ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಬೇಕು: ಹಳ್ಳೂರ
ಹುಣಸಗಿ: ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಬೆಳಸಲು ಪ್ರತಿಯೊಬ್ಬ ಪಾಲಕರು ಸಂಕಲ್ಪ ಮಾಡಬೇಕು ಎಂದು ಮನೆಯಲ್ಲಿ ಮಹಾಮನೆಯ ಸಂಚಾಲಕ ಹಾಗೂ ಸಾಹಿತಿ ವೀರೇಶ ಹಳ್ಳೂರ ಸಲಹೆ ನೀಡಿದರು.
ಪಟ್ಟಣದ ಸಂಗಣ್ಣ ಕುಂಬಾರ ಅವರ ನಿವಾಸದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಹಳ್ಳೂರ ಮಾತನಾಡಿದರು. ಬಣ್ಣದ ಬದುಕಿಗೆ ಮಾರುಹೋಗಿ, ಕೀಳು ಅಭಿರುಚಿಗೆ ಅಂಟಿಕೊಂಡು ಹರ ಗುರು ಚರಮೂರ್ತಿಗಳನ್ನು ಮರೆತಿದ್ದೇವೆ. ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಒಳ್ಳೆಯ ವಿಚಾರಗಳ ಬಗ್ಗೆ ಚರ್ಚಿಸಿದಾಗ ಮಕ್ಕಳ ಜ್ಞಾನಾರ್ಜನೆಗೂ ಪುಷ್ಠಿ ನೀಡಿದಂತಾಗುತ್ತದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ ಅಮರಯ್ಯಸ್ವಾಮಿ ಜಾಲಿಬೆಂಚಿ, ಶರಣರು ಮರುಳ ಶಂಕರನನ್ನು ಕುರಿತು 12 ವರ್ಷಗಳ ಕಾಲ ಯಾರ ಕಣ್ಣಿಗೂ ಕಾಣದಂತೆ ಸೇವೆ ಮಾಡಿದ ಪರಿಯನ್ನು ಮಾರ್ಮಿಕವಾಗಿ ವಿವರಿಸಿದರು.
ಶಿವುಕುಮಾರ ಬಂಡೋಳಿ ಮಾತನಾಡಿ, ನಮ್ಮ ನಡೆ, ನುಡಿ, ಸಮಾಜಕ್ಕೆ ಮಾದರಿಯಾಗಿರಬೇಕು. ಲಿಂಗಪೂಜೆಯನ್ನು ದಿನಾಲೂ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವರಾಜ ಚಂದಾ, ಬಸಲಿಂಗಪ್ಪ ಕುಂಬಾರ, ಶಿವಮಾನಪ್ಪ ಪರಂಪೂರ, ನೀಲಯ್ಯಸ್ವಾಮಿ ದೇಸಾಯಿಗುರು, ಡಾ. ಮೋಟಗಿ ಇತರರು ಇದ್ದರು. ವಿದ್ಯಾಶ್ರೀ ಸ್ವಾಗತಿಸಿದರು. ಶಿವುಕುಮಾರ ಜವಳಿ ವಂದಿಸಿದರು.