ತೊಗರಿ ಕಣಜದಿಂದ ತುಂಗಾತೀರದೆಡೆಗೆ ಧಾನ್ಯರಥ
ಕನ್ನಡಪ್ರಭ ವಾರ್ತ್ಣೆ ಗುಲ್ಬರ್ಗ್ಣ ಆ.8
ಇಲ್ಲಿನ ಬಿದ್ದಾಪುರ ಬಡಾವಣೆಯ ಗೋವಿಂದ ನಗರದಲ್ಲಿರುವ ರಾಯರ ಮಠದಲ್ಲಿ ಭಕ್ತರಿಂದ ಸಂಗ್ರಹಿಸಲಾಗಿರುವ ದೇಣಿಗೆ ರೂಪದ 15ಕ್ಕೂ ಹೆಚ್ಚು ಕ್ವಿಂಟಲ್ ತೊಗರಿ ಬೇಳೆಯನ್ನು ತುಂಗಾ ತೀರದಲ್ಲಿರುವ ರಾಯಚೂರು ಜಿಲ್ಲೆಯ ಗುರುರಾಯರ ನೆಲೆವೀಡು ಮಂತ್ರಾಲಯಕ್ಕೆ ಗುರುವಾರ ಧಾನ್ಯ ರಥದ ರೂಪದಲ್ಲಿ ರವಾನಿಸಲಾಯ್ತು.
ಬಿದ್ದಾಪುರ ಮಠದಲ್ಲಿ ಧಾನ್ಯರಥ ರವಾನೆಗೆಂದು ಕಳೆದ 15 ದಿನಗಳಿಂದ ಭಕ್ತರನ್ನು ಸಂಪರ್ಕಿಸುವ ಕೆಲಸ ಮಾಡಲಾಗಿತ್ತು. ಇಲ್ಲಿನ ಮಠದ ವಿಚಾರಣಾಕರ್ತರು, ಹಿರಿಯ ವಕೀಲ ನವಲಿ ಕೃಷ್ಣಾಚಾರ್ಯ ಅವರ ನೇತೃತ್ವದಲ್ಲಿ ನಡೆದ ತೊಗರಿ ಸಂಗ್ರಹದಲ್ಲಿ ಸ್ಥಳೀಯವಾಗಿ ಭಕ್ತರು, ದಾನಿಗಳು ಉದಾರ ಸ್ಪಂದನೆ ಮಾಡಿದ್ದಾರೆ. ಇದರಿಂದಲೇ 15ಕ್ಕೂ ಅಧಿಕ ಕ್ವಿಂ. ತೊಗರಿಯನ್ನು ಮಂತ್ರಾಲಯಕ್ಕೆ ಸಾಗಿಸಲು ಅನುಕೂಲವಾಯಿತು ಎಂದು ನವಲಿ ಕೃಷ್ಣಾಚಾರ್ಯ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
20ರಿಂದ ಆರಾಧನಾ ಮಹೋತ್ಸವ: ಮಂತ್ರಾಲಯದಲ್ಲಿ ಆ. 20ರಿಂದ 24ರ ವರೆಗೂ ಗುರುರಾಯರ ಆರಾಧನಾ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಜಗತ್ತಿನ ವಿವಿಧೆಡೆಯಿಂದ ಬಂದು ಹೋಗುವ ಭಕ್ತರಿಗೆ ಲೆಕ್ಕವೇ ಇರದು. ಇಂತಹ ಸಂದರ್ಭದಲ್ಲಿ ತೊಗರಿ ಕಣಜ ಗುಲ್ಬರ್ಗದಿಂದ 15 ಕ್ವಿಂಟಲ್ ತೊಗರಿ ಬೇಳೆಯ ಅಲ್ಪ ಕಾಣಿಕೆ ಭಕ್ತರ ಪ್ರೋತ್ಸಾಹದಿಂದ ರವಾನಿಸಲು ಸಾಧ್ಯವಾಗಿದೆ. ಗುರುರಾಯರು ಈ ಧಾನ್ಯರಥಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ಪಂದಿಸಿರುವ ಎಲ್ಲ ಆಸ್ತಿಕ ಜನತೆಗೆ ಆಶೀರ್ವಾದ ಮಾಡಲಿದ್ದಾರೆ ಎಂದು ನವಲಿ ಆಚಾರ್ಯರು ಅಭಿಪ್ರಾಯಪಟ್ಟಿದ್ದಾರೆ.
ಧಾನ್ಯ ರಥಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಬಿದ್ದಾಪುರ ರಾಯರ ಮಠದ ವ್ಯವಸ್ಥಾಪಕ ಗುರುರಾಜರಾವ್, ವಿಪ್ರ ಸಂಘಟನೆಯ ಪ್ರಮುಖರಾದ ರಾಘವೇಂದ್ರರಾವ ಕೋರಳ್ಳಿ, ಪಾಂಡುರಂಗರಾವ ಕಂಪ್ಲಿ, ಬಿಆರ್ ಪಾಟೀಲ್, ಶ್ಯಾಮಸುಂದರರಾವ ತವಗ, ಅಷ್ಟಗಿ, ಶಾಮಾಚಾರ್ಯ ಹಾಗೂ ಬಡಾವಣೆಯ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
342ನೇ ವರ್ಷದ ಆರಾಧನೆಗೆ ಭರದ ಸಿದ್ಧತೆ: ಬಿದ್ದಾಪುರ ರಾಯರ ಮಠದಲ್ಲಿ ಆ.20ರಿಂದ ಆರಂಭವಾಗುವ ರಾಯರ ಆರಾಧನೆಗೆ ಭರದ ಸಿದ್ಧತೆಗಳು ಸಾಗಿವೆ. ಇದು 342ನೇ ವರ್ಷದ ಆರಾಧನಾ ಮಹೋತ್ಸವ. ಮಠಕ್ಕೆ ಸುಣ್ಣ- ಬಣ್ಣ ಬಳಿಯುವ ಕೆಲಸ ಸಾಗಿದೆ. ರಾಯರ ಆರಾಧನೆಯನ್ನು ಪಂಚ ರಾತ್ರೋತ್ಸವವೆಂದು ವೈಭವದಿಂದ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿಯ ಆರಾಧನೆಯಲ್ಲಿ ಮಧ್ಯಾರಾಧನೆ(ಆ.22 ಗುರುವಾರ) ದಿನ ಬಿದ್ದಾಪುರ ಮಾರುತಿ ಮಂದಿರದಿಂದ ಭಕ್ತರೆಲ್ಲರೂ ರಾಯರ ಉತ್ಸವ ಪ್ರತಿಮೆಯನ್ನು ರಥದಲ್ಲಿ ಕುಳ್ಳಿರಿಸಿ ಭವ್ಯ ಶೋಭಾಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಬಿದ್ದಾಪುರ ಮಠದಲ್ಲಿನ ಈ ಬಾರಿಯ ರಾಯರ ಆರಾಧನೆಯ ಆಕರ್ಷಣೆಯಾಗಲಿದೆ ಎಂದು ವಿಚಾರಣಕರ್ತ ನವಲಿ ಕೃಷ್ಣಾಚಾರ್ಯ ತಿಳಿಸಿದ್ದಾರೆ.
ರಾಯರ ಪಂಚರಾತ್ರೋತ್ಸವ ವೈಭವ: ಗುರುರಾಯರ ಪಂಚರಾತ್ರೋತ್ಸವ ಆ.20ರಿಂದ 24ರ ವರೆಗೆ ಈ 5 ದಿನಗಳಲ್ಲಿ ನಡೆಯುವ ಪೂಜೆ- ಪುನಸ್ಕಾರಗಳು, ಉಪನ್ಯಾಸ, ಪ್ರಾರ್ಥನೆಗಳು, ಕಲೆ- ಸಂಸ್ಕೃತಿಯ ಸಮಾರಂಭಗಳ ಮಾಹಿತಿ ಇಲ್ಲಿದೆ.
ಆ.20ರಂದು ಬೆಳಗ್ಗೆ ವೇದಘೋಷ, ನೂತನ ಉಪಾಕರ್ಮ, ಸತ್ಯನಾರಾಯಣಪೂಜೆ ಹಾಗೂ ಸಂಜೆ 6 ಗಂಟೆಗೆ ಗೋಪೂಜೆ, ಧ್ವಜಾರೋಹಣ, ಪ್ರಾರ್ಥನೋತ್ಸವ, ಶಾಖೋತ್ಸವ, ಧನ- ಧಾನ್ಯಪೂಜೆ ಹಾಗೂ ಪ್ರಾರ್ಥನೆ. ಆ.21ರಿಂದ 4 ದಿನಗಳ ಆರಾಧನೆಯಲ್ಲಿ ನಿತ್ಯ ಅಷ್ಟೋತ್ತರ, ಹಸ್ತೋದಕ, ಭಕ್ತಿಗೀತೆಗಳು, ಭಜನೆ, ಬಡಾವಣೆಯ ಜನರೇ ಸಂಘಟಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪಂಡಿತರಿಂದ ಉಪನ್ಯಾಸಗಳು ನಡೆಯಲಿವೆ. 24ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಡೆಯಲಿದೆ.
ಆರಾಧನೆಯ ಪಂಚರಾತ್ರೋತ್ಸವದ ಪ್ರತಿದಿನ ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವರ್ಣಸಿಂಧು ನೃತ್ಯಕಲಾವಿದರ ತಂಡ (ಆ.21), ಸಂತೋಷ ಗದ್ದನಕೆರಿ ಬಾಗಲಕೋಟೆ ಕಲಾವಿದರ ತಂಡ (ಆ.22), ಸ್ನೇಹ ಕೇರೂರ್ ಬೆಂಗಳೂರು (ಆ.23) ವಿಶೇಷ ಕಲೆ- ಸಂಸ್ಕೃತಿ ಸಾರುವ ಪ್ರದರ್ಶನ ಬಿದ್ದಾಪುರ ರಾಯರ ಮಠದ ಅಂಗಳದಲ್ಲಿ ನೆರವೇರಿಸಲಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ರಾಯರ ಪಂಚರಾತ್ರೋತ್ಸವದಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ವಿಚಾರಣಕರ್ತ ನವಲಿ ಕೃಷ್ಣಾಚಾರ್ಯರು, ವ್ಯವಸ್ಥಾಪಕ ಗುರುರಾಜರಾವ ಮನವಿ ಮಾಡಿದ್ದಾರೆ.