ಹಿಂದಿ ಪ್ರಚಾರ ಸಭಾಕ್ಕೆ ತಾತ್ಕಾಲಿಕ ಗ್ರಹಣ ಮೋಕ್ಷ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.6
ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಕಳೆದೆರಡು ವರ್ಷಗಳ ಹಿಂದೆಯೇ ಜಿಲ್ಲಾಡಳಿತದಿಂದ ಬೀಗ ಜಡಿಯಲ್ಪಟ್ಟಿದ್ದ ಇಲ್ಲಿನ ಸೇಡಂ ರಸ್ತೆಯಲ್ಲಿರುವ ಹಿಂದಿ ಪ್ರಚಾರ ಸಭಾ ಕಚೇರಿಯನ್ನು ಷರತ್ತು ವಿಧಿಸಿ 1 ವರ್ಷದ ಮಟ್ಟಿಗೆ ಹೈದ್ರಾಬಾದ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಹಿಂದಿ ಪ್ರಚಾರ ಸಭಾಕ್ಕೆ ನೀಡಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಜು.20ರಂದು ಆದೇಶ ಹೊರಡಿಸಿದ್ದಾರೆ. ಹಿಂದಿ ಪ್ರಚಾರ ಸಭಾ ಕಚೇರಿ ಹಾಗೂ ಅದಕ್ಕೆ ನೀಡಲಾಗಿರುವ ಸಮುಚ್ಛಯ ಹಿಂದಿ ಭಾಷೆಯ ಪ್ರಚಾರಕ್ಕೆ ಬಳಕೆಯಾಗದೆ ಅನ್ಯ ಉದ್ದೇಶಗಳಿಗೆ ಪ್ರಚಾರವಾಗುತ್ತಿದೆ ಎಂದು ಈ ಕಚೇರಿ ಚಟುವಟಿಕೆಗಳ ಬಗ್ಗೆ ದೂರು ದಾಖಲಾಗಿತ್ತು. ಇದರ ಹಿನ್ನೆಲೆಯಲ್ಲೇ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್ ಹಿಂದಿ ಪ್ರಚಾರ ಸಭಾ ಕಚೇರಿಗೆ ಬೀಗ ಜಡಿದಿದ್ದರು.
ಅನ್ಯ ಉದ್ದೇಶ ಬಳಕೆಗೆ ಬೇಡ: ಈ ವಿವಾದದ ಬಗ್ಗೆ ಇದೀಗ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಅವರು ಆದೇಶ ನೀಡಿದ್ದು, ಹೈದ್ರಾಬಾದ್‌ನ ಹಿಂದಿ ಪ್ರಚಾರ ಸಭಾ ನಂಬರ್ 712 ಆಸ್ತಿಯ ಮಾಲೀಕರಾಗಿದ್ದಾರೆ. ಇದು 52 ಸಾವಿರ ಚದರ ಅಡಿ ಅಳತೆಯದ್ದಾಗಿದೆ. ಗುಲ್ಬರ್ಗ ಹಿಂದಿ ಪ್ರಚಾರ ಸಭಾ ಹೈದ್ರಾಬಾದ್ ಹಿಂದಿ ಪ್ರಚಾರ ಸಭಾದ ಶಾಖೆಯಾಗಿದೆ. ಸದರಿ ಆಸ್ತಿ ಗುಲ್ಬರ್ಗದಲ್ಲಿರುವ ಹಿಂದಿ ಪ್ರಚಾರ ಸಭಾಕ್ಕೆ 1 ವರ್ಷದ ಮಟ್ಟಿಗೆ ನೀಡಲಾಗುತ್ತದೆ. ಈ ಅವಧಿಯಲ್ಲಿ ಹಿಂದಿ ಭಾಷಾ ಬೆಳವಣಿಗೆಗೆ ಕಾರ್ಯಚಟುವಟಿಕೆಗಳನ್ನು ನಡೆಸಬೇಕೇ ವಿನಹ ಅನ್ಯ ಉದ್ದೇಶಗಳಿಗಾಗಿ ಸದರಿ ಜಾಗ ಬಳಕೆಯಾಗಬಾರದು ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಎಚ್ಚರಿಕೆ: ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸದರಿ ನಿವೇಶನವನ್ನು ಹಿಂದಿ ಪ್ರಚಾರ ಸಭಾ ಹೈದ್ರಾಬಾದ್ ಪ್ರಧಾನ ಕಾರ್ಯದರ್ಶಿ ಪ್ರಭು ಅವರನ್ನು ಹೆಸರಿಸಿದ್ದಾರೆ. ಗುಲ್ಬರ್ಗ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಹಿಂದಿ ಭಾಷೆಯ ಬೆಳವಣಿಗೆ ಸಂಗತಿಗಳೇ ನಡೆಯುವಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಹಿಂದಿ ಪ್ರಚಾರ ಸಭಾ ಗುಲ್ಬರ್ಗದಲ್ಲಿ ಸ್ವಾತಂತ್ರ್ಯ ಯೋಧ ವಿದ್ಯಾಧರ ಗುರೂಜಿ ಅವರ ನೇತೃತ್ವದಲ್ಲಿ ತನ್ನ ಕೆಲಸ ಕಾರ್ಯಗಳನ್ನು ನಡೆಸುತ್ತಿತ್ತು. ಇಲ್ಲಿ ಹಿಂದಿ ಭಾಷೆ ಬೆಳವಣಿಗೆಗಳಿಗಿಂತ ಅನ್ಯ ಕೆಲಸಗಳೇ ನಡೆಯುತ್ತಿವೆ ಎಂದು ಸ್ಥಳೀಯವಾಗಿ ಜಿಲ್ಲಾಡಳಿತಕ್ಕೆ ದೂರುಗಳು ದಾಖಲಾಗಿದ್ದ ಕಾರಣ ಜಿಲ್ಲಾಧಿಕಾರಿಗಳು 2 ವರ್ಷಗಳ ಹಿಂದೆಯೇ ಈ ಕಚೇರಿ ಸಮುಚ್ಛಯವನ್ನು ಮುಟ್ಟುಗೋಲು ಹಾಕಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.