ಪಕ್ಷದ ಆದೇಶಕ್ಕೆ ಬದ್ಧ: ಬೆಳಮಗಿ
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಆ.9
ಗುಲ್ಬರ್ಗ ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ತಮಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಹೈಕಮಾಂಡ್ ಘೋಷಿಸಿದರೆ ಪಕ್ಷದ ಆದೇಶಕ್ಕೆ ಬದ್ಧನಾಗಿರುವುದಾಗಿ ಬಿಜೆಪಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಇಂಗಿತ ವ್ಯಕ್ತಪಡಿಸಿದರು.
ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ ಅಧಿಕಾರ ಪದಗ್ರಹಣ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಜೀವನದಲ್ಲಿ ಏರುಪೇರುಗಳಾವುದು ಸಹಜ. ಅವುಗಳಿಗೆ ಹೆದರದೆ ಮುಂದೆ ಸಾಗಬೇಕು. ಅಧಿಕಾರ ಕುರ್ಚಿ ಎಂದಿಗೂ ಶಾಶ್ವತವಲ್ಲ, ಇಂದಿನ ರಾಜಕೀಯ ಮತ್ತು ಚುನಾವಣೆ ಹೇಸಿಗೆ ಬರುತ್ತಿದೆ. ರಾಜಕಾರಣಿಗಳಲ್ಲಿ ಪ್ರಾಮಾಣಿಕತೆ ಮರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬೆಳಮಗಿ ಆಕ್ರೋಶ: ಹೈ-ಕ ಹಿಂದುಳಿದ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂವಿಧಾನ 371 (ಜೆ) ಜಾರಿಗೆ ತರುವಲ್ಲಿ ಬಿಜೆಪಿಯೂ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಮತ್ತು ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾರಂಭಿಸಲು ಬಿ.ಎಸ್. ಯಡಿಯೂರಪ್ಪನವರು ಗುಲ್ಬರ್ಗದಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ಮಂಜೂರಿಗೊಳಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದವರು ಎಲ್ಲವೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಧರ್ಮಸಿಂಗ್ ಅವರ ಪ್ರಯತ್ನದಿಂದಾಗಿ ಜಾರಿಯಾಗಿವೆಯೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬೆಳಮಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕರ್ತರಿಗೆ ಕರೆ: ದೇಶದಲ್ಲಿ ಯುಪಿಎ ಸರ್ಕಾರದಲ್ಲಿ ಅನೇಕ ಹಗರಣ ನಡೆದಿವೆ. ದೇಶದ ಅಭಿವೃದ್ಧಿಯಾಗಬೇಕಾದರೆ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆವರೆಗೆ ಬಿಜೆಪಿಯನ್ನು ಬಲಿಷ್ಠಗೊಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕು ಬಿಜೆಪಿ ಹಿರಿಯ ಮುಖಂಡ ರಮೇಶ ಯಾಕಾಪುರ ಮಾತನಾಡಿ, ತಾಲೂಕಿನಲ್ಲಿ ಅನೇಕ ಶಿಕ್ಷಕರ ಮತ್ತು ವೈದ್ಯರ ಕೊರತೆ ಹೆಚ್ಚಾಗಿದೆ. ಇನ್ನು ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕೆ ಮಾಡದೇ 6 ತಿಂಗಳ ಅವಕಾಶ ನೀಡಿ ಜನರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ ಮಾತನಾಡಿದರು. ಪ್ರಶಾಂತ ಕೊಡದೂರ್, ಮಲ್ಲಿಕಾರ್ಜುನ ರುದನೂರ, ಮೋತಿರಾಮ ನಾಯಕ, ಮುಕುಂದ ದೇಶಪಾಂಡೆ, ಅತೀಶ ಪವಾರ, ಶರಣು ಹುಲಿ, ಶರಣು ಕುಂಬಾರ, ಭೀಮಶೇನರಾವ ಮೋಘಾ, ಪ್ರಭಾಕರ ಕುಲಕರ್ಣಿ, ಮಹೇಶ ಬೆಮಳಗಿ, ಶಶಿಕಲಾ ತೆಂಗಳಿ ಮುಂತಾದವರು ಉಪಸ್ಥಿತರಿದ್ದರು.
ಮಧುಸೂಧನ ಕಾಟಾಪುರ ಸ್ವಾಗತಿಸಿದರು. ಶ್ರೀಧರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ರೇವಣಸಿದ್ದಪ್ಪ ಮಜ್ಜಗಿ ವಂದಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಶಾಮಸುಂದರ ಪವಾರ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ ಪಾಟೀಲ್ ಅವರನ್ನು ಇದೇ ಸಂದರ್ಭದಲ್ಲಿ ಬಿಜೆಪಿ ಅನೇಕ ಕಾರ್ಯಕರ್ತರು ಹೂಮಾಲೆ ಹಾಕಿ ಅಭಿನಂದಿಸಿದರು.