ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡೋಣಗಾಂವ; ಬಾವಿಯ ಕಲುಷಿತ ನೀರು ಖಾಲಿ

Vishwanath S
Updated On : 11 Aug 2013, 12:18 pm

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ವಾಂತಿ ಭೇದಿ ಕಾರಣವಾದ ಕಲುಷಿತ ನೀರು ಕಳೆದ ಎರಡು ದಿನಗಳಿಂದ ಬಾವಿಯಿಂದ ಹೊರ ತೆಗೆಯುವ ಕಾರ್ಯ ಆರಂಭಗೊಂಡಿದೆ.
ಆ.5ರಂದು ಗ್ರಾಮದಲ್ಲಿ ವಾಂತಿ ಭೇದಿ ಉಂಟಾಗಿ 21 ಜನರು ಚಿತ್ತಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದುವರೆಗೆ 48 ಜನರು ಚಿತ್ತಾಪುರ ಹಾಗೂ ಡೋಣಗಾಂವ ಗ್ರಾಮದಲ್ಲಿ ವಾಂತಿ ಭೇದಿಯ ಚಿಕಿತ್ಸೆ ಪಡೆದಿದ್ದಾರೆ.
ಶನಿವಾರ ಗ್ರಾಮದ ಆಯುಷ್ಯ ಆಸ್ಪತ್ರೆಯಲ್ಲಿ ಸಿದ್ಧಲಿಂಗಮ್ಮ ಶರಣಪ್ಪ ಎಂಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ಈ ವಾಂತಿ ಭೇದಿಗೆ ಗ್ರಾಮದ ಹೊಸ ಬಾವಿಯಲ್ಲಿನ ಕಲುಷಿತ ನೀರು ಊರ ಬಾವಿಗೆ ಸಂಗ್ರಹವಾಗಿರುವುದರಿಂದ ವಾಂತಿ ಭೇದಿ ಉಂಟಾಗಿತ್ತು.
ಸುರಕ್ಷತಾ ಕ್ರಮಗಳು: ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಕಲುಷಿತ ನೀರು ಖಾಲಿ ಮಾಡುವಂತೆ ಸೂಚಿಸಿದ್ದರು. ಅದರಂತೆ  ಜೆಇ ರಾಚಣ್ಣ ಹಾಗೂ ಸಿಬ್ಬಂದಿಯೊಂದಿಗೆ ಗ್ರಾಮದಲ್ಲಿ ಠಿಕಾಣಿ ಹೂಡಿ  ಬಾವಿಯಲ್ಲಿನ  ಕಲುಷಿತ ನೀರು ಖಾಲಿ ಮಾಡುವತ್ತ ಕ್ರಮ ಕೈಗೊಂಡಿದ್ದಾರೆ.
ಗ್ರಾಮದ ಜನತೆಗೆ ಟ್ಯಾಂಕರ್‌ಗಳ  ಮೂಲಕ ಭೀಮನಳ್ಳಿ ಗ್ರಾಮದಿಂದ ಶುದ್ಧ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರು ಜನತೆ ಕುಡಿಯಲು ಬಳಸುತ್ತಿದ್ದಾರೆ.ಕಳೆದ ಮಂಗಳವಾರದಿಂದ ಗ್ರಾಮದ ಆಸ್ಪತ್ರೆ ಮತ್ತು ಗ್ರಾಮದ ಸುತ್ತಲೂ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ ಅವರು ಬ್ಲೀಚಿಂಗ್ ಪೌಡರ್ ಸಿಂಪಡಿಸುವ ವ್ಯವಸ್ಥೆ ಮಾಡಿದ್ದಾರೆ.
ವೈದ್ಯರ ತಂಡ ಹಾಗೂ ಕಿರಿಯ ಆರೋಗ್ಯ ಸಹಾಯಕಿ ಶಾಂತಾ, ಪುಷ್ಪಾವತಿ, ರಮೇಶ ಶಿವಶರಣಪ್ಪ ಮೊಕ್ಕಾಂ ಇದ್ದು ಚಿಕಿತ್ಸೆ  ನೀಡುತ್ತಿದ್ದಾರೆ. ಪ್ರಥಮ ಚಿಕತ್ಸೆ ನೀಡಿ ನಿಯಂತ್ರಣವಾಗದಿದ್ದರೆ ಅಂಬುಲೆನ್ಸ ಮೂಲಕ ತಾಲೂಕು ಆಸ್ಪತ್ರೆಗೆ ಕಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಶುದ್ದವಾದ ನಳದ ನೀರು ಸರಬರಾಜು ಮಾಡಬೇಕು ಎಂದು ಗ್ರಾಮದ ಮುಖಂಡರಾದ ಶರಣು ಮೆಂಗನೋರ, ದೇವಪ್ಪ ಅಲ್ಲೂರ್, ಶರಣಪ್ಪ ನಾಟೀಕಾರ್, ಶರಣಬಸಪ್ಪ ವಿಶ್ವಕರ್ಮ, ರಾಯಪ್ಪ, ಯಲ್ಲಾಲಿಂಗ, ಭೀಮರಾಯ ಮರಿಯಪ್ಪ ಬಾಯಿನ್ ಒತ್ತಾಯಿಸಿದ್ದಾರೆ.

ವಾಂತಿ-ಭೇದಿ: 13 ಜನ ಆಸ್ಪತ್ರೆಗೆ ದಾಖಲು
ಚಿತ್ತಾಪುರ: ತಾಲೂಕಿನ ಚಿತ್ತಾಪುರ ಪಟ್ಟಣ ಹಾಗೂ ಬಂಕಲಗಾ, ಇಂಗಳಗಿ, ಮರಗೋಳ, ಮೋಗಲಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶನಿವಾರ ವಾಂತಿ ಭೇದಿ ಕಾಣಿಸಿಕೊಂಡು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 13 ಜನರ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ತಾಪುರದ ಮಹ್ಮದ್ ಅಮೀರ್, ಅಬ್ದುಲ್ ರೆಹಮಾನ, ಸಾಹಿನಾ ಬೇಗಂ, ಅಬಿದಾಬಿ, ರಮೇಶ, ಶರಣಮ್ಮ ಇಂಗಳಗಿ, ರತ್ನಮ್ಮ ಬಂಕಲಗಾ, ವೆಂಕಮ್ಮ ಇಂಗಳಗಿ, ವಾಣಿಶ್ರೀ ಮೋಗಲಾ ತಾಂಡಾ, ಡೋಣಗಾಂವ ಗ್ರಾಮದ 4 ವರ್ಷದ ಬಾಲಕ ದೇವರಾಜ, ಸಿದ್ದಲಿಂಗಮ್ಮ, ದುರ್ಗಪ್ಪ, ರಾಜಮ್ಮ ಮರಗೋಳ ಎನ್ನುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ. ಪುರಸಭೆ ಹಾಗೂ ಗ್ರಾಪಂನವರು ಶುದ್ದವಾದ ಕುಡಿಯುವ ನೀರು ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ವಾಂತಿ ಭೇದಿ ಉಲ್ಬಣಗೊಳ್ಳುತ್ತಿದೆ. ಇದರಿಂದ ದಿನಾಲೂ ವಿವಿಧ ಗ್ರಾಮಗಳಿಂದ 15 ರಿಂದ 20 ಜನ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ದೇವಿಂದ್ರಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement