'ಪಠ್ಯದೊಂದಿಗೆ ಮಕ್ಕಳಿಗೆ ಸಂಸ್ಕೃತಿ ಪರಿಚಯಿಸಿ'
ಕನ್ನಡಪ್ರಭ ವಾರ್ತೆ , ಚಿತ್ತಾಪುರ , ಆ.9
ಶಿಕ್ಷಕರು ಪಠ್ಯದೊಂದಿಗೆ ಮಕ್ಕಳಿಗೆ ಸಾಹಿತ್ಯ ಸಂಸ್ಕೃತಿಯ ಪರಿಚಯ ಮಾಡಿಕೊಡಬೇಕೆಂದು ಎನ್.ವಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸ್ವಾಮಿರಾವ ಕುಲಕರ್ಣಿ ಹೇಳಿದರು.
ತಾಲೂಕಿನ ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಒಲಿದಂತೆ ಹಾಡುವೆ ಎಂಬ ಮಕ್ಕಳ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಮಾಡಲಾಗುತ್ತದೆ. ಶರಣರು ವಚನಗಳನ್ನು ಬರೆದು ಸಮಾಜದ ಪರಿವರ್ತನೆ ಶ್ರಮಿಸಿ ವಚನ ಸಾಹಿತ್ಯ ಶ್ರೀಮಂತಗೋಳಿಸಿದ್ದಾರೆ ಎಂದರು.
ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸಿ: ಮಕ್ಕಳು ಸಹ ವಚನ ಸಾಹಿತ್ಯ ಓದಿ ಅದರಲ್ಲಿರುವ ಮಾನವೀಯ ಮೌಲ್ಯಗಳು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿದ ಪ್ರತಿಭೆ ಗುರುತಿಸಿ ಅವರಲ್ಲಿ ಸೃಜನಶೀಲತೆಯನ್ನು ಬೆಳಸಿ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಿ ವ್ಯಕ್ತಿತ್ವ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಇಂದು ಹಳ್ಳಿಯ ಜಾನಪದ ಹಾಡುಗಳು ಮಾಯವಾಗಿವೆ. ಕುಟ್ಟುವ, ಬೀಸುವ, ಹಂತಿ, ಮೊಹರಂ ಇನ್ನಿತರ ಹಾಡುಗಳು ಗ್ರಾಮೀಣ ಜನರಿಂದ ದೂರವಾಗುತ್ತಿವೆ. ಅಂತಹ ದೇಶಿಯ ಸಂಸ್ಕೃತಿಯ ಪರಂಪರೆ ಬಿಂಬಿಸುವ ಹಾಡುಗಳು ಮಕ್ಕಳಿಗೆ ಶಿಕ್ಷಕರು ಕಲಿಸಿ ದೇಶಿಯ ಸಂಸ್ಕೃತಿ ಉಳಿಸಿ ಬೆಳಸಬೇಕೆಂದು ಹೇಳಿದರು.
ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕವನ ವಾಚನ: ಸಮಾರಂಭದಲ್ಲಿ ಸುಮಾರು 35ಕ್ಕೂ ಅಧಿಕ ಮಕ್ಕಳು ಹಾಗೂ ಶಿಕ್ಷಕರು ಕವಿತೆ ವಾಚನ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಮರಪ್ಪ ಜ್ಯೋತಿ, ಸಂಸ್ಥೆಯ ಆಡಳಿತಾಧಿಕಾರಿ ಡಾ. ಗುಂಡಣ್ಣ ಬಾಳಿ, ಕಾಂತಪ್ಪ ಬಡಿಗೇರ್, ವಿದ್ಯಾದರ ಖಂಡಾಳ, ಚೆನ್ನಬಸಪ್ಪ ಬಂಡೆನರ್, ಭೀಮಾಶಂಕರ, ರಾಜಶೇಖರ ಯಾಳಗಿ, ಪ್ರಶಾಂತ ಉಪಸ್ಥಿತರಿದ್ದರು. ಸಿದ್ದಲಿಂಗ ಬಾಳಿ ಸ್ವಾಗತಿಸಿದರು. ರಾಗಿಣಿ ಪ್ರಾರ್ಥನೆ ಗೀತೆ ಹಾಡಿದರು. ಶರಣು ಜ್ಯೋತಿ ವಂದಿಸಿದರು.