ಬಂಡವಾಳಶಾಹಿಗಳ ಹಿಡಿತದಲ್ಲಿ ಕಾಂಗ್ರೆಸ್- ಬಿಜೆಪಿ: ಆರೋಪ
ಗುಲ್ಬರ್ಗ/ಶಹಾಬಾದ್, ಆ.13
ಕೋಮುವಾದವನ್ನು ಪೋಷಿಸುವಲ್ಲಿ ಮತ್ತು ಜನ ಸಾಮಾನ್ಯರ ಐಕ್ಯತೆಯನ್ನು ಮುರಿಯುವಲ್ಲಿ ಒಂದೇ ಮುಖದ ಎರಡು ನಾಣ್ಯಗಳಂತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ದೇಶದ ಬಂಡವಾಳಶಾಹಿಗಳ ಹಿಡಿತದಲ್ಲಿವೆ ಎಂದು ಎಸ್ಯುಸಿಐ-ಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಆರೋಪಿದರು.
ವಾಡಿ ಪಟ್ಟಣದ ನ್ಯಾಷನಲ್ ಐಟಿಐ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ಯುಸಿಐ ಕಮ್ಯೂನಿಸ್ಟ್ ಪಕ್ಷದ ಸಂಸ್ಥಾಪಕ ಕಾಮ್ರೇಡ್ ಶಿವದಾಸ ಘೋಷ ಅವರ 37ನೇ ಸ್ಮಾರಕ ಸಭೆ ಉದ್ಘಾಟಿಸಿ ಮಾತನಾಡಿದರು.
ಬೆಲೆ ಏರಿಕೆ, ನಿರುದ್ಯೋಗ: ರಾಜಕೀಯ ಪಕ್ಷಗಳು ಇಂದು ಜನ ಸೇವೆ ಹೆಸರಿನಲ್ಲಿ ಟಾಟಾ, ಬಿರ್ಲಾ, ಅಂಬಾನಿಯಂಥಹ ಶ್ರೀಮಂತರ ಪಾದ ಸೇವೆಯೇ ತಮ್ಮ ಪರಮ ಗುರಿಯನ್ನಾಗಿಸಿಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗೆಹರಿಸಲಾಗುತ್ತಿಲ್ಲ ಎಂದರು.
ಸಿಗದ ಪರಿಹಾರ: ಇಂದು ಖಾಸಗೀಕರಣದಿಂದ ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಉದ್ದಿಮೆಗಳಾಗುತ್ತಿವೆ. ಕಳೆದ 65 ವರ್ಷಗಳಿಂದ ಚುನಾವಣೆಗಳು ನಡೆಯುತ್ತಿವೆ. ಆದರೆ, ಜನರ ದಾರಿದ್ರ್ಯ, ಬಡತನಗಳಿಗೆ ಪರಿಹಾರ ಸಿಕ್ಕಿಲ್ಲ.
ಇದಕ್ಕೆ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಕಾರಣವೆಂದು ಹರಿಹಾಯ್ದರು.
ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡಿದ್ದರು. ಗುಂಡಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.