ಎತ್ತಿನ ಜೀವ ರಕ್ಷಿಸಿದ ಗ್ರಾಮಸ್ಥರು
ಕನ್ನಡಪ್ರಭ ವಾರ್ತ್ಣೆ ಆಳಂದ , ಆ.9
ತಾಲೂಕಿನ ಧಂಗಾಪುರ ಗ್ರಾಮದ ತೋಟದ ತೆರೆದ ಬಾವಿಯಲ್ಲಿ ಎತ್ತು ಕಾಲುಜಾರಿ ಬಿದ್ದು ಸುಮಾರು 7 ಗಂಟೆಗಳ ಕಾಲ ನೀರಲ್ಲಿ ಒದ್ದಾಡಿದ ಘಟನೆ ನಡೆದಿದೆ.
ಗ್ರಾಮದ ಶಿವಲಿಂಗ ತೇಲ್ಕೂರ್ ಅವರ ಸುಮಾರು 90 ಸಾವಿರ ಬೆಲೆಯ ಎತ್ತುಗಳನ್ನು ತೋಟದಲ್ಲಿ ಮೇಯಲು ಬಿಟ್ಟಾಗ ಸಂಜೆ 5.30ರ ಸುಮಾರಿಗೆ ಒಂದು ಎತ್ತು 50 ಅಡಿ ಆಳದ ಬಾವಿಯ ಹತ್ತಿರ ಹೋಗಿ ಹುಲ್ಲು ತಿನ್ನುತ್ತಾ ಕಾಲು ಜಾರಿ ಬಾವಿಯೊಳಗೆ ಬಿದ್ದಿದೆ.
ಹತ್ತಿರದ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಬಾವಿ ಹತ್ತಿರ ಬಂದು ನೋಡಿದಾಗ ಬಾವಿಯ ನೀರಿನಲ್ಲಿ ಎತ್ತು ಈಜಾಡುತ್ತಿತ್ತು. ತಕ್ಷಣ ಗುರುಸಿದ್ದಪ್ಪ ಬಾವಿಯೊಳಗೆ ಇಳಿದು ಹಗ್ಗದ ಸಹಾಯದಿಂದ ಎತ್ತುನ್ನು ಗೋಡೆ ಹತ್ತಿರ ಎಳೆದುಕೊಂಡು ತಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಬಂದು ಎತ್ತು ಮೇಲಕ್ಕೆತ್ತಲು ನಡೆಸಿದ ಪ್ರಯತ್ನ ವಿಫಲವಾಗಿ ಕೊನೆಗೆ ಕ್ರೇನ್ ಮೂಲಕ ಎತ್ತನ್ನು ರಾತ್ರಿ 1 ಗಂಟೆ ಸುಮಾರಿಗೆ ಮೇಲೆ ತರಲಾಯಿತು.
ನೀರಿನಲ್ಲಿ ಸುಮಾರು 8 ಗಂಟೆ ಕಾಲ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಎತ್ತಿಗೆ ಸೌಧೆ ಹಾಕಿ ಬೆಂಕಿ ಕಾವು ಕೊಡಲಾಯಿತು. ಸದ್ಯ ಸುರಕ್ಷಿತವಾಗಿದೆ. ಎತ್ತಿನ ರಕ್ಷಣೆಗೆ ಗ್ರಾಮದ ದೇವಿಂದ್ರ, ದತ್ತಪ್ಪ, ಜಯಾನಂದ, ಶರಣಬಸಪ್ಪ, ಬಾಬು, ಅಮೃತ, ಅಶೋಕ, ಬಸವ, ಭೀಮ, ಮರೆಪ್ಪ, ಗೌತಮ ಸೇರಿದಂತೆ ಗ್ರಾಮಸ್ಥರು ಸುರಿಯುವ ಮಳೆಯನ್ನು ಲೆಕ್ಕಿಸದೇ ಶ್ರಮಿಸಿ ಯಶಸ್ವಿಯಾಗಿದ್ದಾರೆ.