ಸಂಭ್ರಮದ ನಾಗರ ಪಂಚಮಿ
ಹುಣಸಗಿ: ಶನಿವಾರ ಬೆಳಗಿನಿಂದಲೇ ನಾಗಮೂರ್ತಿಗೆ ಹಾಲೆರೆಯುವುದು ಸಾಮಾನ್ಯವಾಗಿ ಕಂಡು ಬಂದಿತು. ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಹಾಗೂ ಬಜಾರ್ ನೀಲಕಂಠೇಶ್ವರ ಇನ್ನಿತರ ಕಡೆಗಳಲ್ಲಿರುವ ನಾಗದೇವನಿಗೆ ನಾರಿಯರು ಹಾಲೆರೆದು ಸಂಭ್ರಮಿಸಿದರು. ಬೆಳಗ್ಗೆಯಿಂದಲೇ ನಾರಿಯರು ದೇವಸ್ಥಾನಗಳಿಗೆ ಗುಂಪು ಗುಂಪುಗಾ ಆಗಮಿಸುತ್ತಾ, ಹಾಲೆರೆದು, ಪ್ರಸಾದ ವಿನಿಮಯ ಮಾಡಿಕೊಳ್ಳುತ್ತಾ ಸಂಭ್ರಮಿಸಿದರು.
ದ್ಯಾಮನಹಾಳ್ಟದಲ್ಲಿ: ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಗ್ರಾಮದ ಜನತೆ ಊರಲ್ಲಿನ ಹನುಮಾನ್ ದೇವಸ್ಥಾನದಲ್ಲಿ ಇರುವ ಕಲ್ಲಿನ ನಾಗರ ವಿಗ್ರಹಕ್ಕೆ ಹಾಲೆರೆದರು. ಈ ಸಂದರ್ಭಲ್ಲಿ ಹಿರಿಯರಾದ ಅನಸೂಬಾಯಿ ಕುಲಕಣರ್, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಬಿರಾದಾರ, ರಾಧಾ ಮೇಟಿ, ಅನ್ನಪೂರ್ಣ ಬಿರಾದಾರ, ಯಂಕು ಕುಲಕರ್ಣಿ, ಲಕ್ಷ್ಮೀಬಾಯಿ ಹೂಗಾರ ಸೇರಿದಂತೆ ಅನೇಕರು ಹಾಲೆರದರು.
ಕಾಮನಟಗಿಯಲ್ಲಿ: ಕಾಮನಟಗಿ ಗ್ರಾಮದಲ್ಲಿಯು ಸಂಭ್ರಮ ಸಡಗರದಿಂದ ನಾಗದೇವನಿಗೆ ಹಾಲೆರದು ಸಂಭ್ರಮಿಸಲಾಯಿತು ಎಂದು ಗ್ರಾಮದ ಹಿರಿಯರಾದ ರಾಧಾಬಾಯಿ ಶ್ಯಾಮರಾವ್ ಜಹಾಗೀರದಾರ ಪತ್ರಿಕೆಗೆ ತಿಳಿಸಿದರು. ಇದೇ ರೀತಿಯಾಗಿ ವಜ್ಜಲ್, ಬಲಶೆಟ್ಟಿಹಾಳ, ಕುಪ್ಪಿ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಲೆರೆಯಲಾಯಿತು.
ಗ್ರಾಮೀಣ ಭಾಗದ ಆಟಗಳು ಬಲುಜೋರು
ಹುಣಸಗಿ: ನಾಗರಪಂಚಮಿ ಬಂದರೆ ಸಾಕು, ಚಿಕ್ಕ ಮಕ್ಕಳಿಗೆ ಉಂಡೆ, ಕಚರ್ಕಾಯಿ, ತಂಬಿಟ್ಟು, ಚಕ್ಕಲಿ ಸೇರಿದಂತೆ ಬಾಯಿಯಲ್ಲಿ ನೀರುರಿಸುವ ತಿನಿಸುಗಳು ತಿನ್ನುವ ಹಂಬಲದಲ್ಲಿದ್ದರೆ, ಯುವಕರೇದ್ದೇ ಯೋಚನೆ ಬೇರೆ, ಗ್ರಾಮಿಣ ಆಟಗಳನ್ನು ಆಡುವುದರ ಜೊತೆಗೆ ಜೂಜು ಕಟ್ಟಿ ಆಡಬಹುದಾದ ಆಟಗಳನ್ನು ಆಟಲು ಹಂಬಲಿಸುತ್ತಿರುತ್ತಾರೆ.
ಹಿಂದೆ ಗ್ರಾಮೀಣ ಆಟಗಳು ಮನೋರಂಜನೆಯ ಕ್ರೀಡೆಯಾಗಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ್, ಇಂಟರ್ನೆಟ್, ವಿಡಿಯೋಗೆವ್ಸ್ ಸೇರಿದಂತೆ ಅನೇಕ ಆಟಗಳು ಮತ್ತು ಮನೋರಂಜನೆಗಳು ಬಂದಿರುವುದರಿಂದ ಹಳೆ ಕಾಲದ ಆಟಗಳು ಮಾಯವಾಗುತ್ತಿರುವುದು ವಿಷಾಧನಿಯ.
ನಾಗರಪಂಚಮಿ ಹಬ್ಬವು ಹೆಣ್ಣುಮಕ್ಕಳಿಗೆ ತವರು ಸೇರುವ ಆತುರದಲ್ಲಿ ಕಾಯುತ್ತಿದ್ದರೆ, ಯುವಕರದ್ದು ಕಡ್ಡಿ ಒಗೆಯುವುದು, ಗುಂಡು ಎತ್ತವುದು, ನಿಂಬೆಹಣ್ಣು ಎಸೆಯುವುದು, ಭಾರ ಎತ್ತುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಯಾರ ಸಹಾಯವಿಲ್ಲದೇ ನಡೆಯುವುದು ಸೇರಿದಂತೆ ಅನೇಕ ಆಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ಹಬ್ಬದ ಸಂಭ್ರಮದಲ್ಲಿ ಗ್ರಾಮೀಣ ಭಾಗದ ಯುವಕರು ಅತ್ಯಂತ ಕಠೋರವಾದ ಜಿದ್ದಾಜಿದ್ದಿನ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ನಾಗರಪಂಚಮಿ ಸಂಭ್ರಮ ಆಚರಿಸುತ್ತಾರೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಈ ಆಟಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದು ಸಂತಸದ ವಿಷಯ. ಆದರೆ ಬಾಜಿ ಕಟ್ಟಿ ಆಡುವುದು ಬೇಸರ ತಂದಿದೆ ಎಂದು ಹಿರಿಯ ಜೀವಿಯ ಅಭಿಪ್ರಾಯವು ಆಗಿತ್ತು. ಏನೇ ಇರಲಿ ಈ ನಾಗರ ಪಂಚಮಿ ಸಂಭ್ರಮದಲ್ಲಿ ಪಟ್ಟಣದ ಕೇರಿಕೇರಿಗಳಲ್ಲಿ ಯುವಕರ ದಂಡು ಅನೇಕ ತರಹದ ಜಿದ್ದಾಜಿದ್ದಿನ ಅಟಗಳಲ್ಲಿ ತಲ್ಲಿನರಾಗಿರುವುದು. ನಾಗರಪಂಚಮಿ ಬಂದರೆ ನಾವೆಲ್ಲ ಒಟ್ಟಾಗಿ ಅನೇಕ ಆಟಗಳನ್ನು ಆಡುತ್ತೇವೆ. ಪಟ್ಟಣದ ಹೊರಗೆ ರಸ್ತೆಯ ಮೇಲೆ ಆಡುವ ಅನೇಕ ಜಿದ್ದಾಜಿದ್ದಿನ ಸ್ಪರ್ಧೆಗಳು ನಮಗೆ ಮುದ ನೀಡುತ್ತವೆ ಎಂದು ಯುವಕನೊಬ್ಬ ತಿಳಿಸುತ್ತಾನೆ.
ಎಲ್ಲೆಡೆ ಜೋಕಾಲಿ ಸಂಭ್ರಮ
ಕೆಂಭಾವಿ: ಜೋಕಾಲಿ ಹಾಂಗ ಜೀವನದಾಗ ಯಾವಾಗಲೂ ಏರಿಳುವು ಎಂಬ ಜನಪದ ಹಾಡಿನಂತೆ ಪ್ರತಿಯೊಂದು ಹಬ್ಬ ಹರಿದಿನಗಳು ಮಾನವ ಜೀವನದ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ ಜೀವನ ಸಾಗಿಸುವ ಸಂದೇಶವನ್ನು ಕೊಡುತ್ತವೆ.
ನಾಗರಪಂಚಮಿ ಹಬ್ಬ ಬಂತೆಂದರೆ ಜೋಕಾಲಿ ಸಂಭ್ರಮ ಎಲ್ಲೆಡೆ ಕಂಡುಬರುತ್ತದೆ. ನಗರ ಪ್ರದೇಶಗಳಲ್ಲಿ ಈ ಜೋಕಾಲಿಯನ್ನು ದೊಡ್ಡ ಕಟ್ಟಡಗಳ ಛಾವಣಿಗೆ ಅಥವಾ ಉದ್ಯಾನವನದಲ್ಲಿ ಕಟ್ಟಿ ಸಂಭ್ರಮಿಸಿದರೆ ಗ್ರಾಮೀಣ ಪ್ರದೇಶದಲ್ಲಿಯ ಜನತೆ ದೊಡ್ಡ ಮರಗಳಿಗೆ ಕಟ್ಟಿ ಜಿದ್ದಾಜಿದ್ದಿನ ಆಟ ಅಡುವ ಮೂಲಕ ಜೋಕಲಿ ಸಂಭ್ರಮವನ್ನು ಆಚರಿಸುತ್ತಾರೆ.
ಮರಗಳು ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸಂರಕ್ಷಿಸುವುದಲ್ಲದೆ ನಮಗೆ ಜೀವಿಸಲು ಅವಶ್ಯವಾದ ಶುದ್ಧ ಗಾಳಿಯನ್ನು ಒದಗಿಸುತ್ತದೆ. ಮರಗಳ ನಾಶ ಕೇವಲ ನಗರ ಪ್ರದೇಶಗಳಿಗೆ ಸೀಮೀತವಾಗಿರದೆ ಈಗ ಗ್ರಾಮೀಣ ಪ್ರದೇಶದಲ್ಲೂ ಮರಗಳು ಮಾಯವಾಗುತ್ತಿವೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಪಟ್ಟಣದಲ್ಲಿ ಈಗ ಎಲ್ಲೆಂದರಲ್ಲಿ ಕಟ್ಟಡಗಳು ತಲೆ ಎತ್ತುತ್ತಿದ್ದು ಇದರಿಂದ ಇದ್ದ ಅಲ್ಪಸ್ವಲ್ಪ ಗಿಡಗಳು ಮಾಯವಾಗಿ ನಾಗರ ಪಂಚಮಿಯ ಜೋಕಾಲಿಗಳು ಆಧುನಿಕ ಸ್ಪರ್ಪ ಪಡೆಯುತ್ತಿವೆ. ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಆರೇರ ಬಡಾವಣೆಯ ಯುವಕರು ಸುಮಾರು 20 ಅಡಿ ಉದ್ದದ 20 ಕಂಬಗಳನ್ನು ನೆಡುವ ಮೂಲಕ ದೊಡ್ಡ ಜೋಕಾಲಿ ನಿರ್ಮಿಸಿ ಅದರಲ್ಲಿ ಮಕ್ಕಳು ಮಹಿಳೆಯರು, ಪುರುಷರು ಹೀಗೆ ಎಲ್ಲರಿಗೂ ಸಮಾನ ಅವಕಾಶ ನೀಡುವ ಮೂಲಕ ಜೋಕಾಲಿ ಆಟವಾಡಿ ಹಬ್ಬದ ಸಂಭ್ರಮವನ್ನು ಆಚರಿಸಿದರು.