ನಮ್ಮಲ್ಲಿ ಕಲಿತವರು ನಮಗಿಂತ ಮುಂದಿರಬೇಕೆಂಬ ಅವರ ಮಹದಾಸೆ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆ, ಮಾದರಿಯಾಗಲು ಸಾಧ್ಯವಾಯಿತು ಎಂದರು.
  ಡಾ. ಪಿ.ಬಿ. ಬುಳ್ಳಾ, ಎಂ.ಎಂ. ಬೋನಾಳ, ಎಸ್.ಎಸ್. ಪಾಗಾ, ಎಸ್.ಎಸ್. ಕಟ್ಟಿ ಅವರು ನಿವೃತ್ತ ಉಪನ್ಯಾಸಕರ ಸೇವೆಯನ್ನು ಕೊಂಡಾಡಿದರು. ಸನ್ಮಾನ ಸ್ವೀಕರಿಸಿ ಎನ್.ಎಚ್. ಪಾಟೀಲ್, ಎಚ್. ಕಾಮಶೆಟ್ಟಿ ಮಾತನಾಡಿದರು. ಪ್ರಾಚಾರ್ಯ ಡಿ.ಸಿ. ಗಡಗಡೆ ಅಧ್ಯಕ್ಷತೆ ವಹಿಸಿದ್ದರು. ಗುರುಲಿಂಗಯ್ಯ ಸ್ವಾಮಿ, ಶಶಿಕಾಂತ ಶೀಲವಂತ, ಭದ್ರಪ್ಪ ಹರಳಯ್ಯ, ಸುಭಾಷ ಹೊನ್ನಾಳ್ಳಿ ಇತರರಿದ್ದರು.

'ರ್ಯಾಗಿಂಗ್ ಶಿಕ್ಷಾರ್ಹ ಅಪರಾಧ'
ಆಳಂದ: ಶಾಲಾ, ಕಾಲೇಜುಗಳಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ನಡುವೆ ರ್ಯಾಗಿಂಗ್ ಕೈಗೊಂಡರೆ ಶಿಕ್ಷಾರ್ಹ ಅಪರಾಧ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ಎಚ್ಚರಿಸಿದರು. ಪಟ್ಟಣದ ಕೋರ್ಟ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು  ಸ್ಥಳೀಯ ಶ್ರೀನಿವಾಸ ದೇಸಾಯಿ ಪ್ರೌಢಶಾಲೆ ಆಶ್ರಯದಲ್ಲಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಯಾವುದೇ ಸ್ಥಳದಲ್ಲಿ ರ್ಯಾಗಿಂಗ್ ನಡೆದರೆ ಸಹಿಕೊಳ್ಳದೆ ದೂರು ನೀಡಬೇಕು. ಕಾನೂನು ಚೌಕಟ್ಟಿನಲ್ಲಿ ಶಿಕ್ಷೆಗೆ ಅವಕಾಶವಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದ ಉನ್ನತ ಗುರಿ ತಲುಪಬೇಕು ಎಂದರು.
  ಆಂಟಿ ರ್ಯಾಗಿಂಗ್ ವಿಷಯ ಕುರಿತು ನ್ಯಾಯವಾದಿ ಮಹಾದೇವ ಹತ್ತಿ ಮತ್ತು ಶಾಲೆ ಮಕ್ಕಳಿಗಾಗಿ ಸರ್ಕಾರದ ಸೌಲಭ್ಯ ಕುರಿತು ನ್ಯಾಯವಾದಿ ಎಂ.ವಿ. ಎಕಬೋಟೆ ಉಪನ್ಯಾಸ ನೀಡಿದರು.  ಹಿರಿಯ ನ್ಯಾಯವಾದಿ ಬಿ.ಎ. ದೇಶಪಾಂಡೆ ಮಾತನಾಡಿದರು. ಶಾಲಾ ಮುಖ್ಯಗುರು ಮಲ್ಲಿನಾಥ ಮುನ್ನೊಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಡಿ. ಬೋಸಗೆ, ಎಸ್.ಎ. ಪಾಟೀಲ್, ದೀಪಾರಾಣಿ ಪಾಟೀಲ್, ದೇವಾನಂದ ಹೋದಲೂರ್, ಎ.ಸಿ. ತೋಳೆ, ಕಮಲ ರಾಠೋಡ, ಸಂದೀಪ ಚಿಂಚೋರೆ, ಶಿಕ್ಷಕ ಪಂಕಜ ಘಂಟೆ ಇತರರು ಉಪಸ್ಥಿತರಿದ್ದರು. ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಾಮಿರಾವ ಚನ್ನಿಗುಂಡಿ ಕಾರ್ಯಕ್ರಮ ನಿರೂಪಿಸಿದರು. ಬಿ.ಜಿ. ಬೀಳಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement