ಹಕ್ಕುಗಳನ್ನರಿತು ಗೌರವದಿಂದ ಬದುಕಿ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.9
ವ್ಯಕ್ತಿ ಸಮಾಜದಲ್ಲಿ ಗೌರವಯುತ ಜೀವನ ಸಾಗಿಸುವಂತಾಗಲು ಸಂವಿಧಾನಬದ್ಧ ಹಕ್ಕುಗಳು, ಅಧಿಕಾರಗಳನ್ನು ತಿಳಿದುಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಯಾದಗಿರಿ ನಗರಸಭೆ ಸಮುದಾಯ ಅಭಿವೃದ್ಧಿ ಅಧಿಕಾರಿ ಡಾ. ನಾಗರತ್ನ ದೇಶಮಾನೆ ಅಭಿಪ್ರಾಯಪಟ್ಟರು.
ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ಬುದ್ಧ- ಬಸವ- ಅಂಬೇಡ್ಕರ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿ ಆಶ್ರಯದಲ್ಲಿ ಜರುಗಿದ ಅಸ್ಪೃಶ್ಯತೆ ನಿವಾರಣೆ ವಿಚಾರ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಸ್ಪೃಶ್ಯತೆ ಆಚರಣೆ ಅಪರಾಧ: ಸಮಾಜದಲ್ಲಿ ಬದಲಾವಣೆ ತರಲು ಸಂವಿಧಾದ ಬಗ್ಗೆ ಅರಿವು, ಕಾನೂನು ತಿಳಿವಳಿಕೆಗಳಿಂದ ಮಾತ್ರ ಸಾಧ್ಯ ಎಂದ ಅವರು, ಈಗಾಗಲೇ ನಾಗರಿಕ ಹಕ್ಕುಗಳ ಸಂರಕ್ಷಣಾ ಅಧಿನಿಯಮ(1955) ಕಾನೂನು ಜಾರಿಯಲ್ಲಿದೆ. ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನಿನಡಿ ಶಿಕ್ಷಿಸಲಾಗುತ್ತಿದೆ ಎಂದರು.
ವೀರಭದ್ರಪ್ಪ ಯಡ್ಡಳ್ಳಿ ಮಾತನಾಡಿ, ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣವಿದ್ದು, ಎಲ್ಲರೂ ಸಹೋದರತ್ವ ಭಾವನೆಯಿಂದ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸರ್ವರಿಗೂ ಸಮಪಾಲು, ಸಮಬಾಳು: ಸಂಸ್ಥೆಯ ಅಧ್ಯಕ್ಷೆ ಭಾರತಿ ಕುರಕುಂದಾ ಮಾತನಾಡಿ, ದೇಶ ಕಂಡ ಮೂರು ಜನ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಸಂಸ್ಥೆ ಹುಟ್ಟು ಹಾಕಿದ್ದು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯೋದ್ದೇಶಗಳನ್ನು ಈಡೇರಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ವಿದ್ಯೆಯಿಂದ ಮಾತ್ರ ಮೌಢ್ಯ ದೂರವಾಗಿ ಅಸ್ಪೃಶ್ಯತೆಯಂತಹ ಹೀನ ಪದ್ಧತಿಗಳು ದೂರವಾಗಲು ಸಾಧ್ಯ. ಸಮಾಜದಲ್ಲಿ ಮೇಲು- ಕೀಳು ಸೃಷ್ಟಿಸುವವನೇ ಕೀಳು ಜಾತಿ ಮನುಷ್ಯನಾಗುತ್ತಾನೆ ಎಂದ ಅವರು, ಬಸವಣ್ಣನವರ ಕೊಲುವನೇ ಮಾದಿಗ, ಹೊಲಸು ತಿಂಬುವವನೇ ಹೊಲೆಯ.. ಎಂದು ಹೇಳಿರುವುದನ್ನು ಸೂಚ್ಯವಾಗಿ ತಿಳಿಸಿದರು.
ಸಭೆಯಲ್ಲಿ ನ್ಯೂ ಕನ್ನಡ ಪಪೂ ಕಾಲೇಜಿನ ಪ್ರಾಚಾರ್ಯ ರಘುನಾಥರೆಡ್ಡಿ, ಚಂದ್ರಕಾಂತ ಸಜ್ಜನ್, ಸುಭಾಷ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಭೀಮರಾಯ, ಚಂದ್ರಡ್ಡಿ ಮಲ್ಲರೆಡ್ಡಿ, ಪಿಡಿಒ ನರಸಿಂಗ ಕಾಂಬಳೆ, ಗ್ರಾಪಂ ಸದಸ್ಯರಾದ ಮಲ್ಲಮ್ಮ ಮಲ್ಲಪ್ಪ, ಶಾಂತಮ್ಮ ಚಂದಪ್ಪ, ಹೊನ್ನಪ್ಪ ಯಡ್ಡಳ್ಳಿ, ಸಾಬಣ್ಣ ಚಾಮನಾಳ, ಶಿವರೆಡ್ಡಿ ಗೌಡಪ್ಪನೋರ್, ದೊಡ್ಡ ವೆಂಕಪ್ಪ, ಶಿವಪ್ಪ ಹಳಿಗೇರಿ, ಲಿಂಗಪ್ಪ ಕಿಲ್ಲನಕೇರಿ ಪಾಲ್ಗೊಂಡಿದ್ದರು. ವೆಂಕಟೇಶ ಅಕ್ಕಿ ಸ್ವಾಗತಿಸಿದರು. ಸಾಯಿಬಣ್ಣ ಕುರಕುಂದಾ ನಿರೂಪಿಸಿದರು. ಶರಣು ಅರಿಕೇರಿ ವಂದಿಸಿದರು.