ಯೋಜನೆಗಳ ಬಳಕೆಗೆ ಆಧಾರ್ ಕಾರ್ಡ್ ಅವಶ್ಯ
ಕನ್ನಡಪ್ರಭ ವಾರ್ತೆ , ಚಿಂಚೋಳಿ , ಆ.9
ಇಲ್ಲಿನ ತಾಪಂ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ 2ನೇ ಹಂತದ ವಿಶಿಷ್ಟ ಗುರುತಿನ ಚೀಟಿ ಆಧಾರ ಕಾರ್ಡ್ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಶಾಸಕ ಡಾ. ಉಮೇಶ ಜಾಧವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಯುಪಿಎ ಸರ್ಕಾರ ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಜನರಿಗೆ ಮಾಹಿತಿ ಇಲ್ಲದ ಕಾರಣ ಯೋಜನೆಗಳು ವಿಫಲವಾಗುತ್ತಿವೆ ಎಂದರು.
ರಾಜ್ಯ ಮತ್ತು ಕೇಂದ್ರ ಅನೇಕ ಮಹತ್ವದ ಯೋಜನೆಗಳು ಜಾರಿಗೆ ತರುತ್ತಿದೆ. ಎಲ್ಲಾ ಯೋಜನೆಗಳ ಲಾಭ ಪಡೆದುಕೊಳ್ಳಲು ಆಧಾರ ಕಾರ್ಡ್ ತುಂಬಾ ಅವಶ್ಯಕವಾದುದು. ಇದರ ಬಗ್ಗೆ ಜನರಿಗೆ ಮಾಹಿತಿ ಅಧಿಕಾರಿಗಳು ನೀಡಬೇಕಾಗಿದೆ ಎಂದರು.
ಎಚ್ಚರಿಕೆ: ಆಧಾರ್ ಕಾರ್ಡ್ ಮಹತ್ವದಾಗಿದೆ. ಗ್ರಾಪಂ ಮಟ್ಟದಲ್ಲಿ ಪಿಡಿಒ ಮತ್ತು ಶಿಕ್ಷಕರು ಜನರಿಗೆ ತಿಳಿಸಬೇಕಾಗಿದ್ದು ಎಲ್ಲರ ಜವಾಬ್ದಾರಿಯಾಗಿದೆ. ಇದರ ಬಗ್ಗೆ ನಿರ್ಲಕ್ಷ್ಯತನ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಿದ್ಧತೆ: ಗ್ರೇಡ್-1 ತಹಸಿಲ್ದಾರ್ ಜಗನ್ನಾಥರೆಡ್ಡಿ, ಧರ್ಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ಪ್ರತಿ ಹೋಬಳಿಯಲ್ಲಿ 5 ಆಧಾರ್ ಕಾರ್ಡ್ ಕೇಂದ್ರಗಳನ್ನು ಪ್ರಾರಂಭಿಸಲು ಎಲ್ಲ ಯಂತ್ರಗಳು ಬಂದಿವೆ. ಇಲ್ಲಿ ಕಾರ್ಯ ನಿರ್ವಹಿಸಿದ ನಂತರ ಗ್ರಾಪಂಗಳಲ್ಲಿ ನಡೆಸಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ತಹಸೀಲ್ದಾರ್ ಮೋಹನ ಜೋಶಿ, ನಿವೃತ್ತ ವೈದ್ಯಾಧಿಕಾರಿ ಡಾ. ಪಾಂಡುರಂಗ ಪೂಜಾರಿ, ಜಗದೇವ ಬೈಗೊಂಡ, ಅರ್ಜುನ ದೊಡ್ಡಮನಿ, ಅನೀಲಕುಮಾರ್ ಜಮಾದಾರ, ಕೆ.ಎಂ.ಬಾರಿ, ಶಿವಕುಮಾರ್ ಕೊಳ್ಳೂರ್, ಅಬ್ದುಲ್ ಬಾಸಿತ್, ಶಿವನಾಗಯ್ಯ ಸ್ವಾಮಿ, ಜಗದೀಶಸಿಂಗ ಠಾಕೂರ, ರಾಮಶೆಟ್ಟಿ ಪವಾರ ಇತರರು ಇದ್ದರು.
ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಯಪ್ಪ ಚಾಪಲ್ ಸ್ವಾಗತಿಸಿದರು. ರೇವಣಸಿದ್ದಯ್ಯ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಮಿರಿಯಾಣ ವಂದಿಸಿದರು.