ಅನಾಹುತಕ್ಕೆ ಕಾಯುತ್ತಿರುವ ವಿದ್ಯುತ್ ಕಂಬಗಳು
ಕೆಂಭಾವಿ: ಪಟ್ಟಣ ಹಾಗೂ ಸುತ್ತಮುತ್ತಲ ಅನೇಕ ಪ್ರದೇಶದಲ್ಲಿನ ಕೆಲ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಶಿಥಿಲಗೊಂಡು ಅನಾಹುತಗಳಿಗಾಗಿ ಕಾಯುವಂತಿವೆ. ಸುಮಾರು ವರ್ಷಗಳ ಹಿಂದೆ ಹಾಕಿದ ಕಂಬಗಳು ಶಿಥಿಲಾವಸ್ಥೆಗೆ ಬಂದು ಅವು ಭಾರ ತಡೆಯಲಾಗದೆ ಬಾಗಿಬಿಟ್ಟಿವೆ. ಕೆಲವೆಡೆಯಂತೂ ತುಂಡಾದ ವಿದ್ಯುತ್ ತಂತಿಗಳನ್ನು ಜೋಡಿಸಿ ಹಾಕಿರುವುದರಿಂದ ಮಳೆ ಗಾಳಿಗೆ ಎಲ್ಲೆಂದರಲ್ಲಿ ಹರಿದು ಬೀಳುತ್ತಲೇ ಇವೆ.
ತಂತಿ ಹರಿದು ನೆಲಕ್ಕೆ: ಅನೇಕ ಬಾರಿ ಇಂತಹ ದುರ್ಘಟನೆಗಳು ನಡೆದಿವೆ ಹಾಗೂ ನಡೆಯುತ್ತಿವೆ. ಮೊನ್ನೆ ರಾತ್ರಿ 9ಕ್ಕೆ ಮಳೆ ಬೀಳುತ್ತಿರುವಾಗ ಮಳೆ ಹಾಗೂ ಅಲ್ಪ ಸ್ವಲ್ಪ ಬೀಸಿದ ಗಾಳಿಗೇ ವಿದ್ಯುತ್ ಇರುವಾಗಲೇ ಜೋಡಿಸಿದ ತಂತಿ ಹರಿದು ನೆಲಕ್ಕೆ ಬಿತ್ತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಲಿಲ್ಲ. ಅಷ್ಟರಲ್ಲಿಯೇ ಆಕಸ್ಮಾತಾಗಿ ಹೊರಗೆ ಬಂದ ಒಬ್ಬಿಬ್ಬರು ಕೂಡಲೇ ಆಕಡೆ ಈಕಡೆ ನಿಂತು ಯಾರನ್ನು, ಯಾವುದೇ ವಾಹನವನ್ನೂ ಬಿಡದೇ ಆಗುವ ಅಪಾಯವನ್ನು ತಪ್ಪಿಸಿದರು.
ಭಯಭೀತರಾದ ಜನ: ಶತ ಪ್ರಯತ್ನ ಮಾಡಿ ಸ್ಥಳೀಯ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸಿದಾಗ ಕೂಡಲೇ ಬಂದು ಅದನ್ನು ಸರಿಪಡಿಸಿದರಾದರೂ ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಆಗುತ್ತಿಲ್ಲ. ಇದೇ ರೀತಿ ಕನ್ಯಾ ಸರ್ಕಾರಿ ಪ್ರೌಢಶಾಲೆಯ ಕಂಪೌಂಡಿಗೆ ಅಂಟಿಕೊಂಡಿರುವ ವಿದ್ಯುತ್ ಕಂಬವೂ ಹಾಡ ಹಗಲಲ್ಲೇ ಮುರಿದು ಬಿತ್ತು. ಇನ್ನು ಐದು ನಿಮಿಷ ತಡವಾಗಿ ಬಿದ್ದಿದ್ದರೆ ನಾಲ್ಕುವರೆಗೆ ಶಾಲೆ ಬಿಟ್ಟು ಮಕ್ಕಳೆಲ್ಲಾ ಹೊರಗೆ ಬರುವ ಸಮಯ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುವುದರಿಂದ ಜನ ಭಯಭೀತರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಂಪರ್ಕಿಸಬೇಕೆಂದರೆ ಅವರು ಫೋನ್ ತೆಗೆಯುವುದಿಲ್ಲ.
ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಇದರ ಬಗ್ಗೆ ತಾತ್ಸಾರ ಮಾಡುತ್ತಿರುವುದು ಶೋಚನೀಯ. ಇದರ ಬಗ್ಗೆ ಆಯಾ ವಾರ್ಡ್ನ ಪಂಚಾಯ್ತಿ ಸದಸ್ಯರೂ ಗಮನಕ್ಕೂ ಬಾರದೆ ಜನ ಬೇಸತ್ತಿದ್ದಾರೆ. ಮಳೆಗಾಲದಂಥ ಪರಿಸ್ಥಿತಿಯಲ್ಲಿ ಇಲಾಖೆಯವರು ಇಂತಹ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಎಲ್ಲೆಂದರಲ್ಲಿ ಅವಘಡಗಳು ಸಂಭವಿಸಬಹುದು. ಆದ್ದರಿಂದ ಶಿಥಿಲಗೊಂಡ ಕಂಬ ಹಾಗೂ ತುಂಡಾದ ವಿದ್ಯುತ್ ತಂತಿಗಳನ್ನು ತೆಗೆದು ಹೊಸ ಕಂಬ ಹಾಗೂ ತಂತಿಗಳನ್ನು ಹಾಕಬೇಕೆಂಬುದು ನಾಗರಿಕರ ಆಗ್ರಹ.