'ಸ್ವ ಉದ್ಯೋಗದಿಂದ ಆರ್ಥಿಕ ಅಭಿವೃದ್ಧಿ'
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.9
ಗ್ರಾಮೀಣ ಭಾಗದ ಸ್ತ್ರೀ ಶಕ್ತಿ ಸಂಘಗಳು ತರಬೇತಿ ಪಡೆದು ಸ್ವ ಉದ್ಯೋಗ ಮುಂದುವರೆಸಿದರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದು ರಮೇಶ ತಿಪ್ಪನೂರು ಹೇಳಿದರು.
ಜಿಲ್ಲಾ ಸಮಗ್ರ ಜಲಾನಯನ ನಿರ್ವಹಣಾ ಯೋಜನೆ ಇಲಾಖೆ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆಯ ಸಹಯೋಗದಲ್ಲಿ ಅಫಜಲ್ಪುರ ತಾಲೂಕಿನ ರಾಮನಗರ ಹಾಗೂ ಚಿಂಚೋಳಿ ತಾಲೂಕಿನ ಬುಂಯ್ಯಾರ ಗ್ರಾಮದ ಮಹಿಳಾ ಸ್ವ ಸಹಾಯ ಸಂಘಗಳ 10 ದಿನದ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವ ಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಎಲ್ಲ ಸದಸ್ಯರು ಸೇರಿ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕು. ಇದರಿಂದ ಎಲ್ಲ ಸದಸ್ಯರಿಗೆ ಉದ್ಯೋಗ ಸಿಗುತ್ತದೆ. ಜೊತೆಗೆ ಸ್ವಾವಲಂಬನೆ ಬದುಕು ಅವಶ್ಯವಿರುತ್ತದೆ ಎಂದು ಹೇಳಿದರು.
ಸೋಮಶೇಖರ, ಸಂಪನ್ಮೂಲ ವ್ಯಕ್ತಿಗಳಾಗಿ ತಾರಾಬಾಯಿ ಶಹಾಬಾದಿ, ಶಿವಲೀಲಾ, ಸುರೇಖಾ ಪತ್ತಾರ, ಸೈವರಬೇಗಂ ಹಾಗೂ ವಿಶ್ವ ಸೇವಾ ಮಿಷನ್ ಸಿಬ್ಬಂದಿ ಇದ್ದರು. ಮರೆಪ್ಪ ನಂದಿಹಳ್ಳಿ ಸ್ವಾಗತಿಸಿದರು.