ಜೋಳದ ಬಂಡಿ ಎಳೆದ ಸಾಹಸಿಗಳಿಗೆ ಸನ್ಮಾನ
ಸುರಪುರ: ನಾಗರಪಂಚಮಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನಿಂಬೆಹಣ್ಣು ಎಸೆಯುವುದು, ಭಾರ ಎತ್ತುವುದು ಹೊರುವುದು ಮತ್ತು ಎತ್ತಿನ ಬಂಡಿಗಳಲ್ಲಿ ಧಾನ್ಯ ತುಂಬಿದ ಚೀಲಗಳನ್ನು ಹಾಕಿ ದೂರದವರೆಗೆ ಎಳೆಯುವುದು ಸೇರಿದಂತೆ ಇತರೆ ಶಕ್ತಿ ಪ್ರದರ್ಶನದ ಜಿದ್ದಿನ ಆಟದೊಂದಿಗೆ ಮೋಜು ಪಡುವುದು ಸಾಮಾನ್ಯ. ಇದು ಹಬ್ಬ ಮುಗಿದು ವಾರದವರೆಗೂ ಇಂತಹ ಜಿದ್ದಿನಾಟಗಳು ನಡೆಯುತ್ತಿವೆ.
ತಾಲೂಕಿನ ಹೆಮನೂರು ಗ್ರಾಮದ ನಾಲ್ವರು ಯುವಕರು ಮಂಗಳವಾರ 6 ಕ್ವಿಂಟಲ್ ಜೋಳದ ಚೀಲವನ್ನು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಎಳೆದು ತಂದು ತಮ್ಮ ಸಹಾಸ ಮರೆದು ಜನರ ಗಮನ ಸೆಳೆದರು.
ಗ್ರಾಮದಿಂದ 10 ಕಿಮೀಗೂ ಅಧಿಕ ದೂರದಲ್ಲಿರುವ ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನದವರೆಗೆ ಎಳೆದು ನಿಗದಿತ ಸಮಯದಲ್ಲಿ ತಲುಪಿ ಜನರ ಮೆಚ್ಚುಗೆಗೆ ಪಾತ್ರರಾದರು.
ದಾರಿಯುದ್ದಕ್ಕೂ ಬರುವ ಶಕಾಪುರ, ಸತ್ಯಂಪೇಟ ಗ್ರಾಮಗಳಲ್ಲಿ ಯುವಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅನೇಕರು ಈ ಯುವಕರನ್ನು ಹುರಿದುಂಬಿಸುತ್ತಾ ಶಕ್ತಿ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು. ಯುವಕರ ಸಾಹಸಕ್ಕೆ ಪಟ್ಟಣದ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ನಂತರ ಗ್ರಾಮಸ್ಥರು ಶಾಸಕರ ನಿವಾಸಕ್ಕೆ ತೆರಳಿ ತಮ್ಮ ಸಾಹಸದ ಬಗ್ಗೆ ತಿಳಿಸಿದರು.
ಯುವಕರ ಸಾಹಸಕ್ಕೆ ಶಾಸಕರ ಸಹೋದರ ರಾಜಾ ಮೌನೇಶ್ವರ ನಾಯಕ ಮತ್ತು ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಸಾಹಸಿ ನಾಲ್ಕು ಜನ ಯುವಕರಿಗೆ ಬಟ್ಟೆ ನೀಡಿ ಸನ್ಮಾನಿಸಿದರು. ಗ್ರಾಮದ ದೇವಣ್ಣ ದೊರೆ, ಭೀಮನಗೌಡ, ವೆಂಕೋಬ ಬಿರಾದಾರ್, ಹಣಮಂತ್ರಾಯ, ಶೇಶಪ್ಪ ಮಕಾಶಿ, ತಿಮ್ಮಣ್ಣ, ಯಂಕೋಬ, ಮಲ್ಲುಯಾದವ ಪೇಠ ಅಮ್ಮಾಪುರ, ಹಣಮಂತ್ರಾಯ ಮಕಾಶಿ, ಭೀಮಣ್ಣ ಅರಳಹಳ್ಳಿ ಇತರರಿದ್ದರು.