ಹೈ-ಕ ಜಿಲ್ಲೆಗಳಲ್ಲಿ ವಿದ್ಯುತ್ ಬರ ತೀವ್ರ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕದಲ್ಲೀಗ ಜನತೆ ಮಳೆಯಲ್ಲೂ ಬೆವರುವಂತಾಗಿದೆ. ಅನಿಯಮಿತ ಕರೆಂಟ್ ಕಡಿತವೇ ಈ ಸ್ಥಿತಿಗೆ ಕಾರಣ. ಮಳೆ- ನೆರೆಯಿಂದಾಗಿ ಜಲವಿದ್ಯುತ್ ಉತ್ಪಾದನೆ ಸೌಕರ್ಯ ಹೊಂದಿರುವ ಜಲಾಶಯಗಳೆಲ್ಲ ತುಂಬಿ ತುಳುಕುತ್ತಿದ್ದರೂ, ಜೆಸ್ಕಾಂಗೆ ಮಾತ್ರ ಕರೆಂಟ್ ಬರ ಅಮರಿಕೊಂಡದ್ದು ದುರಂತ.
ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬರುವ ಹೈ- ಕ ನೆಲದ ಗುಲ್ಬರ್ಗ, ಬೀದರ್, ಬಳ್ಳಾರಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಕರೆಂಟ್ ಕಣ್ಣಾಮುಚ್ಚಾಲೆಯಾಡುತ್ತಿದೆ.
ಭಾರಿ ಖೋತಾ: ಜೆಸ್ಕಾಂ ವ್ಯಾಪ್ತಿಯಲ್ಲಿರುವ ಎಲ್ಲಾ ತರಹದ ವಿದ್ಯುತ್ ಗ್ರಾಹಕರನ್ನು ಸೇರಿಸಿಕೊಂಡು ಹೇಳುವುದಾದಲ್ಲಿ ನಿತ್ಯ 900 ಮೆವ್ಯಾ ದಿಂದ 1000 ಕ್ಕೂ ಅಧಿಕ ಮೆಗಾ ವ್ಯಾಟ್ ವಿದ್ಯುತ್ ಇಲ್ಲಿ ಬೇಕು. ಆದರೆ ಸದ್ಯ ಜೆಸ್ಕಾಂಗೆ ವಿವಿಧ ಮೂಲಗಳಿಂದ ಲಭ್ಯವಿರುವ ವಿದ್ಯುತ್ 500 ರಿಂದ 600 ಮೆಗಾ ವ್ಯಾಟ್ ಮಾತ್ರ ಬೇಡಿಕೆ. ಪೂರೈಕೆಗೆ ಅಜಗಜಾಂತರ ಅಂತರ. ಇದರಿಂದಾಗಿಯೇ ಕಂಪನಿ ವ್ಯಾಪ್ತಿಯಲ್ಲಿ ಈ ಮಳೆಗಾಲದಲ್ಲಿ, ಶ್ರಾವಣದ ಪವಿತ್ರ ತಿಂಗಳಲ್ಲಿ ಕಾರ್ಗತ್ತಲು ಅಮರಿಕೊಂಡಿದೆ. ಜೆಸ್ಕಾಂ ಬಳ್ಳಾರಿ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು, ಪವನ ವಿದ್ಯುತ್, ಉಡುಪಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ತನ್ನ ಬೇಡಿಕೆಗೆ ತಕ್ಕಂತೆ ವಿದ್ಯುಚ್ಚಕ್ತಿ ಖರೀದಿಸುತ್ತಿದೆ. ಈ ಮೂಲಗಳಲ್ಲೇ ವಿದ್ಯುತ್ ಉತ್ಪಾದನೆ ಪಾತಾಳ ಕಂಡಿದ್ದರಿಂದ ಕಂಪನಿಗೆ ಭಾರಿ ತೊಂದರೆ ಎದುರಾಗಿದೆ.
ಎಲ್ಲೆಡೆ ಹಾಹಾಕಾರ: ಕಂಪನಿ ಎದುರಿಸುತ್ತಿರುವ ಈ ವಿದ್ಯುಚ್ಚಕ್ತಿ ಖೋತಾ ಅದರ ವ್ಯಾಪ್ತಿಯ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ತುಂಬ ತೊಂದರೆಗಳಿಗೆ ಎಡೆಮಾಡಿಕೊಟ್ಟಿದೆ. ನಗರ ಪ್ರದೇಶದಲ್ಲಂತೂ ಕರೆಂಟ್ ಅದ್ಯಾವಾಗ ಮಾಯವಾಗುವುದೋ ಎಂಬ ಅನಿಶ್ಚಿತತೆ ಉಂಟಾಗಿದೆ. ಗುಲ್ಬರ್ಗ ನಗರದಲ್ಲೇ ನಿತ್ಯ ಬೆಳಗಿನ 2 ಗಂಟೆ, ಮಧ್ಯಾಹ್ನ 3 ಗಂಟೆ ಹಾಗೂ ಸಂಜೆ ಹೊತ್ತು 2 ಗಂಟೆ ಮತ್ತು ತಡರಾತ್ರಿ 1.30 ಗಂಟೆ ಹೀಗೆ 8 ರಿಂದ 9 ಗಂಟೆಯಷ್ಟು ಅವಧಿ ಕರೆಂಟ್ ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ನಗರ ವಿದ್ಯುತ್ ಬಳಕೆದಾರರು ಕಂಗಾಲಾಗಿದ್ದಾರೆ. ಇಷ್ಟೊಂದು ಅನಿಶ್ಚಿತತೆ ಬೇಸಿಗೆಯಲ್ಲಿಯೂ ಅನುಭವಿಸಿರಲಿಲ್ಲ. ಈಗ್ಯಾಕೆ ಹೀಗೆ ಜೆಸ್ಕಾಂ ಕಂಪನಿಯವರು ಯಾಕಿಷ್ಟು ಕಳಪೆ ಸೇವೆ ನೀಡುತ್ತಿದ್ದಾರೆಯೋ ಎಂದು ಒದ್ದಾಡುವಂತಾಗಿದೆ.
ಹಳ್ಳಿಗರ ಗೋಳು ಕೇಳುವವರೇ ಇಲ್ಲ: ತಾಲೂಕು ಹಾಗೂ ಹಳ್ಳಿಗಾಡಲ್ಲಂತೂ ಕರೆಂಟ್ ಅದ್ಯಾವಾಗ ಬರುತ್ತದೋ, ಹೋಗುತ್ತದೋ ಗೊತ್ತೇ ಇಲ್ಲದಂತಹ ಆಯೋವುಯ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ 6 ಗಂಟೆಕಾಲ ಮೂರು ಫೇಸ್ ವಿದ್ಯುತ್ ಕೊಡುವಾಗಿ ಹೇಳಿದ್ದ ಜೆಸ್ಕಾಂ ಇದೀಗ ಹಳ್ಳಿಗಾಡಿಗೆ 2 ಗಂಟೆಯೂ ಕರೆಂಟ್ ಕೊಡಲಾರದಂತಾಗಿದೆ. ಈ ಬೆಳವಣಿಗೆ ಅಲ್ಲಿನ ಕೃಷಿ ವಲಯಕ್ಕೆ ಬಿಸಿ ತಟ್ಟುವಂತೆ ಮಾಡಿದೆ.
ರೈತರಂತೂ ಇತ್ತ ಸರಿಯಾಗಿ ಮಳೆಯೂ ಆಗದೆ, ಅತ್ತ ಕರೆಂಟ್ ಕೈಕೊಡುತ್ತಿರುವುದರಿಂದ ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದಾರೆ. ಬಾವಿಯಲ್ಲಿ ನೀರಿದೆ. ಮಳೆ ಬಾರದ ಸಂದರ್ಭವಾದ್ದರಿಂದ ಬೆಳೆಗೆ ನೀರು ಬಿಡೋಣ ಅಂದರೂ ಕರೆಂಟ್ ಇಲ್ಲದಂತಾಗಿದೆ ಎಂದು ರೈತರು ಗೊಣಗುತ್ತಿದ್ದಾರೆ.
ಕಗ್ಗತ್ತಲು: ಕಳೆದೆರಡು ವಾರದಿಂದ ಕರೆಂಟ್ ಬರ ಎದುರಾಗಿ ಎಲ್ಲಾ ವರ್ಗದ ಗ್ರಾಹಕರೆಲ್ಲರೂ ಕಗ್ಗತ್ತಲಲ್ಲಿ ಸಿಲುಕಿದ್ದರೂ, ಜೆಸ್ಕಾಂ ಇಂದಿಗೂ ಅಧಿಕೃತವಾಗಿ ತಾನು ಎದುರಿಸುತ್ತಿರುವ ಕರೆಂಟ್ ಬರ, ತನ್ನಲ್ಲಿನ ಬೇಡಿಕೆ, ಲಭ್ಯವಿರುವ ಕರೆಂಟ್... ಇತರೆ ವಿಷಯಗಳ ಬಗ್ಗೆ ಯಾವುದೇ ಹೇಳಿಕೆ ನೀಡದೆ ಮೌನವಾಗಿದೆ. ಕಂಪನಿಯ ಈ ಮೌನ 6 ಜಿಲ್ಲೆಗಳಲ್ಲೆಲ್ಲಾ ಹರಡಿರುವ ವಿದ್ಯುತ್ ಗ್ರಾಹಕರನ್ನು ಕೆಣಕುವಂತೆ ಮಾಡಿದೆ. ವಿದ್ಯುತ್ ಯಾಕಿಲ್ಲ? ನಿರಂತರ ವಿದ್ಯುತ್ ಕಡಿತ ಯಾಕೆ? ಎಂದು ಕಂಪನಿಯ ದೂರು ವಿಭಾಗಕ್ಕೆ ಕರೆ ಮಾಡಲೆಂದು ಹೋದರೂ ಸಹ ಐವಿಆರ್ಎಸ್ ಧ್ವನಿ ಸ್ಪಂದನೆ ತಂತ್ರಜ್ಞಾನದ ನೆರವಿನಿಂದ ದೂರು ದಾಖಲಿಸುವ ವ್ಯವಸ್ಥೆ ಕಂಪನಿ ಮಾಡಿದ್ದರಿಂದ ದೂರು ದಾಖಲಿಸುವುದು ಕಷ್ಟದ ಕಾಯಕವಾಗಿದೆ. ಹೀಗಾಗಿ ಕಂಪನಿ ವ್ಯಾಪ್ತಿಯ 6 ಜಿಲ್ಲೆಗಳ ವಿದ್ಯುತ್ ಗ್ರಾಹಕರು ಕರೆಂಟ್ ಇಲ್ಲದೆ ಮಳೆಯಲ್ಲಿಯೂ ಬೆವರು ತರಿಸುವಂತಾಗಿರುವ ತಮ್ಮ ದುರವಸ್ಥೆಯನ್ನು ತಾವೇ ಹಳಿದುಕೊಳ್ಳುತ್ತಿದ್ದಾರೆ.
ಜೆಸ್ಕಾಂಗೆ ಹೇಳುವವರು ಕೇಳುವವರು ಇಲ್ಲೇನ್ರಿ?
ಬೇಕಾಬಿಟ್ಟಿ ಕರೆಂಟ್ ಕಡಿತ ಮಾಡಿ ಜನರನ್ನು ಗೋಳಾಡಿಸುತ್ತಿರುವ ಜೆಸ್ಕಾಂಗೆ ಹೇಳುವವರು, ಕೇಳುವವರು ಇಲ್ಲದಂತೆ ಕಾಣುತ್ತಿದೆ. ಕಂಪನಿಯವರು ತಮಗಿರುವ ಇತಿಮಿತಿ ಮೀರಿ ವರ್ತಿಸುತ್ತಿದ್ದಾರೆ. ಕಳೆದೆರಡು ವಾರದಿಂದ ಕರೆಂಟ್ ಕಣ್ಣಾಮುಚ್ಚಾಲೆ ಕಾಟ ಅನುಭವಿಸಿ ಸುಸ್ತಾಗಿದ್ದೇವೆ. ಕಂಪನಿ ಈ ಕೆಟ್ಟ ಸೇವೆಗೆ ಯಾವುದೇ ಹೇಳಿಕೆ ನೀಡದೆ ಸುಮ್ಮನಿದೆ. ಕಂಪನಿ ಇಂತಹ ವರ್ತನೆ ಬಿಟ್ಟು ಆಗುತ್ತಿರುವ ತೊಂದರೆಗೆ ಕಾರಣವೇನು ಎಂಬುದನ್ನು ಅಧಿಕೃತವಾಗಿ ಗ್ರಾಹಕರೊಂದಿಗೆ ಹೇಳಿಕೊಳ್ಳಬಾರದೆ ಹೆಚ್ಚಿನ ವಿದ್ಯುತ್ ಅನ್ಯ ಮೂಲಗಳಿಂದ ಖರೀದಿಸಿ ಕಂಪನಿ ಗ್ರಾಹಕರಿಗೆ ಎದುರಾಗಿರುವ ತೊಂದರೆ ನೀಗಿಸಲಿ. ಇದೆಲ್ಲ ಬಿಟ್ಟು ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡುತ್ತ ಹೊರಟರೆ ಜನ ರೊಚ್ಚಿಗೆದ್ದು ಪ್ರತಿಭಟನೆ ಮಾಡಬೇಕಾಗುತ್ತದೆ.
-ಸತ್ಯನಾರಾಯಣ ಭಟ್ ಹಲಕರ್ಟಿ, ವಕೀಲರು, ಗುಲ್ಬರ್ಗ
ಇಂದು ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ ಗುಲ್ಬರ್ಗ ನಗರದ 11 ಕೆ.ವಿ ಬಸವೇಶ್ವರ ಫೀಡರ್ ಮೇಲೆ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವ ಪ್ರಯುಕ್ತ ಆ.14ರಂದು ಬೆಳಗ್ಗೆ 9 ರಿಂದ ಸಂಜೆ 5ಗಂಟೆಯ ವರೆಗೆ ವಿಶ್ವಕರ್ಮ, ಮರಗಮ್ಮ ದೇವಾಲಯ, ಹನುಮಾನ ದೇವಾಲಯ, ಜಿಡಿಎ (ರಾಜಾಪುರ) ಶಕ್ತಿನಗರ ಶಹಾಬಾದ್ ರಸ್ತೆ, ನೃಪತುಂಗಾ ಕಾಲೋನಿ, ಅಂಬೇಡ್ಕರ್ ವಸತಿ ನಿಲಯ, ಸರ್ವೋದಯ ನಗರ, ರಾಜಾಪುರ, ಪ್ರಶಾಂತನಗರ ಎ ಮತ್ತು ಬಿ ಮತ್ತು ಜಿ.ರಾಮಕೃಷ್ಣ ನರ್ಸಿಂಗ್ ಕಾಲೇಜು ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.