ವಾಡಿ; ಶಾಲಾ ಕೋಣೆಗಳ ದುರಸ್ತಿಗೆ ಚಾಲನೆ
ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣದ ರೆಸ್ ಕ್ಯಾಂಪ್ ತಾಂಡಾ ಪ್ರದೇಶದಲ್ಲಿರುವ ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಶಾಲಾ ಕಟ್ಟಡದ ದುರಸ್ತಿಗಾಗಿ ರು. 1.60 ಲಕ್ಷ ಮಂಜೂರಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಎಐಡಿಎಸ್‌ಒ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಈ ಬಗ್ಗೆ ಸ್ಥಳೀಯ ಎಐಡಿಎಸ್‌ಒ ವತಿಯಿಂದ ಶಾಲಾ ಕಟ್ಟಡದ ಮಾಳಿಗೆ ಕಾಂಕ್ರೀಟ್ ಕಳಚಿ ವಿದ್ಯಾರ್ಥಿಗಳ ಮೇಲೆ ಬೀಳುತ್ತಿರುವ ಬಗ್ಗೆ, ಕಿಟಕಿ ಬಾಗಿಲು, ಕಿಟಕಿ ಮುರಿದು ಹೋಗಿರುವುದು, ಇಲ್ಲಿ, ಹೆಗ್ಗಣಗಳ ತಾಣವಾಗಿದೆ ಎಂದು ಆರು ತಿಂಗಳಿನಿಂದ ಸತತ ಹೋರಾಟ ನಡೆಸಿದ್ದರು. ಹೋರಾಟದ ಫಲವಾರಿ ಕಟ್ಟಡದ ಅಭಿವೃದ್ಧಿಗಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ರು. 1.60 ಲಕ್ಷ ಮಂಜೂರಾಗಿ ಶಾಲಾ ಕೋಣೆಗಳನ್ನು ರಿಪೇರಿ ಕಾರ್ಯ ನಡೆಸಲಾಗುತ್ತಿದೆ.
ದುರಸ್ತಿ ಪರಿಶೀಲನೆ: ಶಾಲಾ ಕಟ್ಟಡ ದುರಸ್ತಿ ಕಾರ್ಯವನ್ನು ಗುರುವಾರ ಶಾಲೆಗೆ ಭೇಟಿ ನೀಡಿದ ಸಿಆರ್‌ಸಿ ಅಶೋಕ ಭಾಸ್ಕರ್, ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರರವರು ಕಟ್ಟಡದ ದುರಸ್ತಿ ಕಾರ್ಯವನ್ನು ಪರಿಶೀಲನೆ ನಡೆಸಿದರು. ಕಟ್ಟಡದ ಮಾಳಿಗೆ ಸೋರದಂತೆ ಕಾಂಕ್ರೀಟ್ ಹಾಕಲಾಗುತ್ತಿದ್ದು, ಕೆಳಭಾಗದಲ್ಲಿ ಸಿಮೆಂಟಿನಿಂದ ಪ್ಲಾಸ್ಟರ್ ಮಾಡುತ್ತಿರುವುದನ್ನು ಪರಿಶೀಲನೆ ನಡೆಸಿದರು. ನೆಲದ ಮೇಲೆ ಒಡೆದು ಹೋದ ಹಾಸು ಗಲ್ಲುಗಳನ್ನು ಬದಲಿಸಲಾಗುವುದು. ಎಲ್ಲ ವರ್ಗ ಕೋಣೆಗಳಿಗೆ ಹೊಸ ಬೋರ್ಡ್‌ಗಳನ್ನು ನಿರ್ಮಿಸಿ, ಸುಣ್ಣ ಬಣ್ಣದಿಂದ ಶಾಲೆಯನ್ನು ಸಿಂಗರಿಸಲಾಗುವುದು ಎಂದು ಭಾಸ್ಕರ್ ತಿಳಿಸಿದರು.
ಭರವಸೆ: ಈ ಶಾಲೆಯಲ್ಲಿ ಕನ್ನಡ, ಉರ್ದು, ಮರಾಠಿ ಮಾಧ್ಯಮ ಶಾಲೆಗಳು ನಡೆಯುತ್ತಿರುವುದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಯಾದಗಿರಿ ವಾಡಿ ಮುಖ್ಯ ರಸ್ತೆಗೆ ಶಾಲೆ ಅಂಟಿಕೊಂಡಿದ್ದರಿಂದ ಭಾರಿ ವಾಹನಗಳ ಓಡಾಟವು ಹೆಚ್ಚಾಗಿರುವುದರಿಂದ ಶಾಲೆ ಮುಂಭಾಗದಲ್ಲಿ ಕಾಂಪೌಂಡ್ ನಿರ್ಮಿಸಿ, ಗೇಟ್ ಕೂಡಿಸಲಾಗುವುದು. ಶಾಲಾ ಅಂಗಳವನ್ನು ಎತ್ತರಿಸಿ, ಮಳೆ ನೀರು ನಿಲ್ಲದಂತೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ರಮೇಶ ಪಟ್ಟೇದಾರ ಭರವಸೆ ನೀಡಿದರು. ಮರಾಠಿ ಶಾಲೆಯ ಮುಖ್ಯೋಪಾಧ್ಯಾಯ ಸೂರ್ಯಕಾಂತ ಸಾವಳಕರ್ ಉಪಸ್ಥಿತರಿದ್ದರು.
ಹೋರಾಟಕ್ಕೆ ಸಂದ ಜಯ: ಕಳೆದ ಆರು ತಿಂಗಳಿನಿಂದ ಶಾಲಾ ಕಟ್ಟಡದ ದುರಸ್ತಿಗಾಗಿ ಶಾಲಾ ವಿದ್ಯಾರ್ಥಿಗಳು, ಪಾಲಕರನ್ನು ಸಂಘಟಿಸಿ ಶಿಕ್ಷಣ ಇಲಾಖೆ ವಿರುದ್ದ ಸ್ಥಳೀಯ ಸ್ಥಳೀಯ ಎಐಡಿಎಸ್‌ಒ ವತಿಯಿಂದ ನಡೆಸಿದ ಹೋರಾಟಕ್ಕೆ ಶಿಕ್ಷಣ ಇಲಾಖೆ ಸ್ಪಂದಿಸಿ ಶಾಲಾ ಕಟ್ಟಡ ದುರಸ್ಥಿಗೆ ಕ್ರಮ ಕೈಗೊಂಡಿರುವುದು ತಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಎಐಡಿಎಸ್‌ಒ ಕಾರ್ಯದರ್ಶಿ ವಿಠ್ಠಲ್ ರಾಠೋಡ, ಮುಖಂಡ ಶರಣು ಹೇರೂರ ಹರ್ಷ ವ್ಯಕ್ತಪಡಿಸಿದರು.
ಶಾಲಾ ಕಟ್ಟಡ ದುರಸ್ತಿ ಕಾರ್ಯ ಬಹುತೇಕ ಮುಗಿದಿದೆ. ಮರಳು ಲಭ್ಯವಾಗದ ಕಾರಣ ಇನ್ನೊಂದು ತರಗತಿ ಕೋಣೆ ದುರಸ್ತಿ ಬಾಕಿ ಉಳಿದಿದೆ. ಮರಳು ನಿಷೇಧದ ಕಾರಣ ಕಾಮಗಾರಿ ಸ್ಥಗಿತಗೊಂಡಿದ್ದು, ಕೊಣೆ ಕೊರತೆಯಿಂದ ಕೆಲ ಮಕ್ಕಳನ್ನು ಹೊರಗಡೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಬೇಗನೆ ಮರಳು ದೊರಕಿಸಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಶಾಲೆಯ ಮುಖ್ಯಗುರು ಭೀಮಶಾ ಕಡಗಂಚಿ ಮನವಿ ಮಾಡಿದ್ದಾರೆ.