ಬೈಕ್ಗೆ ಜೀಪ್ ಡಿಕ್ಕಿ: ಇಬ್ಬರ ಸಾವು, ಒಬ್ಬನಿಗೆ ಗಾಯ
ಕನ್ನಡಪ್ರಭ ವಾರ್ತೆ , ಶಹಾಬಾದ್ , ಆ.10
ಶಹಾಬಾದ್ ನಗರದಿಂದ ಹೊನಗುಂಟಾದತ್ತ ವೇಗವಾಗಿ ಹೊರಟಿದ್ದ ಜೀಪ್ಗೆ ಹೊನಗುಂಟಾ ವಡ್ಡರ ವಾಡಿಯಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡಿದ ಪರಿಣಾಮ ಸ್ಥಳದಲ್ಲಿ ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದು, ಬೈಕ್ ಚಾಲಕನಿಗೆ ತೀವ್ರ ಗಾಯವಾಗಿದ್ದು, ಗುಲ್ಬರ್ಗ ಆಸ್ಟತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಶಹಾಬಾದ್ನಿಂದ ಹೊರಟಿದ್ದ ಜೀಪ್ ಸೀಮಿ ಮರಗಮ್ಮ ದೇವಸ್ಥಾನದ ಬಳಿ ಮೂರು ಜನ ಸವಾರರು ಬರುತ್ತಿದ್ದ ಬೈಕ್ ಡಿಕ್ಕಿಗೆ ಹೊಡೆದಿದ್ದರಿಂದ ಲಕ್ಷ್ಮೀಬಾಯಿ ಭೀಮರಾಯ ಕಲಶೆಟ್ಟಿ (36), ಬಾಲಕ ಸಂಗಣ್ಣ ಶರಣಪ್ಪ ಕಲಶೆಟ್ಟಿ (7) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಶರಣಪ್ಪ ಕಲಶೆಟ್ಟಿ ತೀವ್ರವಾಗಿ ಗಾಯಗೊಂಡಿದ್ದರಿಂದ ಅವರನ್ನು ಕೂಡಲೇ 108 ಅಂಬುಲೆನ್ಸ್ ಮೂಲಕ ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಾಯಗೊಂಡ ಶರಣಪ್ಪ ಕಲಶೆಟ್ಟಿ ಶಹಾಬಾದ್ ನಗರ ನಿವಾಸಿಗಳಾಗಿದ್ದು, ಹೊಟ್ಟೆ ಪಾಡಿಗಾಗಿ ಗಣಿ ಪ್ರದೇಶವಾಗಿರುವ ಹೊನಗುಂಟಾದ ವಡ್ಡರವಾಡಿ ಪ್ರದೇಶದಲ್ಲಿ ಚಹಾದ ಹೋಟೆಲ್ ನಡೆಸುತ್ತಿದ್ದರು. ಹೋಟೆಲ್ ವ್ಯಾಪಾರ ಮುಗಿಸಿಕೊಂಡು ಸಂಜೆ ಅಕ್ಕ ಲಕ್ಷ್ಮೀಬಾಯಿ, ಮಗ ಸಂಗಣ್ಣರ ಜೊತೆ ಬೈಕ್ ಮೇಲೆ ಮನೆಗೆ ಬರುತ್ತಿದ್ದಾಗ ಜೀಪ್ ಮೂಲಕ ಜವರಾಯ ಅವರನ್ನು ಬಲಿ ತೆಗೆದುಕೊಂಡಿದೆ.
ಪಲ್ಟಿ: ಜೀಪ್ ಬಂದ ವೇಗಕ್ಕೆ ಬೈಕ್ ಮತ್ತು ಮೃತರು ಸುಮಾರು 50 ಅಡಿ ದೂರದವರೆಗೆ ಜೀಪ್ನ ಅಡಿಗೆ ಸಿಕ್ಕು ಎಳೆದುಕೊಂಡು ಹೋಗಿದ್ದು, ಜೀಪ್ ಸಹ ಪಲ್ಟಿಯಾಗಿದೆ. ಜೀಪ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಜೀಪ್ನಲ್ಲಿ ಯಾರು ಇರದೆ ಇರುವುದರಿಂದ ಹೆಚ್ಚಿನ ಅಪಘಾತ ತಪ್ಪಿದಂತಾಗಿದೆ.
ಅಪಘಾತದ ಸುದ್ದಿ ತಿಳಿದ ನಗರ ಪೊಲೀಸ್ ಠಾಣೆ ಪಿಎಸ್ಐ ರಘು ಎನ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಶರಣಪ್ಪರವರನ್ನು ಆಸ್ಪತ್ರೆಗೆ ಸಾಗಿಸಿದರು.
ಶಾಸಕ ಖರ್ಗೆ ಭೇಟಿ: ಹೊನಗುಂಟಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ ರು. 20 ಸಾವಿರ ಪರಿಹಾರ ಕೊಡಿಸುವುದಾಗಿ ತಿಳಿಸಿ, ಹೆಚ್ಚಿನ ಪರಿಹಾರಕ್ಕೆ ಅಧಿಕಾರಿಗೊಳೊಂದಿಗೆ ಚರ್ಚಿಸುವುದಾಗಿ ಹೇಳಿದರು. ಘಟನಾ ಸ್ಥಳಕ್ಕೆ ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಬಿಜೆಪಿ ಭಂಕೂರ ಶಕ್ತಿ ಕೇಂದ್ರದ ಅಧ್ಯಕ್ಷ ಅನೀಲ್ ಅಲ್ಲಮಶೆಟ್ಟಿ, ಹೊಗುಂಟಾದ ಗ್ರಾಪಂ ಮಾಜಿ ಅಧ್ಯಕ್ಷ ಮಹಿಬೂಬ್ ಪಟೇಲ್, ಘಟನಾ ಸ್ಥಳಕ್ಕೆ ಧಾವಿಸಿ ನೇರವಾದರು.