'ಗ್ರಂಥ ಪಾಲಕರ ದಿನ' ಆಚರಣೆ
ಸುರಪುರ: ಇಲ್ಲಿಯ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಎಸ್.ಕೆ. ರಂಗನಾಥರ ಜಯಂತಿ ಅಂಗವಾಗಿ ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
ಇಲ್ಲಿನ ಗ್ರಂಥಾಲಯ ಸಹಾಯಕ ವನಕೇರಪ್ಪ ಹಾದಿಮನಿ ಅವರು ರಂಗನಾಥರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಗ್ರಂಥಾಲಯಗಳು ನಮ್ಮ ಬೌದ್ಧಿಕ ಮಟ್ಟವನ್ನು ಎತ್ತರಿಸುತ್ತವೆ. ಇಲ್ಲಿ ಸಿಗುವ ಹಲವಾರು ಪತ್ರಿಕೆ ಮತ್ತು ಮಾಸ ಪತ್ರಿಕೆಗಳು ಅವಶ್ಯವಾದ ಮಾಹಿತಿಯನ್ನು ಒದಗಿಸುತ್ತವೆ. ಒಬ್ಬ ವ್ಯಕ್ತಿ ಎಲ್ಲಾ ಪತ್ರಿಕೆಗಳನ್ನು ಕೊಂಡು ಓದುವುದು ಕಷ್ಟ. ಆದರೆ ಗ್ರಂಥಾಲಯ ಎಲ್ಲಾ ತರಹದ ಪತ್ರಿಕೆಗಳ ಮೂಲಕ ಮಾಹಿತಿ ದೊರಕುತ್ತದೆ ಎನ್ನುವುದನ್ನು ಎಸ್.ಕೆ. ರಂಗನಾಥ ಅವರು ಗ್ರಂಥಾಲಯದ ಉಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಹೀಗಾಗಿ ಅವರನ್ನು ಗ್ರಂಥಾಲಯದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.ಗ್ರಂಥಾಲಯಗಳು ಮಾನವನ ಬೌದ್ಧಿಕ ವಿಕಾಸಕ್ಕೆ ಯಾವ ರೀತಿ ಸಹಕಾರಿ ಎನ್ನುವುದನ್ನು ತಿಳಿಸುವಲ್ಲಿ ಮತ್ತು ಗ್ರಂಥಾಲಯಗಳ ಪಾತ್ರ ಹಾಗೂ ಸೇವೆಯ ಬಗ್ಗೆ ಅವರು ನೀಡಿದ ಕೊಡುಗೆಯನ್ನು ಓದುಗರಿಗೆ ವಿವರಿಸಿದರು.
ಗ್ರಂಥಾಲಯ ಸಿಬ್ಬಂದಿ ದತ್ತುರಾವ ಕುಲಕರ್ಣಿ, ಓದುಗರಾದ ತಿಮ್ಮಣ್ಣ ಸಾಹು ಆಲ್ದಾಳ, ಸುಭಾಶ್ಚಂದ್ರ ದೇವರಗೋನಾಲ, ಹುಲಗಪ್ಪ ಇತರರಿದ್ದರು.