ಶಿಕ್ಷಕರಿಗಾಗಿ ಬೀದಿಗಿಳಿದ ಮಕ್ಕಳು
ಕನ್ನಡಪ್ರಭ ವಾರ್ತೆ ಯಾದಗಿರಿ ಆ.7
ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸುವುದು ಅಪರಾಧ. ಆದರೆ ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ವಿಫಲರಾದಾಗ ಅನಿವಾರ್ಯವಾಗಿ ಪ್ರತಿಭಟನೆ ಮಾಡುವುದು ಸಹಜ. ಅಂತೆಯೇ ಬುಧವಾರ ಶಾಲಾ ಮಕ್ಕಳು ತಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ, ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಯೊಬ್ಬರಿಗೆ ಶಿಕ್ಷಣ ಒದಗಿಸಲು ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದರೂ, ಶಿಕ್ಷಕರಿಲ್ಲದೆ ಮಕ್ಕಳು ಪಾಠ ಕಲಿಯಲು ತೊಂದರೆ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಅನೇಕ ಶಾಲೆಗಳಿಗೆ ಮಕ್ಕಳಿಗೆ ಅನುಪಾತದಲ್ಲಿ ಶಿಕ್ಷಕರಿಲ್ಲ. ಇದರಿಂದ ಒಂದೇ ಕೋಣೆಯಲ್ಲಿ 1 ರಿಂದ 5ನೇ ತರಗತಿ ಮಕ್ಕಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಾರೆ. ಅವರು ಯಾವುದೇ ಕೆಲಸದ ಮೇಲೆ ಹೊರ ಹೋದಲ್ಲಿ ಅಂದು ಶಾಲೆಗೆ ಅನಧಿಕೃತ ರಜೆ ಇದ್ದಂತೆ.
ಮಕ್ಕಳಿಗೆ ತೊಂದರೆ: ತಾಲೂಕಿನ ಕೂಡ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 380 ಮಕ್ಕಳ ಹಾಜರಾತಿ ಇದೆ. ಶಾಲೆಗೆ 13 ಶಿಕ್ಷಕರ ಮಂಜೂರಾತಿ ಇದ್ದರೂ, ಕೇವಲ 6 ಶಿಕ್ಷಕಕರು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಕೆಲವು ವರ್ಗಾವಣೆಯಾಗಿದ್ದರಿಂದ ಇಂಗ್ಲೀಷ್, ವಿಜ್ಞಾನ ಮತ್ತು ಗಣಿತ ಶಿಕ್ಷಕರಿಲ್ಲದೆ ಮಕ್ಕಳು ತೊಂದರೆ ಅನುಭವಿಸುತ್ತ್ತಿದ್ದಾರೆ ಎಂದು ಪಾಲಕರ ಆರೋಪವಾಗಿದೆ.
ಶಾಲೆ ಪ್ರಾರಂಭಗೊಂಡು ಎರಡು ತಿಂಗಳುಗಳಾದರೂ, ಶಿಕ್ಷಕರನ್ನು ಒದಗಿಸದ ಕಾರಣ ಇಂದು ಮಕ್ಕಳು ಶಿಕ್ಷಕರಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಜಹಿರಾ ನಸೀಂ, ಸಂಬಂಧಿತ ಇಲಾಖೆ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಮಕ್ಕಳ ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸಪ್ಪ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ, ಪಾಲಕರಾದ ವೆಂಕಟರಾಮಲು, ಮಲ್ಲಯ್ಯ ಹಜಾರೆ, ನಾಗಪ್ಪ, ಮಹಾದೇವಪ್ಪ, ವೆಂಕಟೇಶ ಕಲಾಲ, ಮಲ್ಲಯ್ಯ ನ್ಯಾಸರ, ಮಲ್ಲೇಶಿ ನಾಗರಬಂಡಿ, ಸಾಬರೆಡ್ಡಿ ಗೋಪಳಿ ಮತ್ತಿತರರು ಪಾಲ್ಗೊಂಡಿದ್ದರು.